ದಾವಣಗೆರೆ: ಇನ್ನು ಮುಂದೆ ರಾಜಕಾರಣಿಗಳು, ಸೆಲೆಬ್ರಿಟಿಗಳು, ಅಧಿಕಾರಿಗಳು ಸೇರಿದಂತೆ ಗಣ್ಯರು ಮಕ್ಕಳ ಪಾಲನಾ ಕೇಂದ್ರಗಳಿಗೆ ಹೋಗಿ ಅಲ್ಲಿ ತಮ್ಮ ಅಥವಾ ತಮ್ಮ ಮಕ್ಕಳ ಜನ್ಮದಿನ ಆಚರಿಸುವಂತಿಲ್ಲ. ಪಾಲನಾ ಕೇಂದ್ರದ ಮಕ್ಕಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ರೀತಿಯ ಆಚರಣೆಗೆ ಬ್ರೇಕ್ ಹಾಕಿದೆ.
ಸಾಮಾನ್ಯವಾಗಿ ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಅಧಿಕಾರಿಗಳು ಸೇರಿದಂತೆ ಗಣ್ಯರು ತಮ್ಮ ಅಥವಾ ತಮ್ಮ ಕುಟುಂಬ ಸದಸ್ಯರ ಇಲ್ಲವೇ ಮಕ್ಕಳ ಜನ್ಮದಿನವನ್ನು ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಆಚರಿಸಿ ಅಲ್ಲಿನ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ತಮ್ಮ ಜನ್ಮದಿನವನ್ನು ಮನೆಯಲ್ಲಿ ಮಾಡುವುದಕ್ಕಿಂತ ಪಾಲನಾ ಕೇಂದ್ರದ ಮಕ್ಕಳ ಸಮ್ಮುಖದಲ್ಲಿ ಮಾಡಿ ಆ ಮಕ್ಕಳಿಗೂ ಖುಷಿ ಹಂಚಬೇಕು ಎಂಬ ಸದುದ್ದೇಶ ಈ ರೀತಿಯ ಆಚರಣೆಯಲ್ಲಿ ಅಡಗಿರುತ್ತದೆ. ಆದರೆ ಇಂಥ ಆಚರಣೆಯಿಂದ ಪಾಲನಾ ಕೇಂದ್ರದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಜನ್ಮದಿನ ಆಚರಣೆಗೆ ಕಡಿವಾಣ ಹಾಕಿದೆ.
ಮಕ್ಕಳ ಮನಸ್ಸಿಗೆ ಘಾಸಿ: ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಾಗುವ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾಗಿರುವವರು, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ, ಬಾಲ್ಯ ವಿವಾಹಕ್ಕೆ ಒಳಗಾದ, ಅತ್ಯಾಚಾರಕ್ಕೆ ಒಳಗಾದ, ತಂದೆ-ತಾಯಿಯಿಂದ ತಿರಸ್ಕರಿಸಲ್ಪಟ್ಟ, ತಾಯಿ-ತಂದೆ ಇಲ್ಲದ, ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ ಇತ್ಯಾದಿ ಪಾಲನೆ ಹಾಗೂ ರಕ್ಷಣೆ ಅವಶ್ಯವಿರುವ ಮಕ್ಕಳಾಗಿರುತ್ತಾರೆ.
ಈ ಎಲ್ಲ ಮಕ್ಕಳು ಸಮಾಜದಿಂದ ವಂಚಿತರಾಗಿ ಮನನೊಂದವ ರಾಗಿರುವುದರಿಂದ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳ ಮನಸ್ಸಿಗೆ ಖುಷಿ ತರುವಂಥ ಸೃಜನಶೀಲತೆಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳ ಮನಸ್ಸು ಸದೃಢ ಹಾಗೂ ಆಹ್ಲಾದಕರವಾಗುವಂತೆ ಪ್ರೋತ್ಸಾಹಿಸಬೇಕಾಗುತ್ತದೆ. ಆದರೆ ಮಕ್ಕಳ ಪಾಲನಾ ಕೇಂದ್ರದಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, ಗಣ್ಯರು ತಮ್ಮ ಮಕ್ಕಳ ಜನ್ಮದಿನವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿ ಅದ್ಧೂರಿಯಾಗಿ ಆಚರಿಸುತ್ತಾರೆ. ಪಾಲನಾ ಸಂಸ್ಥೆಯಲ್ಲಿರುವ ಮಕ್ಕಳು ತಮ್ಮ ಜನ್ಮದಿನವನ್ನು ಹೀಗೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೋಲಿಕೆ ಮಾಡಿಕೊಂಡಲ್ಲಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಮನಸ್ಸಿಗೆ ಘಾಸಿಯಾಗುತ್ತದೆ. ಇದರಿಂದ ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಾಗಿದೆ.
ಇಂಥ ಆಚರಣೆಗಳು ಪಾಲನಾ ಕೇಂದ್ರದ ಮಕ್ಕಳ ಆತ್ಮಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂಬುದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಭಿಪ್ರಾಯ. ಪಾಲನಾ ಕೇಂದ್ರದ ಮಕ್ಕಳು ಕುಟುಂಬದಲ್ಲಿ ಬೆಳೆಯುವ ಯಾವುದೇ ಮಗುವಿಗಿಂತ ಕಡಿಮೆ ಇಲ್ಲ ಎಂಬ ಭಾವನೆಯನ್ನು ಕಾಪಾಡುವ ಸಲುವಾಗಿ ಮಕ್ಕಳ ಜನ್ಮದಿನ ಹಾಗೂ ಸರ್ಕಾರದ ಆದೇಶದ ಮೂಲಕ ನಿಗದಿಪಡಿಸಿದ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆ ಹೊರತುಪಡಿಸಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಬೇರೆ ಯಾರದೇ ಜನ್ಮದಿನ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು, ಮಕ್ಕಳ ಪಾಲನಾ ಕೇಂದ್ರದ ಎಲ್ಲ ಮುಖ್ಯಸ್ಥರಿಗೆ ಸುತ್ತೋಲೆ ಮೂಲಕ ತಿಳಿಸಿದ್ದಾರೆ.
ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಗಣ್ಯ ವ್ಯಕ್ತಿಗಳ ಜನ್ಮದಿನ ಆಚರಣೆಯಿಂದ ಕೇಂದ್ರದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಜನ್ಮದಿನ ಆಚರಣೆ ನಿಷೇಧಿಸಿದೆ. ಈ ಆದೇಶದಂತೆ ಮಕ್ಕಳ ಪಾಲನಾ ಕೇಂದ್ರದಲ್ಲಿ ಇನ್ನು ಮುಂದೆ ಜನ್ಮದಿನ ಆಚರಣೆಗೆ ಅವಕಾಶವಿಲ್ಲ.
ಕೆ.ಎಚ್. ವಿಜಯಕುಮಾರ್, ಉಪನಿರ್ದೇಶಕರು,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದಾವಣಗೆರೆ.
ಎಚ್.ಕೆ. ನಟರಾಜ