ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಪುಣೆಯ ಸಿಡಬ್ಲ್ಯುಪಿಆರ್‌ಎಸ್ ಇವರು ನೀಡಿದ ನಕ್ಷೆಯಂತೆ ಬ್ರೇಕ್ ವಾಟರ್ ಕಾಮಗಾರಿ ನಡೆಯಲಿದ್ದು, ಸ್ಥಳೀಯ ಅಧಿಕಾರಿಗಳಿಗೆ ಕಾಮಗಾರಿಯ ವಿನ್ಯಾಸ ಬದಲಾವಣೆ ಮಾಡಲು ಯಾವುದೇ ಅಧಿಕಾರವಿರುವುದಿಲ್ಲ. ಅನುಮೋದನೆ ಗೊಂಡ ಯೋಜನೆಯಂತೆ ಕಾಮಗಾರಿ ನಡೆಯಲಿದೆ. ಮೀನುಗಾರರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಗಂಗೊಳ್ಳಿ ಮೀನುಗಾರಿಕಾ ಬಂದರು ಅಭಿವೃದ್ಧಿ ಸಮಿತಿ ಗಂಗೊಳ್ಳಿ ಇವರ ವತಿಯಿಂದ ಗಂಗೊಳ್ಳಿ ಮೀನುಗಾರಿಕಾ ಬಂದರು ವಠಾರದಲ್ಲಿ ಜರಗಿದ ಗಂಗೊಳ್ಳಿ ಬಂದರಿನ ಬ್ರೇಕ್ ವಾಟರ್ ಕಾಮಗಾರಿ ಪರಿವೀಕ್ಷಣೆ, ಬಂದರು ಅಭಿವೃದ್ಧಿಯ ಕುರಿತು ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾಗ ಖಾರ್ವಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಮಾತನಾಡಿದರು. ತಾ.ಪಂ. ಸದಸ್ಯ ರಾಜು ದೇವಾಡಿಗ, ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ, ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೋಹನ ಖಾರ್ವಿ, ಕೊಂಕಣಿ ಖಾರ್ವಿ ಮಾರ್ಕೆಟಿಂಗ್ ಸಮಿತಿ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ, ಗಂಗೊಳ್ಳಿ ಗ್ರಾ.ಪಂ. ಸದಸ್ಯ ಸುರೇಂದ್ರ ಡಿ. ಖಾರ್ವಿ, ಲೋಕೇಶ ಖಾರ್ವಿ, ಜಿ. ಪುರುಷೋತ್ತಮ, ಆರ್ಕಾಟಿ, ರಮೇಶ ಕುಂದರ್, ಬಿ. ರಾಘವೇಂದ್ರ ಪೈ, ರಾಮದಾಸ ಉಪಸ್ಥಿತರಿದ್ದರು.
ಗಂಗೊಳ್ಳಿ ಗ್ರಾಮವನ್ನು ನೂತನವಾಗಿ ರಚನೆಯಾ ಗಿರುವ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವ ಉದ್ದೇಶ ಸರಕಾರದ ಮುಂದಿಲ್ಲ. ಸರಕಾರ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ವರದಿ ನೀಡುವಂತೆ ಆದೇಶ ನೀಡಿರುವುದರಿಂದ, ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸದೆ ಕುಂದಾಪುರ ತಾಲೂಕಿನಲ್ಲಿಯೇ ಉಳಿಸಲು ಕ್ರಮಕೈಗೊಳ್ಳಲಾಗಿದೆ.
ಕೆ. ಗೋಪಾಲ ಪೂಜಾರಿ