Advertisement
ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿ, ತುಂಗಭದ್ರಾ ಜಲಾಶಯ 12 ಲಕ್ಷ ಎಕರೆ ರೈತರಿಗೆ ನೀರು ಒದಗಿಸುತ್ತದೆ. ಈ ಜಲಾಶಯಕ್ಕೆ ದೊಡ್ಡ ಇತಿಹಾಸವಿದೆ. ಎಲ್ಲ ಕಾಲದಲ್ಲೂ ಈ ಜಲಾಶಯ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ನಿನ್ನೆ ರಾತ್ರಿ 12.50 ರ ವೇಳೆಗೆ 10 ಗೇಟ್ ಗಳು ಕಾರ್ಯ ನಿರ್ವಹಿಸುತ್ತಿರುವ ವೇಳೆ 19 ನೇ ಗೇಟ್ ಮುರಿದು ಅಪಾರ ಪ್ರಮಾಣದ ನೀರು ನದಿಗೆ ಹೋಗಿರುವ ಮಾಹಿತಿಯನ್ನು, ಗೇಟ್ ಮುರಿದ ವಿಷಯವನ್ನು ತಕ್ಷಣ ಸಚಿವ ತಂಗಡಗಿಯಿಂದ ನನಗೆ ಮಾಹಿತಿ ದೊರೆಯಿತು. ಅವರು ಡ್ಯಾಂಗೆ ಅಪಾಯವಾಗುವ ಮುನ್ನೂಚನೆ ಅರಿತು ತಕ್ಷಣ ನನಗೆ ಮಾಹಿತಿ ನೀಡಿದರು ಎಂದರು.
Related Articles
Advertisement
ಮುರಿದ ಗೇಟ್ ಕಾಮಗಾರಿ ತ್ವರಿತವಾಗಿ ಮುಗಿಸಿ, ನೀರು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ರೈತರು ನೀರು ಇಲ್ಲ ಅಂತ ಗಾಬರಿ ಪಟ್ಟುಕೊಳ್ಳಬೇಕಿಲ್ಲ. ನಾವೆಲ್ಲರೂ ಒಟ್ಟಾಗಿ ನಿಂತುಕೊಂಡು ರೈತರಿಗೆ ನೀರು ಕೊಡಲು ಮೊದಲ ಆದ್ಯತೆ ನೀಡುತ್ತೇವೆ. ತುಂಗಭದ್ರಾ ಜಲಾಶಯದ ಗೇಟ್ ಮುರಿದಿರುವುದು ಗಂಭೀರ ವಿಚಾರ, ಈ ಸಂಪತ್ತನ್ನು ನಾವು ಕಾಪಾಡಬೇಕು ಎಂದರು.
ಯಾರನ್ನು ಸದ್ಯಕ್ಕೆ ಈ ಸ್ಥಳಕ್ಕೆ ಬಿಡುವುದಿಲ್ಲ. ಈ ಡ್ಯಾಂ ಆ. 13 ನೇ ತಾರೀಖು ನಾನು ಮತ್ತು ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮ ಮುಂದೂಡಿದ್ದೇವೆ. ಮೊದಲು ಮುರಿದ ಗೇಟ್ ರಿಪೇರಿ ಮಾಡಿ ರೈತರನ್ನು ಬದುಕಿಸುವ ಕೆಲಸ ಮಾಡುತ್ತೇವೆ. ನಮ್ಮ ಅಧಿಕಾರಿಗಳು ಈ ವಿಚಾರದಲ್ಲಿ ಪ್ರತಿಕ್ಷಣ ಕೆಲಸ ಮಾಡುತ್ತಿದ್ದಾರೆ. ಬೋರ್ಡ್ ಜಲಾಶಯವನ್ನು ಕಳೆದ ಹಲವು ವರ್ಷಗಳಿಂದ ನಿರ್ವಹಣೆ ಮಾಡುತ್ತಿದೆ. ಸದ್ಯಕ್ಕೆ ಗೇಟ್ ನಿರ್ಮಾಣ ಮಾಡುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ, ಯಾವ ಅಧಿಕಾರಿಯನ್ನು ಸದ್ಯಕ್ಕೆ ಹೊಣೆ ಮಾಡುವುದಿಲ್ಲ. ಬೇರೆ ಜಲಾಶಯಗಳಿಗೆ ಎರಡು ಗೇಟ್ ಗಳಿವೆ. ಇಲ್ಲಿ ಒಂದಿರುವುದರಿಂದ ಸಮಸ್ಯೆಯಾಗಿದೆ. ನವಲಿ ಜಲಾಶಯ ನಿರ್ಮಾಣ ಮಾಡುವುದು ನಮ್ಮ ಬದ್ಧತೆ, ಅದನ್ನು ಮಾಡಿಯೇ ತೀರುತ್ತೇವೆ ಎಂದರು.
ಈ ವೇಳೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ನಾಲ್ಕು ಜಿಲ್ಲೆಗಳ ಶಾಸಕ, ಸಂಸದರಿದ್ದರು.
ಆತಂಕ ಬೇಡ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳನ್ನು 6.50 ಲಕ್ಷ ಕ್ಯುಸೆಕ್ ವರೆಗೆ ನೀರು ಹೊರಬಿಡುವಂತೆ ವಿನ್ಯಾಸಗೊಳಿಸಿ ನಿರ್ಮಿಸಲಾಗಿದ್ದು, ಜಲಾಶಯದ ಇತಿಹಾಸದಲ್ಲಿ ಈವರೆಗೆ 1992ರ ಡಿಸೆಂಬರ್ ನಲ್ಲಿ ಮಾತ್ರ 3.65 ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು. ಹಾಗಾಗಿ ಕೆಳಭಾಗದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಟಿಬಿ ಬೋರ್ಡ್ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ತಿಳಿಸಿದ್ದಾರೆ.