ಬೀಳಗಿ: ಸ್ಥಳೀಯ ಶ್ರೀನಿವಾಸ ಚಿತ್ರಮಂದಿರದ ಹತ್ತಿರವಿರುವ ನಗರದ ದೊಡ್ಡ ಚರಂಡಿಯ ಹೂಳೆತ್ತುವ ಕಾಮಗಾರಿ ಸದ್ದಿಲ್ಲದೆ ಕೈಗೆತ್ತಿಕೊಳ್ಳುವ ಮೂಲಕ ಪಪಂನವರು ಲಕ್ಷಾಂತರ ರೂ. ಬಿಲ್ ತೆಗೆಯಲು ನಡೆಸಿದ್ದ ವ್ಯವಸ್ಥಿತ ಗೋಲ್ಮಾಲ್ಗೆ ಪಪಂ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಬ್ರೇಕ್ ಹಾಕಿದ್ದಾರೆ. ಇದು ತಡವಾಗಿ ಬೆಳಕಿಗೆ ಬಂದಿದೆ.
ಅಧಿಕಾರಿಗಳು ಆಡಿದ್ದೇ ಆಟ: ಕಾರಣಾಂತರಗಳಿಂದ ಕಳೆದ ಹತ್ತು ತಿಂಗಳಿಂದ ಪಪಂಗೆ ಆಡಳಿತ ಮಂಡಳಿಯಿಲ್ಲ. ಎಲ್ಲವೂ ಆಡಳಿತಾಧಿಕಾರಿ ತಹಶೀಲ್ದಾರ್, ಪಪಂ ಮುಖ್ಯಾಧಿಕಾರಿಗಳ ಮೂಲಕವೇ ನಡೆಯಬೇಕು. ಇಂತಹ ಸಂದರ್ಭದಲ್ಲಿ ಚರಂಡಿ ಹೂಳೆತ್ತುವುದನ್ನು ಪಪಂ ಆಡಳಿತಾಧಿಕಾರಿಗಳ ಗಮನಕ್ಕೆ ತಾರದೆ ತುರ್ತು ಪರಿಹಾರ ಕಾಮಗಾರಿ ಎಂದು ಪಪಂನವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಎಲ್ಲವೂ ಮೌಖೀಕ ಕರ್ತವ್ಯ. ಚರಂಡಿ ಹೂಳೆತ್ತಲು ಓರ್ವ ಗುತ್ತಿಗೆದಾರರನ್ನು ನೇಮಿಸಿದ್ದಾರೆ. ಕೆಲಸವೂ ಭರದಿಂದ ನಡೆದಿದೆ. ಚರಂಡಿ ಸರಾಗವಾಗಿ ಹರಿಯಲು ತುರ್ತಾಗಿ ಒಂದಿಷ್ಟು ಕೆಲಸ ಮಾಡಬಹುದಿತ್ತು. ಆದರೆ ಇದನ್ನೇ ನೆಪವಾಗಿಸಿಕೊಂಡು ಸುಮಾರು ಒಂದು ಕಿ.ಮೀ.ದಷ್ಟು ಉದ್ದ ಚರಂಡಿ ಕ್ಲೀನ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಜೆಸಿಬಿ, ಟ್ರ್ಯಾಕ್ಟರ್ ಬಾಡಿಗೆಯೇ ಲಕ್ಷಾಂತರವಾಗಿದೆ. ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ದೌಡು: ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಆಡಳಿತಾಧಿಕಾರಿ ತಹಶೀಲ್ದಾರ್ ಉದಯ ಕುಂಬಾರ, ಯಾರ ಅನುಮತಿ ಮೇರೆಗೆ ಈ ಕೆಲಸ ಆರಂಭಿಸಿದ್ದೀರಿ. ಇದಕ್ಕೆಲ್ಲ ದುಡ್ಡು ಯಾರು ಕೊಡ್ತಾರೆ. ನಿಮಗೆ ಯಾರು ಕೆಲಸ ಹೇಳಿದ್ದಾರೋ ಅವರಿಂದಲೇ ಈ ದುಡ್ಡು ವಸೂಲಿ ಮಾಡಿ ಎಂದು ಕೆಲಸ ನಿರ್ವಹಿಸುತ್ತಿರುವವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೂಡಲೇ ಜೆಸಿಬಿ, ಟ್ರ್ಯಾಕ್ಟರ್ ಅಲ್ಲಿಂದ ಕಾಲುಕಿತ್ತಿವೆ. ಸದ್ಯ, ಇದುವರೆಗೆ ನಡೆದ ಲಕ್ಷಾಂತರ ವೆಚ್ಚದ ಬಿಲ್ ಯಾರು ಪಾವತಿಸುತ್ತಾರೋ ಕಾದು ನೋಡಬೇಕಷ್ಟೆ.
Advertisement
ನಗರದ ಹೊರವಲಯದ ಚರಂಡಿ ಮೋರಿಯು ಮೊನ್ನೆ ಸುರಿದ ಮಳೆಗೆ ಹೂಳು ತುಂಬಿಕೊಂಡು ಗರಡದಿನ್ನಿ ಕೂಡು ರಸ್ತೆ ಬಳಿ ನೀರು ನುಗ್ಗಿತ್ತು. ಇದನ್ನು ಸರಿಪಡಿಸಲು ನಾಗರಿಕರು ಪಪಂಗೆ ಒತ್ತಾಯಿಸಿದ್ದರೆನ್ನಲಾಗಿದೆ. ನಾಗರಿಕರ ಈ ದೂರು ಆಲಿಸಿದ ಪಪಂನವರು, ಕೂಡಲೇ ತುರ್ತು ಪರಿಹಾರ ಕಾಮಗಾರಿಯೆಂದು ಚರಂಡಿ ಹೂಳೆತ್ತಲು ಜೆಸಿಬಿ ಯಂತ್ರ ಸದ್ದು ಮಾಡಲಾರಂಭಿಸಿದ್ದಾರೆ. ನಿರಂತರ ಐದು ಟ್ರ್ಯಾಕ್ಟರ್‌ಗಳ ಮೂಲಕ ಹೂಳು ಪಟ್ಟಣದ ಹೊರಕ್ಕೆ ಹಾಕುವ ಕೆಲಸವೂ ನಡೆದಿದೆ. ಜೂ.10ರಿಂದ ಸುಮಾರು ಮೂರು ದಿನಗಳ ಕಾಲ ಚರಂಡಿ ಕ್ಲೀನ್ ಯಾವ ಅಡತಡೆಯಿಲ್ಲದೆ ಸಾಗಿದೆ. ಜೆಸಿಬಿ ಯಂತ್ರಕ್ಕೆ ಒಂದು ಗಂಟೆಗೆ 800 ರೂ. ಹಾಗೂ ಒಂದು ಟ್ರಿಪ್ ಟ್ರ್ಯಾಕ್ಟರ್‌ಗೆ 250 ರೂ. ಬಿಲ್ ಮಾಡಿದ್ದರೆಂದು ಹೇಳಲಾಗಿದೆ. ಆದರೆ, ಯಾವುದೇ ಲಿಖೀತ ಆದೇಶವಿಲ್ಲ.
ಈ ಕೆಲಸ ನನ್ನ ಗಮನಕ್ಕಿಲ್ಲ. ಚುನಾವಣೆ ನಿಮಿತ್ತ ಬೇರೆಡೆ ಕೆಲಸದಲ್ಲಿದ್ದಾಗ ಇದು ನಡೆದಿದೆ. ಹಿಂದಿನ ಮುಖ್ಯಾಧಿಕಾರಿಗಳಾಗಲಿ, ಆಡಳಿತಾಧಿಕಾರಿಗಳಾಗಲಿ ಇದಕ್ಕೆ ಲಿಖೀತ ಅನುಮತಿ ನೀಡಿಲ್ಲ. ತುರ್ತಾಗಿ ಪಪಂ ಜೆಇ ಮಾಡಿದ ಕೆಲಸವಿದು. ಈ ಕುರಿತು ಪರಿಶೀಲಿಸುವೆ. • ಸುನೀಲ ಬಬಲಾದಿ, ಮುಖ್ಯಾಧಿಕಾರಿ, ಪಪಂ ಬೀಳಗಿ
ತುರ್ತು ಪರಿಹಾರ ಕಾಮಗಾರಿಯಾದರೂ ಅದಕ್ಕೊಂದು ನಿಯಮಗಳಿವೆ. ಇಲ್ಲಿ ಯಾವುದನ್ನೂ ಪಾಲಿಸದೆ, ಯಾರ ಅನುಮತಿಯೂ ಪಡೆಯದೆ ಪಪಂನವರು ಚರಂಡಿ ಹೂಳೆತ್ತಲು ಮುಂದಾಗಿದ್ದರು. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. • ಉದಯ ಕುಂಬಾರ, ಪಪಂ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್
•ರವೀಂದ್ರ ಕಣವಿ