Advertisement
1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪಾದರಕ್ಷೆಯ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಶೂ ಅಥವಾ ಸ್ಯಾಂಡಲ್ಸ್ ಹಾಗೂ ಸಾಕ್ಸ್ ಖರೀದಿಸಿ ವಿತರಿಸುವಂತೆ ಎಲ್ಲಾ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಸದಸ್ಯರಿಗೆ ಸೂಚಿಸಿ,ಇಲಾಖೆಯಿಂದ ಅವರ ಖಾತೆಗೆ ಹಣ ಜಮಾ ಮಾಡಲಾಗಿದೆ. ಕಪ್ಪು ಬಣ್ಣದ ಒಂದು ಜತೆ ಶೂ ಅಥವಾ ಸ್ಯಾಂಡಲ್ಸ್ ಹಾಗೂ ಎರಡು ಜತೆ ಸಾಕ್ಸ್(ಕಾಲುಚೀಲ) ಖರೀದಿಗೆ ನಿರ್ದೇಶನ ನೀಡಲಾಗಿದೆ.
ಶಿಕ್ಷಣಾಧಿಕಾರಿಗಳಾಗಲಿ, ಬಿಆರ್‌ಪಿ ಅಥವಾ ಸಿಆರ್‌ಪಿಗಳಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ಸರ್ಕಾರಿ ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಶೂ, ಸಾಕ್ಸ್ ಖರೀದಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ದೂರು ಬಂದರೆ, ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸಿದೆ. ಪ್ರತಿ ಶಾಲೆಯ ಎಸ್‌ಡಿಎಂಸಿಗಳು ಪ್ರತ್ಯೇಕವಾಗಿಯೇ ಶೂ, ಸಾಕ್ಸ್ ಖರೀದಿಸಬೇಕು. ಯಾವುದೇ ಕಾರಣಕ್ಕೂ ಒಂದಕ್ಕಿಂತ ಅಧಿಕ ಶಾಲೆಗಳಾಗಲಿ ಅಥವಾ ಬ್ಲಾಕ್, ಕ್ಲಸ್ಟರ್ ಮಟ್ಟದಲ್ಲಿ ಕೇಂದ್ರೀಕೃತ ಮಾದರಿಯಲ್ಲಿ ಶೂ, ಸಾಕ್ಸ್ ಖರೀದಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗುಣಮಟ್ಟ ಪರಿಶೀಲನೆಗೆ ಸಮಿತಿ: ಶೂ, ಸಾಕ್ಸ್ ನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿಗಳು ಪ್ರತಿ ತಾಲೂಕಿನಲ್ಲೂ ಒಂದೊಂದು ಸಮಿತಿ ರಚಿಸಲಿದ್ದಾರೆ. ಶೂ ಖರೀದಿಗೆ ಸಂಬಂಧಿಸಿದಂತೆ ಎಸ್ ಡಿಎಂಸಿಯಿಂದಲೂ ಒಂದು ಸಮಿತಿ ರಚಿಸಿಕೊಳ್ಳಲಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರೇ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕರು, ಇಬ್ಬರು ಮಹಿಳೆಯರು ಸೇರಿ ಎಸ್‌ಡಿಎಂಸಿ ನಾಮನಿರ್ದೇಶಿತ ಮೂವರು ಸದಸ್ಯರು ಇರುತ್ತಾರೆ.
Related Articles
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನವಾದ ವಾತಾವರಣ ಇರುತ್ತದೆ. ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಶೂ, ಸ್ಯಾಂಡಲ್ ಹಾಗೂ ಸಾಕ್ಸ್ ಖರೀದಿಸಬೇಕು. ಕರಾವಳಿ ಮತ್ತು ಮಲೆನಾಡಿನಲ್ಲಿ ವರ್ಷದಲ್ಲಿ ಮೂರ್‍ನಾಲ್ಕು ತಿಂಗಳು ಮಳೆ ಇರುವುದರಿಂದ ಶೂ ಧರಿಸುವುದು ಕಷ್ಟವಾದರೆ ಸ್ಯಾಂಡಲ್ಸ್ ವಿತರಣೆ ಮಾಡಬಹುದು. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದಲೂ ಶೂ ಧರಿಸುವುದು ಕಷ್ಟವಾದರೆ ಸ್ಯಾಂಡಲ್ ವಿತರಣೆ ಮಾಡಬಹುದು. ಆದರೆ, ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಮತ್ತು ಇದು ಸಮಿತಿಯ ತೀರ್ಮಾನವಾಗಿರಬೇಕು ಎಂಬ ಸೂಚನೆಯನ್ನು ಇಲಾಖೆ ನೀಡಿದೆ.
Advertisement