Advertisement

ಗದಗ ನಗರ ಕೆ.ಎಚ್‌. ಪಾಟೀಲ ಸಿಟಿಯಾದರೂ ಅಚ್ಚರಿಯಿಲ್ಲ: ಪಿಳ್ಳಿ ವ್ಯಂಗ್ಯ

08:26 AM Mar 05, 2019 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆ ಆಡಳಿತ ಅವಧಿ ಪೂರ್ಣಗೊಳ್ಳಲು ಒಂದು ವಾರ ಬಾಕಿ ಈರುವಾಗಲೇ ಮಾ.5ರಂದು ತರಾತುರಿಯಲಿ ತುರ್ತು ಸಾಮಾನ್ಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಗಂಗೀಮಡಿ ಆಶ್ರಯ ಕಾಲೋನಿಗೆ ದಿ| ಕೆ.ಎಚ್‌. ಪಾಟೀಲ ನಾಮಕರಣಕ್ಕೆ ನಿರ್ಣಯಿಸುವ ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್ಸಿಗರ ಈ ವರ್ತನೆಯಿಂದ ಮುಂದೊಂದು ದಿನ ಗದಗ ನಗರವನ್ನು ಕೆ.ಎಚ್‌. ಪಾಟೀಲ ಸಿಟಿಯಾಗಿ ಮರುನಾಮಕರಣ ಮಾಡಿದರೂ ಅಚ್ಚರಿಯಿಲ್ಲ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಸದಾನಂದ ಪಿಳ್ಳಿ ವ್ಯಂಗ್ಯವಾಡಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಿಮಡಿ ಆಶ್ರಯ ಕಾಲೋನಿ ಸರ್ವೇ ನಂ.384, 385, 395 ಮತ್ತು 396ರ ಬಡಾವಣೆಗೆ ದಿ| ಕೆ.ಎಚ್‌. ಪಾಟೀಲ ಹೆಸರಿಡುವುದು ಹಾಗೂ ನರಸಾಪುರದ ಆಶ್ರಯ ಕಾಲೋನಿಗೆ ದಿ| ಕೆ.ಎಂ.ಕಣವಿ ನಗರವೆಂದು ನಾಮಕರಣ ಮಾಡುವ ವಿಷಯಗಳನ್ನು ಪ್ರಮುಖವಾಗಿ ಸೇರಿಸಲಾಗಿದೆ.

ನರಸಾಪುರ ಆಶ್ರಯ ಕಾಲೋನಿಗೆ ದಿ| ಕೆ.ಎಂ.ಕಣವಿ ಅವರ ನಾಮಕಾರಣಕ್ಕೆ ನಮ್ಮದೇನೂ ತಕರಾರಿಲ್ಲ. ಆದರೆ, ಈಗಾಗಲೇ ನಗರದಲ್ಲಿ ಕೆ.ಎಚ್‌. ಪಾಟೀಲ ನಗರ, ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣ, ಕೆ.ಎಚ್‌. ಪಾಟೀಲ ಸರ್ಕಲ್‌ ಇವೆ. ಹುಬ್ಬಳ್ಳಿ ರಸ್ತೆ ಜಿಲ್ಲಾಡಳಿತ ಭವನ ಮುಂಭಾಗದಿಂದ ಬಿಂಕದಕಟ್ಟಿ ಕ್ರಾಸ್‌ ವರೆಗಿನ ರಸ್ತೆಗೆ ಕೆ.ಎಚ್‌. ಪಾಟೀಲ ರಸ್ತೆ ಎಂದು ನಾಮಕರಣ ಮಾಡಿದ್ದಾರೆ.

ಅಷ್ಟಾದರೂ ಗಂಗೀಮಡಿಯ ಆಶ್ರಯ ಕಾಲೋನಿಗೆ ಕೆ.ಎಚ್‌. ಪಾಟೀಲ ಹೆಸರಿಡುವ ಅಗತ್ಯವೇನು. ನಗರಸಭೆಯ ಆಡಳಿತದ ವೈಖರಿಯನ್ನು ಸಾರ್ವನಿಕರು ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಕುಟುಕಿದರು.

ಅವಳಿ ನಗರಕ್ಕೆ ಕೆ.ಎಚ್‌. ಪಾಟೀಲ ಕೊಡುಗೆಯಿದೆ. ಆದರೆ, ಅವರಿಗಿಂತಲೂ ಹೆಚ್ಚು ಸಾಧನೆ ಮಾಡಿರುವ ಲಿಂ| ಪಂಡಿತ ಪುಟ್ಟರಾಜ ಗವಾಯಿಗಳು, ಲಿಂ| ತೋಂಟದ ಸಿದ್ಧಲಿಂಗ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಶ್ರೀಗಳ ಹೆಸರು ನೆನಪಾಗುತ್ತಿಲ್ಲ. ಜಿಲ್ಲೆಯ ಸಂಗೀತ, ಸಾಹಿತ್ಯ, ಕ್ರೀಡಾ ಸಾಧಕರು ಕಾಂಗ್ರೆಸ್ಸಿಗರಿಗೆ ಕಾಣಿಸುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement

2018ರ ಡಿ.26ರಂದು ಉಪಾಧ್ಯಕ್ಷ ಪ್ರಕಾಶ ಬಾಕಳೆ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಾಮಾನ್ಯ ಸಭೆಯು ಊರ್ಜಿತವೋ? ಇಲ್ಲ ಅನೂರ್ಜಿತವೋ? ಎಂಬುದರ ಪೌರಾಯುಕ್ತ ಮನಸೂರ ಅಲಿ ತೀರ್ಮಾನ ಕೈಗೊಂಡಿಲ್ಲ. ಅಧ್ಯಕ್ಷರ ಅನುಪಸ್ಥಿತಿಯಿಂದಾಗಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಸಭೆ ಅನುಮೋದಿಸಿತ್ತು. ಆದರೆ, ಅದೇ ಸಭೆಯನ್ನು ಮಾ.5ರಂದು ಪುನಃ ಕರೆಯುವ ಮೂಲಕ ಪೌರಾಯುಕ್ತರು ನಿಯಾವಳಿಗಳನ್ನು ಗಾಳಿ ತೂರಲಾಗಿದೆ.

ನಗರಸಭೆ ಉಪಾಧ್ಯಕ್ಷ ಪ್ರಕಾಶ ಬಾಕಳೆ ಮಾತನಾಡಿ, ಮಾ.5 ರಂದು ಕರೆದಿರುವ ಸಭೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಮಾ.2 ರಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಈ ನಡುವೆಯೂ ಸಭೆ ನಡೆಸಿದರೆ, ಜಿಲ್ಲಾಡಳಿತ ಹಾಗೂ ನಗರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ಮಾಧವ ಗಣಭಾಚಾರಿ ಮಾತನಾಡಿ, ಕರ್ನಾಟಕ ಪುರಸಭೆ ಕಾಯ್ದೆ ಪ್ರಕಾರ ಯಾವುದೇ ವೃತ್ತ ಅಥವಾ ಕಟ್ಟಡಕ್ಕೆ ಒಬ್ಬ ವ್ಯಕ್ತಿಯ ಹೆಸರನ್ನು ಒಮ್ಮೆ ಮಾತ್ರ ಇಡಬಹುದು. ಆದರೂ, ಮೇಲಿಂದ ಮೇಲೆ ಕೆ.ಎಚ್‌. ಪಾಟೀಲ ಹೆಸರಿಡುತ್ತಿರುವುದನ್ನು ಆಕ್ಷೇಪಿಸಿ ನಗರಸಭೆ ಸಭೆಯಲ್ಲಿ ಉಪ ಸೂಚನೆ ನೀಡುತ್ತೇವೆ. ಅದಕ್ಕೂ ಮನ್ನಣೆ ನೀಡದಿದ್ದೆ, ಕರ್ನಾಟಕ ಪುರಸಭೆ ಕಾಯ್ದೆ 306 ಅನ್ವಯ ಜಿಲ್ಲಾ ಧಿಕಾರಿಗೆ ದೂರು ಸಲ್ಲಿಸುತ್ತೇವೆ. ಅದಕ್ಕೂ ಸ್ಪಂದನೆ ದೊರೆಯದಿದ್ದರೆ, ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಸದಸ್ಯರಾದ ರಾಘವೇಂದ್ರ ಯಳವತ್ತಿ, ಪ್ರವೀಣ ಬನ್ಸಾಲಿ, ಜಯಶ್ರೀ ಬೈರವಾಡೆ, ನಾಗಲಿಂಗ ಐಲಿ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next