Advertisement

ಪೌರಕಾರ್ಮಿಕರಿಗಷ್ಟೇ ಉಪಹಾರ, ಮಿಕ್ಕವರಿಗಿಲ್ಲ ಊಟ

05:35 PM Mar 27, 2020 | Suhan S |

ಹುಬ್ಬಳ್ಳಿ: ಬಡವರ, ನಿರ್ಗತಿಕರ ಪಾಲಿನ ಕಾಮಧೇನು ಇಂದಿರಾ ಕ್ಯಾಂಟೀನ್‌ಗೂ ಕೋವಿಡ್ 19  ವೈರಸ್‌ ಎಫೆಕ್ಟ್ ತಗುಲಿದ್ದು, ಜನರಿಲ್ಲದೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಸ್ಥಗಿತಗೊಂಡಿದೆ. ಬೆಳಗಿನ ಉಪಹಾರವನ್ನು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರಿಗೆ ಪೂರೈಸಲಾಗುತ್ತಿದೆ.

Advertisement

ದೇಶದ್ಯಾಂತ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಬಡವರು-ಕಾರ್ಮಿಕ ವರ್ಗದವರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಸರಕಾರ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಹಾರ ಹಾಗೂ ಊಟ ನೀಡುತ್ತಿದೆ. ಮಹಾನಗರ ವ್ಯಾಪ್ತಿಯಲ್ಲಿ 9 ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸರಕಾರದ ಆದೇಶದಂತೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ತಯಾರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ಇದು ಕೈಯಲ್ಲಿ ಕೆಲಸವೂ ಇಲ್ಲದೆ. ಇತ್ತ ಬಸ್‌ ಗಳೂ ಇಲ್ಲದೆ ತಮ್ಮ ಊರುಗಳಿಗೆ ಹೋಗದೆ ನಗರದಲ್ಲೇ ವಾಸವಾಗಿರುವ ಕಾರ್ಮಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಯಾಂಟೀನ್‌ ಗಳಲ್ಲಿ ಊಟ ದೊರೆಯುವುದರಿಂದ ಜನರು ಸೇರುವ ಸಾಧ್ಯತೆಗಳು ಹೆಚ್ಚು ಎನ್ನುವ ಕಾರಣಕ್ಕೆ ಸರಕಾರ ಸ್ಥಗಿತಗೊಳಿಸಲು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಪೌರಕಾರ್ಮಿಕರಿಗೆ ಉಪಹಾರ: ಇಂದಿರಾ ಕ್ಯಾಂಟೀನ್‌ಗಳ ಸೇವೆ ಸ್ಥಗಿತಗೊಳ್ಳಬಾರದು. ಸರಕಾರದ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಬೇಕು ಎನ್ನುವ ಕಾರಣಕ್ಕೆ ತುರ್ತು ಸೇವೆಯಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ಗಳಿಂದ ಉಪಹಾರ ಪೂರೈಸಲಾಗುತ್ತಿದೆ. ಸರಕಾರದ ನೀಡಿದ ಮೆನು ಪ್ರಕಾರ ನಿತ್ಯವೂ 9 ಕ್ಯಾಂಟೀನ್‌ಗಳಿಂದ ಆಯಾ ಭಾಗದ ಪೌರ ಕಾರ್ಮಿಕರಿಗೆ ಉಪಹಾರ ಕಲ್ಪಿಸಲಾಗುತ್ತಿದೆ.

ಊಟ ವ್ಯರ್ಥವಾಗುತ್ತಿತ್ತು: ಸರಕಾರದ ಆದೇಶ ಪ್ರಕಾರ ಮಧ್ಯಾಹ್ನ ಹಾಗೂ ರಾತ್ರಿ ಸೇರಿ ಒಂದು ಕ್ಯಾಂಟೀನ್‌ ಸಾವಿರ ಊಟ ತಯಾರಿಸಬೇಕು. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡುತ್ತಿದ್ದಂತೆ ಕ್ಯಾಂಟೀನ್‌ಗಳಲ್ಲಿ ಊಟಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಹೀಗಾಗಿ 300-350 ಊಟಗಳನ್ನು ತಯಾರಿಸುತ್ತಿದ್ದರೂ ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ಒಂದಂಕಿ ಕೂಡ ದಾಟುತ್ತಿರಲಿಲ್ಲ. ಹೀಗಾಗಿ ಊಟ ವಿನಾಕಾರಣ ವ್ಯರ್ಥ್ಯವಾಗುತ್ತಿತ್ತು. ಹೀಗಾಗಿ ಎರಡೂ ವೇಳೆಯ ಊಟವನ್ನು ಸ್ಥಗಿತಗೊಳಿಸಲಾಗಿದೆ.

Advertisement

ಇಂದಿರಾ ಕ್ಯಾಂಟೀನ್‌ನ ಉಪಹಾರವನ್ನು ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಊಟದ ಕುರಿತು ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. –ಡಾ| ಸುರೇಶ ಇಟ್ನಾಳ, ಆಯುಕ್ತರು, ಮಹಾನಗರ ಪಾಲಿಕೆ

 

­ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next