ಉಪ್ಪುಂದ: ಮರವಂತೆಯ ಮೀನುಗಾರಿಕಾ ಹೊರ ಬಂದರು ಕಾಮಗಾರಿ ಪ್ರದೇಶ ದಲ್ಲಿ ಲಾರಿಯೊಂದು ಬ್ರೇಕ್ ವೈಫಲ್ಯ ದಿಂದ ಚಾಲಕನ ನಿಯಂತ್ರಣ ಕಳೆದು ಕೊಂಡು ಕಡಲಿಗಿಳಿದಿದೆ. ಲಾರಿಯ ಮುಂಭಾಗ ನೀರಿನಲ್ಲಿ ಮುಳುಗುವ ಮುನ್ನ ಚಾಲಕ ಹೊರಕ್ಕೆ ಜಿಗಿದು ಪಾರಾಗಿದ್ದಾನೆ. ಸುಸ್ಥಿತಿಯಲ್ಲಿಲ್ಲದ ಲಾರಿಯನ್ನು ಕಾಮಗಾರಿಗೆ ಬಳಸಿದ್ದುದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣದ ವಿವರ
ಸುಮಾರು 8 ವರ್ಷಗಳ ಹಿಂದೆ ಆರಂಭವಾದ ಬಂದರಿನ ಕಾಮ ಗಾರಿ ದೀರ್ಘ ಸಮಯದಿಂದ ಸ್ಥಗಿತ ವಾಗಿದೆ. ಮಾಡಿದ ಕಾಮಗಾರಿಯೂ ಸಮ ರ್ಪಕವಾಗಿಲ್ಲ ಎಂದು ಇಲ್ಲಿನ ಮೀನುಗಾರರು ದೂರುತ್ತಿದ್ದಾರೆ. ಕಾಮಗಾರಿಯ ವಿನ್ಯಾಸದಲ್ಲಿ ಬದ ಲಾವಣೆ ಮಾಡಿದ ಕಾರಣ ಅದಕ್ಕೆ ತಗಲುವ ಹಣವನ್ನು ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲವಾದ್ದರಿಂದ ಗುತ್ತಿಗೆ ವಹಿಸಿಕೊಂಡ ತಮಿಳುನಾಡಿನ ‘ಎನ್‌ಎಸ್‌ಕೆ ಬಿಲ್ಡರ್’ ಸಂಸ್ಥೆ ಒಂದು ವರ್ಷದ ಹಿಂದೆಯೇ ಕೆಲಸ ನಿಲ್ಲಿಸಿತ್ತು. ಅದರ ಪರಿಣಾಮವಾಗಿ ಸಂಸ್ಥೆಯ ಯಂತ್ರೋಪಕರಣಗಳು, ವಾಹನಗಳು ತುಕ್ಕು ಹಿಡಿದು ಬಳಸಲಾರದ ಸ್ಥಿತಿಗೆ ತಲಪಿವೆ.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಈ ಹಿಂದೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ್ದರು. ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಅಂದಾಜು ಪಟ್ಟಿ ತಯಾರಿಸಿ ಸರಕಾ ರದ ಅನುಮೋದನೆಗೆ ಕ್ರಮ ಕೈಗೊಳ್ಳು ವಂತೆ ಜಿಲ್ಲಾಧಿಕಾರಿ ಹಾಗೂ ಮೀನು ಗಾರಿಕೆ ಮತ್ತು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಕಾಮಗಾರಿ ಪುನರಾರಂಭ
ಚುನಾವಣ ನೀತಿ ಸಂಹಿತೆ ಅವಧಿ ಮುಗಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಸೂಚನೆ ಹಿನ್ನೆಲೆಯಲ್ಲಿ ಕಾಮಗಾರಿ ಪುನರಾರಂಭಿಸಲು ಗುತ್ತಿಗೆದಾರರು ಮುಂದಾದರು. ಸುಸ್ಥಿತಿಯಲ್ಲಿಲ್ಲದ ಲಾರಿಯನ್ನು ಬಳಸಿದ್ದರಿಂದ ಅದು ನಿಯಂತ್ರಣಕ್ಕೆ ಬಾರದೆ ಕಡಲಿಗೆ ಇಳಿಯಿತು ಎನ್ನಲಾಗುತ್ತಿದೆ. ಕೆಳಮುಖವಾಗಿ ನಿಂತಿರುವ ಲಾರಿ ಅಲೆಗಳ ಹೊಡೆತದಿಂದ ಅಷ್ಟಷ್ಟೆ ಕೆಳಕ್ಕೆ ಜಾರುತ್ತಿದ್ದು, ತತ್‌ಕ್ಷಣ ಮೇಲಕ್ಕೆ ಎತ್ತದಿದ್ದರೆ ಅದು ಸಂಪೂರ್ಣ ಸಮುದ್ರ ಪಾಲಾಗುವ ಭೀತಿ ಇದೆ.