Advertisement

ಅನಗತ್ಯ ತಿರುಗಾಟಕ್ಕೆ ಬಿತ್ತು ಬ್ರೇಕ್‌!

02:27 PM Mar 28, 2020 | Team Udayavani |

ಚಿಕ್ಕಮಗಳೂರು: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಕಟ್ಟನಿಟ್ಟಿನ ಕ್ರಮ ಕೈಗೊಂಡಿರುವ ಕಾರಣ ಜಿಲ್ಲಾದ್ಯಂತ ಶುಕ್ರವಾರ ಜನರು ರಸ್ತೆಗಿಳಿಯದಂತೆ ತಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.

Advertisement

ಸರ್ಕಾರದ ಆದೇಶ ಪಾಲಿಸದೆ ಸುಳ್ಳು ನೆಪ ಹೇಳಿಕೊಂಡು ನಗರದಲ್ಲಿ ಸುತ್ತುವ ಪುಂಡರಿಗೆ, ಅಗತ್ಯವಸ್ತು ಖರೀದಿಗೆ ಗುಂಪಾಗಿ ಸೇರುವ ಜನರಿಗೆ ಪೊಲೀಸರು ಗುರುವಾರ ಲಾಠಿಯಿಂದ ಬಿಸಿ ಮುಟ್ಟಿಸಿದ್ದರು. ಪೊಲೀಸರ ಲಾಠಿಯ ರುಚಿ ಕಂಡವರು ಮನೆಯಿಂದ ಹೊರಬರಲು ಹೆದರುತ್ತಿದ್ದು ನಗರದ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೇ ಇಡೀ ನಗರವೇ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಲ್ಲಲ್ಲಿ ಬೈಕ್‌ ಮತ್ತು ಕಾರುಗಳಲ್ಲಿ ಸಂಚರಿಸುವವರನ್ನು ಪೊಲೀಸರು ತಡೆದು ಅನಗತ್ಯವಾಗಿ ತಿರುಗುವವರನ್ನು ಮನೆಗೆ ಕಳಿಸಿದರು.

ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಲು ಮಸೀದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎಂಬ ಹಿನ್ನೆಲೆಯಲ್ಲಿ ಮಸೀದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಲೂಕಿನ ಗೋರಿಗುಂಡಿ ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರು ಅನೇಕ ಬಾರಿ ಸೂಚನೆ ನೀಡಿದರೂ ಯಾವುದಕ್ಕೂ ಜಗ್ಗದೇ ಪ್ರಾರ್ಥನೆ ಸಲ್ಲಿಸಲು ಮುಂದಾದ ಮೂವರನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ನಮ್ಮ ಗ್ರಾಮಕ್ಕೆ ಹೊರ ಜಿಲ್ಲೆ ಮತ್ತು ಹೊರ ಊರುಗಳಿಂದ ಯಾರೂ ಬರಬಾರದು ಎಂದು ಕೆಲ ಕಡೆಗಳಲ್ಲಿ ರಸ್ತೆ ಬಂದ್‌ ಮಾಡಿರುವ ಘಟನೆಗಳು ನಡೆದಿವೆ. ಜಿಲ್ಲೆಯ ಕೂದುವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೂದುವಳ್ಳಿ ಮುಖ್ಯರಸ್ತೆ, ದಿಣ್ಣೇಕೆರೆ, ಬೊಮ್ಮೇನಹಳ್ಳಿ ಮೂರು ಕಡೆಗಳಲ್ಲಿ ಗ್ರಾಮಸ್ಥರು ಬೇಲಿ ಹಾಕಿ ಹೊರಗಿನವರು ಯಾರು ಬರದಂತೆ ತಡೆ ಒಡ್ಡಿದ್ದಾರೆ.

ಕಡೂರು ತಾಲೂಕಿನ ಗುಬ್ಬಿಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತಗೆ ಜಾಲಿಮುಳ್ಳು, ವಿದ್ಯುತ್‌ ಕಂಬ ಅಡ್ಡ ಹಾಕಿ ಹೊರಗಿನವರು ಗ್ರಾಮಕ್ಕೆ ಪ್ರವೇಶಿಸದಂತೆ ನಿಗಾ ವಹಿಸಿದ್ದಾರೆ.

Advertisement

ಜಿಲ್ಲೆಯ ಕೊಪ್ಪ ಪಟ್ಟಣದ ಎನ್‌.ಆರ್‌. ಪುರ ವೃತ್ತದಲ್ಲಿ ಬೈಕ್‌ ಸ್ಟಂಟ್‌ ಮಾಡಿದ ಯುವಕರನ್ನು ಪೊಲೀಸ್‌ ಜೀಪ್‌ನಲ್ಲಿ ಬೆನ್ನಟ್ಟಿ ಅಡ್ಡಗಟ್ಟಿ ಯುವಕರಿಗೆ ಲಾಠಿರುಚಿ ನೀಡಿದರು. ನಗರದ ಎಂಜಿ. ರಸ್ತೆ, ಐ.ಜಿ. ರಸ್ತೆ, ಮಾರ್ಕೆಟ್‌ ರಸ್ತೆ, ಬಸವನಹಳ್ಳಿ ರಸ್ತೆ, ಎಂಇಎಸ್‌ ಸರ್ಕಲ್‌, ಹನುಮಂತಪ್ಪ ವೃತ್ತ, ಆಜಾದ್‌ ಪಾರ್ಕ್‌ ವೃತ್ತ, ಎಐಟಿ ವೃತ್ತ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದೆ. ಪೊಲೀಸರಿಗೆ ಲಾಠಿ ಕೊಡಬಾರದು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಯನ್ನು ಬಿಟ್ಟು ಪೊಲೀಸ್‌ ವಾಹನದಲ್ಲಿ ಗಸ್ತು ತಿರುಗುತ್ತಾ ಧ್ವನಿವರ್ಧಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ದಿನಸಿ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಪೆಂಟ್ರೋಲ್‌ ಬಂಕ್‌, ಬ್ಯಾಂಕ್‌, ಎಟಿಎಂ, ಕೃಷಿ  ಔಷಧ ಅಂಗಡಿಗಳು, ಮೆಡಿಕಲ್‌ ಶಾಪ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೂ ಎಂದಿನಂತೆ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next