ವರದಿ : ಮಹಾದೇವ ಪೂಜೇರಿ
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಹಳ್ಳಿಯಲ್ಲಿಯ ವಿದ್ಯುತ್ ಚಾಲಿತ ಮಗ್ಗದ ಕಾರ್ಮಿಕರು ಕೋವಿಡ್ -19ರ ಲಾಕ್‌ಡೌನ್ ಹೊಡೆತಕ್ಕೆ ನಲುಗಿ ಹೋಗಿದ್ದಾರೆ.
ಕಳೆದ ಎರಡು ತಿಂಗಳಿಂದ ಮಗ್ಗಗಳನ್ನು ಬಂದ್ ಮಾಡಿದ್ದು, ಕೆಲಸವಿಲ್ಲದೇ ಉಪಜೀವನ ನಡೆಸಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ನಿಯೋಜಿತ ಚಿಕ್ಕೋಡಿ ಜಿಲ್ಲೆ ವ್ಯಾಪ್ತಿಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ನಿಪ್ಪಾಣಿ ತಾಲೂಕಿನ ಮಾಣಕಾಪೂರ, ಬೋರಗಾಂವ, ಕಾರದಗಾ, ಡೋಣೆವಾಡಿ ಹೀಗೆ ಹತ್ತಾರು ಹಳ್ಳಿಗಳಲ್ಲಿ ಪ್ರತಿನಿತ್ಯ ಸಾವಿರಾರು ಜನರು ವಿದ್ಯುತ್ ಚಾಲಿತ ಮಗ್ಗಗಳ ನೇಕಾರಿಕೆಯಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದರು. ಕೊರೊನಾ ಲಾಕ್‌ಡೌನ್ ಪರಿಣಾಮ ವಿದ್ಯುತ್ ಚಾಲಿತ ಮಗ್ಗಗಳ ಸದ್ದು ನಿಂತು, ಸಾವಿರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ.
ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನರಳಾಡುವ ನೇಕಾರರ ಬದುಕು ಕೊರೊನಾ ಲಾಕಡೌನ್‌ದಿಂದ ಅತಂತ್ರವಾಗಿದೆ. ಕಳೆದ ಮೂರು ವರ್ಷದ ಹಿಂದೆ ಮಹಾಪೂರ, ಕಳೆದ ಹಾಗೂ ಈ ವರ್ಷ ಕೋವಿಡ್ ಸೋಂಕಿನಿಂದ ಸಂಕಷ್ಟದಲ್ಲಿದ್ದು, ಮುಂದಿನ ಜೀವನ ಹೇಗೆ ಎಂಬ ಆತಂಕದಲ್ಲಿದ್ದಾರೆ.
ಗಡಿಯಲ್ಲಿ ಬಿಗಿ ಭದ್ರತೆ: ಕೊರೊನಾ ಎರಡನೆ ಅಲೆ ವೇಗವಾಗಿ ಹರಡುತ್ತಿರುವ ಪರಿಣಾಮ ಮಹಾರಾಷ್ಟ್ರ ಮತ್ತು ರಾಜ್ಯ ಸರ್ಕಾರ ಲಾಕಡೌನ್ ಘೋಷಣೆ ಮಾಡಿವೆ. ಎರಡು ರಾಜ್ಯದ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ನೆರೆಯ ಮಹಾರಾಷ್ಟ್ರದ ಇಚಲಕರಂಜಿ, ಕೊಲ್ಲಾಪೂರ, ಸಾಂಗ್ಲೀ ಹೀಗೆ ಅನೇಕ ಕಡೆಗಳಿಂದ ಕಚ್ಚಾ ವಸ್ತು ರಾಜ್ಯಕ್ಕೆ ಬರುತ್ತಿತ್ತು. ಆದರೆ ಕರ್ನಾಟಕಕ್ಕಿಂತ ಒಂದು ತಿಂಗಳು ಮೊದಲೇ ಮಹಾರಾಷ್ಟ್ರ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗಿದ್ದರಿಂದ ಕಚ್ಚಾ ವಸ್ತು ಸರಬರಾಜು ನಿಂತುಹೋಗಿದೆ. ನಂತರ ರಾಜ್ಯದಲ್ಲಿಯೂ ಲಾಕಡೌನ್ ಜಾರಿಯಾಗಿ ಮಗ್ಗಗಳು ಸಂಪೂರ್ಣ ಬಂದ್ ಆಗಿವೆ.
ಸಾಲದ ಸುಳಿಯಲ್ಲಿ ನೇಕಾರರು: ಲಕ್ಷಾಂತರ ರೂ. ಸಾಲ ಮಾಡಿ ವಿದ್ಯುತ್ ಚಾಲಿತ ಮಗ್ಗಗಳನ್ನು ಸ್ಥಾಪನೆ ಮಾಡಲಾಗಿದೆ. ಕಳೆದ ಮೂರು ವರ್ಷದಿಂದ ಒಂದಿಲ್ಲೊಂದು ಸಂಕಷ್ಟ ಎದುರಾಗಿ ಸಾಲದ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ, ಮಗ್ಗಗಳು ಚಾಲ್ತಿಯಲ್ಲಿದ್ದಿದ್ದರೇ ಸಾಲದ ಕಂತು ತುಂಬಲು ಅನುಕೂಲವಾಗುತ್ತಿತ್ತು. ಸಾಲದ ಹೊರೆ ದಿನೇ ದಿನೇ ಹೆಚ್ಚುತ್ತಿದೆ. ಬಡ್ಡಿ ತುಂಬಲು ಹೆಣಗಾಡಬೇಕಿದೆ ಎನ್ನುತ್ತಾರೆ ನೇಕಾರರು.
ಸರ್ಕಾರ ಸಹಾಯಕ್ಕೆ ಬರಲಿ: ಮೊದಲನೆ ಅಲೆಯಲ್ಲಿ ಕೇಂದ್ರ ಆರ್ಥಿಕ ಸಹಾಯಧನ ಪ್ಯಾಕೇಜ ಘೋಷಣೆ ಮಾಡಿತ್ತು. ಈ ವರ್ಷ ರಾಜ್ಯ ಸರಕಾರ ಕೂಡಾ ಮಾಡಿದೆ. ಆದರೆ ಎರಡೂ ಸರಕಾರಗಳಿಂದ ನೇಕಾರರಿಗೆ ಯಾವುದೇ ಪ್ರಯೋಜನವಾಗಿಲ್ಲ, ಸಂಕಷ್ಟದ ಸುಳಿಯಲ್ಲಿ ಸಿಕ್ಕಾಕ್ಕಿಕೊಂಡು ಒದ್ದಾಡುತ್ತಿರುವ ನೇಕಾರರ ಕುಟುಂಬಗಳ ಆರ್ಥಿಕ ಸಹಾಯಕ್ಕೆ ಸರಕಾರ ಧಾವಿಸಬೇಕಿದೆ. ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಆರ್ಥಿಕ ಸಹಾಯ ನೀಡುವ ಮೂಲಕ ನೇಕಾರರ ಕುಟುಂಬಗಳ ಆಸರೆಗೆ ಬರಬೇಕೆಂದು ಕಾರದಗಾ ಗ್ರಾಮದ ದಾದಾಸೋ ಮಹಾದೇವ ಕಾಮಕರ ಒತ್ತಾಯಿಸಿದ್ದಾರೆ.