ಹುಬ್ಬಳ್ಳಿ: ಆರೋಗ್ಯಕ್ಕೆ ಮಾರಕವಾಗಬಹುದಾದ ಕೆಲಸದಲ್ಲಿ ತೊಡಗುವ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮಹಾನಗರದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ, ಇತರೆ ಸೌಲಭ್ಯಗಳಿಲ್ಲವಾಗಿದೆ. ಅನೇಕ ಪೌರ ಕಾರ್ಮಿಕರಿಗೆ ಕಳೆದೊಂದು ವರ್ಷದಿಂದ ನಿತ್ಯ ಉಪಾಹಾರ ಭತ್ಯೆಯೇ ಇಲ್ಲವಾಗಿದೆ.
ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಕೈಗೊಳ್ಳಲಾಗುತ್ತಿದೆ. ಆದರೆ, ಅವುಗಳ ಅನುಷ್ಠಾನ ಎಷ್ಟರ ಮಟ್ಟಿಗಾಗಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಪೌರ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಕುರಿತಾಗಿ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಸೌಲಭ್ಯ ನೀಡಲಾಗಿದೆ ಎನ್ನುತ್ತಾರೆ. ಪೌರಕಾರ್ಮಿಕರಿಗೆ ಮಾತ್ರ ಅವು ಸಮರ್ಪಕವಾಗಿ ತಲುಪುತ್ತಿಲ್ಲ. ಪಾಲಿಕೆ-ಪೌರಕಾರ್ಮಿಕರ ನಡುವಿನ ಗುತ್ತಿಗೆದಾರರ ಮಟ್ಟದಲ್ಲಿ ಅವು ನಿಲ್ಲುತ್ತಿವೆಯೇ? ಈ ಬಗ್ಗೆ ಸ್ಪಷ್ಟತೆ ಬೇಕಾಗಿದೆ.
2016ರಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೈಸೂರ ಮಹಾನಗರ ಪಾಲಿಕೆಯ ಮಾದರಿಯಲ್ಲಿ ಹು-ಧಾ ಮಹಾನಗರ ಪೌರ ಕಾರ್ಮಿಕರಿಗೆ ಬೆಳಗಿನ ಉಪಾಹಾರ ನೀಡಬೇಕೆಂದು ಠರಾವು ಪಾಸು ಮಾಡಲಾಗಿತ್ತು. ಕೆಲ ದಿನಗಳಲ್ಲಿ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ತಲುಪಿಸುವುದಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಕೆಲ ತೊಂದರೆ ಹಾಗೂ ಕಾರಣಗಳಿಂದ ಉಪಾಹಾರದ ಬದಲಾಗಿ ಉಪಾಹಾರ ಭತ್ಯೆ ಎಂದು ಮಾಸಿಕ 600 ರೂ.ಗಳನ್ನು ಪೌರ ಕಾರ್ಮಿಕರಿಗೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಕಳೆದ ಒಂದು ವರ್ಷದಿಂದ ವಿವಿಧ ವಾರ್ಡ್‌ಗಳ ಪೌರ ಕಾರ್ಮಿಕರಿಗೆ ಉಪಾಹಾರವೂ ಇಲ್ಲ. ಉಪಾಹಾರ ಭತ್ಯೆಯೂ ಇಲ್ಲ ಎನ್ನುವಂತಾಗಿದೆ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,800 ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕೆಲವರ ಪ್ರಕಾರ ಕಳೆದ 12 ತಿಂಗಳಿಂದ ಉಪಾಹಾರ ಭತ್ಯೆ ನೀಡಲಾಗುತ್ತಿಲ್ಲ. ಬೆಳಗಿನ ಜಾವ ಮನೆಯಿಂದ ಹೊರಡುವ ಸಿಬ್ಬಂದಿ ತಮ್ಮದೇ ವೆಚ್ಚದಲ್ಲಿ ಉಪಾಹಾರ ಸೇವಿಸಬೇಕು. ಇಲ್ಲವೆ ಉಪವಾಸ ಕಾರ್ಯನಿರ್ವಹಿಸಬೇಕಾಗಿದೆ.
ಕೆಲವೊಂದು ವಾರ್ಡ್ ಸಿಬ್ಬಂದಿಗೆ ಭತ್ಯೆ: ಕಳೆದ 12-14 ತಿಂಗಳಿಂದ ಕೆಲವೊಂದು ವಾರ್ಡ್ ಗಳಲ್ಲಿ ಪೌರಕಾರ್ಮಿಕರಿಗೆ ಉಪಾಹಾರ ಭತ್ಯೆ ನೀಡಿಲ್ಲ. ಇನ್ನು ಕೆಲವೊಂದು ವಾರ್ಡ್‌ಗಳಲ್ಲಿ ಉಪಾಹಾರ ಭತ್ಯೆ ನೀಡಲಾಗಿದೆ. ನೀಡಲಾರದ ವಾರ್ಡ್‌ಗಳಲ್ಲಿ ಗುತ್ತಿಗೆದಾರರನ್ನು ಕೇಳಿದರೆ ಪಾಲಿಕೆಯಿಂದ ಬಂದಿಲ್ಲ. ಬಂದ ನಂತರ ನೀಡಲಾಗುವುದು ಎಂದು ಹೇಳಿಕೆ ನೀಡುತ್ತಾರೆ. ಪಾಲಿಕೆಯವರನ್ನು ಕೇಳಿದರೆ, ನಮ್ಮಲ್ಲಿ ಉಪಾಹಾರ ಭತ್ಯೆ ಯಾವುದು ಬಾಕಿ ಇಲ್ಲ. ನಿಮ್ಮ ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಯಾರನ್ನು ಕೇಳುವುದು ಎಂಬ ನೋವು ಮಾತ್ರ ಗುತ್ತಿಗೆ ಪೌರಕಾರ್ಮಿಕರನ್ನು ಕಾಡತೊಡಗಿದೆ.
ಉಪಾಹಾರಕ್ಕೆ ಟೆಂಡರ್: ಪೌರ ಕಾರ್ಮಿಕರಿಗೆ ಉಪಾಹಾರ ಭತ್ಯೆ ನೀಡಲಾಗುತ್ತಿದ್ದು, ಅವರಿಗೆ ಭತ್ಯೆ ಬದಲಾಗಿ ಉಪಾಹಾರ ನೀಡುವ ಕುರಿತು ಹು-ಧಾ ಮಹಾನಗರ ಪಾಲಿಕೆಯಿಂದ 18-6-2019ರಂದು ಟೆಂಡರ್ ಕರೆಯಲಾಗಿದೆ. ಇನ್ನು ಒಂದೂವರೆ ತಿಂಗಳ ನಂತರದಲ್ಲಿ ಪೌರಕಾರ್ಮಿಕರಿಗೆ ಉಪಾಹಾರ ಭತ್ಯೆ ಬದಲಾಗಿ ಉಪಾಹಾರವೇ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
•ಬಸವರಾಜ ಹೂಗಾರ