ಶಿವಮೊಗ್ಗ: ಹಸಿರು ಶಾಲನ್ನು ರೈತರ ಹೆಸರಿನಲ್ಲಿ ಯಾವಾಗ ರಾಜಕೀಯ ನಾಯಕರು ರಾಜಕೀಯ ಲಾಭಕ್ಕೆ ಬಳಸಿಕೊಂಡರೋ ಆಗ ರೈತ ಸಂಘಟನೆ ವಿಘಟನೆಯಾಯಿತು ಎಂದು ಸಿರಿಗೆರೆ ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಕುವೆಂಪು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಎಚ್.ಆರ್. ಬಸವರಾಜಪ್ಪನವರ ಹಸಿರು ಹಾದಿಯ ಕಥನ ಪುಸ್ತಕ ಮತ್ತು ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇತಿಹಾಸ ಯಾರು ಸೃಷ್ಟಿ ಮಾಡುತ್ತಾರೋ ಅವರಿಗೆ ದಾಖಲಿಸಲು ಪುರುಸೊತ್ತಿರುವುದಿಲ್ಲ. ಬೇರೆ ಯಾರೋ ಅದನ್ನ ದಾಖಲಿಸುವಾಗ ನಿಜವಾದ ಅಂಶಗಳನ್ನು ದಾಖಲಿಸು ವಲ್ಲಿ ವಿಫಲರಾಗುತ್ತಾರೆ ಎಂದರು.
ಕೊರೊನಾ ಸಂದರ್ಭ ಬಂದಿದ್ದರಿಂದ ಬಸವರಾಜಪ್ಪ ನವರೇ ತಮ್ಮ ಹೋರಾಟ ದಾಖಲಿಸಿದ್ದು, ಯುವ ಪೀಳಿಗೆಗೆ ಮತ್ತು ನಿಜವಾದ ಚಳವಳಿಗಾರರಿಗೆ ಒಂದು ಸ್ಫೂರ್ತಿಯಾಗಬಹುದು. ಹಸಿರು ಹಾದಿಯ ಕಥನ ಎಂಬ ಶೀರ್ಷಿಕೆ ಬದಲು ಹಸಿರು ಶಾಲಿನ ಮುಳ್ಳಿನ ಹಾದಿಯ ಕಥನ ಎಂದಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೃತಿಯ ಬಗ್ಗೆ ಅಭಿಪ್ರಾಯಪಟ್ಟ ಅವರು, ಪರಿಷ್ಕತ ಮುದ್ರಣ ಮಾಡುವುದಿದ್ದರೆ ಈ ಹೆಸರು ಹಾಕಿ ಎಂದು ಬಯಸುತ್ತೇನೆ ಎಂದು ಸಲಹೆ ನೀಡಿದರು.
ಬಸವರಾಜಪ್ಪನವರ ಹೋರಾಟಕ್ಕೆ ಮೊದಲ ಸ್ಫೂರ್ತಿ ತಹಶೀಲ್ದಾರ್ ಅವರು. ಅವರ ಮನೆಗೆ ನುಗ್ಗಿ ಭತ್ತದ ಪಣತವನ್ನು ಜಪ್ತಿ ಮಾಡಿದ ಘಟನೆಯಾಗಿದೆ. ಪೂರ್ವದಲ್ಲಿ ಬ್ರಿಟಿಷರಿಂದ ದರ್ಪಕ್ಕೆ ಒಳಗಾಗುತ್ತಿದ್ದರು. ಆದರೆ, ಸ್ವಾತಂತ್ರ್ಯ ನಂತರ ನಮ್ಮ ರೈತ ಮಕ್ಕಳೇ ಅಧಿಕಾರಿಗಳಾಗಿ ರೈತರ ಮೇಲೆ ದರ್ಪ ತೋರಿಸಿದರು. ರೈತ ಬೆನ್ನೆಲುಬು ಎಂದು ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಮ್ಮ ಅಧಿಕಾರಿಗಳೇ ಮಾಡಿದರು. ಅಂದಿನ ರೈತ ಹೋರಾಟಗಾರರು ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ್ದು, ಅವರೆಲ್ಲರೂ ಸ್ಮರಣೀಯರು. ಆದರೆ, ಕುರ್ಚಿ ಆಸೆಗೆ ರೈತ ಸಂಘಟನೆ ವಿಘಟನೆಯಾಗಿದ್ದು ದುರದೃಷ್ಟಕರ. ಶೇ.65ರಷ್ಟಿರುವ ರೈತರು ತಾವು ಆಸೆಪಟ್ಟ ಒಬ್ಬ ನಾಯಕನನ್ನು ಕುರ್ಚಿಯಲ್ಲಿ ಕೂರಿಸಲು ಆಗದೇ ಇರುವುದು ದುರಂತವೇ ಸರಿ. ಸ್ಪರ್ಧಾಲಾಲಸೆ ಬಂದಾಗ ಅದು ವಿಘಟನೆಗೆ ದಾರಿಯಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃತಿಕಾರ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಅಂದಿನ ಯುವಕರು ಯಾವುದೇ ಭಯ ಇಲ್ಲದೇ ತಮ್ಮನ್ನು ತಾವೇ ಚಳವಳಿಗಳಿಗೆ ಅರ್ಪಣೆ ಮಾಡಿಕೊಂಡರು. ಆದರೆ, ಈಗಿನ ಯುವಕರು ರೈತರ ಸಂಘಷ್ಟಗಳಿಗೆ ಧಕ್ಕೆಯಾದಾಗ ಪ್ರಭುತ್ವವನ್ನು ಎಚ್ಚರಿಸಲು ಮುಂದೆ ಬರುತ್ತಿಲ್ಲ. ರೈತರ, ಮುಗ್ಧರ, ಬಡವರ ಸಮಸ್ಯೆ ಅರ್ಥ ಮಾಡಿಕೊಂಡು ಅವರನ್ನು ಪ್ರೀತಿಸಿ, ಅವರಿಗೆ ನ್ಯಾಯ ಒದಗಿಸಲು ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಸಮಾಜವಾದಿ ನೆಲದಲ್ಲಿ ಅನೇಕ ಚಳವಳಿಗಳು ಹುಟ್ಟಿದ್ದು, ಅದರಲ್ಲಿ ಪ್ರಮುಖವಾಗಿ ರೈತ ಚಳವಳಿ ಮುಖ್ಯವಾಗುತ್ತದೆ. ಬಸವಾದಿ ಶರಣರು ಚಳವಳಿಗಳ ಮೂಲಕ ಭದ್ರ ಸಮಾಜದ ನಿರ್ಮಾಣ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಜಾತ್ಯತೀತ ನಿಲುವುಗಳು ಸಡಿಲವಾಗುತ್ತಿದ್ದು, ಭೀತಿಯಿಂದ ನೋಡುವ ಸಂದರ್ಭ ಬಂದಿದೆ. ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿದ್ದ ರೈತ ಚಳವಳಿಗಳು ಈಗ ದಾರಿತಪ್ಪುತ್ತಿದೆ. ಪ್ರಜಾಪ್ರಭುತ್ವ ಅಸ್ಥಿರವಾಗುತ್ತಿದೆ. ರೈತರು ಬೇಡ, ಕಾರ್ಪೋರೇಟ್ ಕಂಪನಿಗಳು ಬೇಕು ಎಂದು ಪ್ರಭುತ್ವ ಹೇಳುತ್ತಿದೆ. ಶಾಸನ ಸಭೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ರೈತರಿಗಿದೆ ಎಂದರು.