ದೇವರಹಿಪ್ಪರಗಿ: ಪಟ್ಟಣದ ಕೆರೆಗಳಿಗೆ ನೀರು ಪೂರೈಸುವ ಕಾಲುವೆ ಒಡೆದು ಪಡಗಾನೂರ ಗ್ರಾಮ ವ್ಯಾಪ್ತಿಯಲ್ಲಿನ ಕಲ್ಲು ಕ್ರಷರ್ ಮಾಲೀಕರು ಅನಧಿಕೃತವಾಗಿ ನೀರು ಪಡೆಯುತ್ತಿದ್ದ ಪ್ರದೇಶಕ್ಕೆ ತಹಶೀಲ್ದಾರ್ ಸಿ.ಎ. ಗುಡದಿನ್ನಿ ಹಾಗೂ ಕೆಬಿಜೆಎನ್‍ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೆಬಿಜೆಎನ್‍ಎಲ್ ಇಇ ಬಿ.ಟಿ. ಪಾಟೀಲ, ಎಇಇ ಮಾರುತಿ ಕದಂ ಹಾಗೂ ಎಇ ನಿಂಗನಗೌಡ ಪಾಟೀಲ ಅವರು ಪಡಗಾನೂರ ಹಾಗೂ ದೇವರಹಿಪ್ಪರಗಿ ಮಧ್ಯೆದ ಕ್ರಷರ್ ಗಳಿರುವ ಪ್ರದೇಶಕ್ಕೆ ಭೇಟಿ ನೀಡಿ ಕಾಲುವೆ ಸರಿಪಡಿಸಿದರು.
ನೀರು ಸರಾಗವಾಗಿ ಕೆರೆಗಳಿಗೆ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಂಡರು ಮುಂದಿನ ದಿನಗಳಲ್ಲಿ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರೈತರನ್ನು ಸಮಾಧಾನಪಡಿಸಿದರು.
ಈ ವೇಳೆ ರೈತರಾದ ಅಜೀಜ್ ಯಲಗಾರ, ಸುರೇಶ ಕೊಣ್ಣೂರ ಮಾತನಾಡಿ, ಪಡಗಾನೂರ ಗ್ರಾಮದ ಇನ್ನೊಬ್ಬ ಪ್ರಭಾವಿ ನಾಯಕರು ಸಹ ಅಕ್ರಮವಾಗಿ ನೀರು ಪಡೆಯುತ್ತಿದ್ದಾರೆ. ಇದನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ತಡೆಯಬೇಕು. ಕ್ರಷರ್ ಮಾಲೀಕರಿಗೆ ಈ ಕುರಿತು ನೋಟಿಸ್ ನೀಡಬೇಕು. ಜನತೆ ಹಾಗೂ ರೈತರ ಹಿತ ಕಾಯದೇ ಬೇಕಾಬಿಟ್ಟಿಯಾಗಿ ಕಾಲುವೆ ಒಡೆದು ನೀರು ಪಡೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರಾದ ನಾಗಪ್ಪ ವಡ್ಡೋಡಗಿ, ರಾಮು ದೇಸಾಯಿ, ಯಲ್ಲಾಲಿಂಗ ವಡ್ಡೋಡಗಿ, ಶರಣು ಸೌದಿ, ಮಲ್ಲು ಭಂಡಾರಿ, ಗುರುರಾಜ್ ಜಡಗೊಂಡ, ಮುದುಕಪ್ಪ ಹಡಪದ, ಶಂಕ್ರಪ್ಪ ಸಾಸಾಬಾಳ, ಸಿದ್ದಪ್ಪ ಹಡಪದ, ಉಮೇಶ ಕೋಟಿನ್, ಸಿದ್ದು ಮಸಬಿನಾಳ, ರಮೇಶ ಅಸ್ಕಿ, ಕಾಶೀನಾಥ ಮಡಗೊಂಡ, ಸಂಜು ಕೋಟಿನ್ ಇದ್ದರು.