Advertisement

ಏಕಕಾಲದ ಚುನಾವಣೆಯಿಂದ ದುಂದುವೆಚ್ಚಕ್ಕೆ ಬ್ರೇಕ್‌: ಪ್ರಣಬ್‌

03:45 AM Feb 01, 2017 | Team Udayavani |

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಬೇರೆ ಬೇರೆ ಕಾಲದಲ್ಲಿ ನಡೆಸುವುದರಿಂದ ದೇಶಕ್ಕೆ ಮತ್ತಷ್ಟು ಹೊರೆ. ಈ ಹೊರೆಯನ್ನು ತಗ್ಗಿಸುವ ಅಗತ್ಯ ತುರ್ತು ಇದೆ. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಪಕ್ಷಗಳ ದುಂದುವೆಚ್ಚ ಸಂಸ್ಕೃತಿಗೂ ಕಡಿವಾಣ ಹಾಕಬಹುದು ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ. ಮಂಗಳವಾರ ಆರಂಭವಾದ ಬಜೆಟ್‌ ಅಧಿವೇಶನ ಪ್ರಯುಕ್ತ ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾತನಾಡಿದರು.

Advertisement

“ಪದೇಪದೆ ಚುನಾವಣೆ ನಡೆದರೆ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳುತ್ತವೆ. ಸಾರ್ವಜನಿಕರ ಸಹಜ ಜೀವನಕ್ಕೆ ಭಂಗವೂ ಆಗುತ್ತದೆ. ಚುನಾವಣಾ ಕರ್ತವ್ಯ ಕಾರಣ ಮಾನವ ಸಂಪನ್ಮೂಲದ ಮೇಲೆಯೂ ಅನಗತ್ಯ ಭಾರ ಬೀಳುತ್ತದೆ. ಏಕಕಾಲದ ಚುನಾವಣೆ ರೀತಿ ಪಕ್ಷಗಳ ದುಂದುವೆಚ್ಚದ ಕುರಿತೂ ಚರ್ಚಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಪರ ಬ್ಯಾಟಿಂಗ್‌: ಇದೇ ವೇಳೆ ಪ್ರಣಬ್‌, ಕಳೆದವರ್ಷ ಸೆ.29ರಂದು ನಡೆದ ಸರ್ಜಿಕಲ್‌ ದಾಳಿಯನ್ನು ಬಲವಾಗಿ ಸಮರ್ಥಿಸಿಕೊಂಡರು. “ಗಡಿ ದಾಟಲಿದ್ದ ಉಗ್ರರನ್ನು ಮುಂಚಿತವಾಗಿಯೇ ನಿರ್ನಾಮ ಮಾಡಿದ ನಮ್ಮ ಸೈನ್ಯದ ಸಾಹಸವನ್ನು ಮೆಚ್ಚಲೇಬೇಕಿದೆ.  ನಾಲ್ಕು ದಶಕಗಳಿಂದ ಭಾರತದಲ್ಲಿ ಉಗ್ರವಾದ ಬೀಡುಬಿಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಷ್ಟೇ ಉಗ್ರಗಾಮಿಗಳ ಚಟುವಟಿಕೆಗಳಿಲ್ಲ. ದೇಶದ ಇತರೆ ಭಾಗದ ಗಡಿಯಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಜಾಗತಿಕ ಸಮುದಾಯದ ಮೇಲೂ ಉಗ್ರವಾದ ದುಷ್ಪರಿಣಾಮ ಬೀರಿದೆ. ಇತರೆ ದೇಶಗಳೊಂದಿಗೆ ಭಾರತವೂ ಕೈಜೋಡಿಸಿ ಈ ಉಗ್ರವಾದವನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಅಪನಗದೀಕರಣಕ್ಕೆ ಪ್ರಶಂಸೆ: “ಕಪ್ಪುಹಣ ತಡೆಗೆ ಹಳೇ ನೋಟುಗಳನ್ನು ಸರ್ಕಾರ ನಿಷೇಧಿಸಿದ್ದರಿಂದ ಬಡವರ್ಗದವರಿಗೆ ಅನುಕೂಲವಾಗಿದೆ. ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧದ ಈ ಹೋರಾಟ ನಿಜಕ್ಕೂ ಮೈಲುಗಲ್ಲು. ಬಡವರ ಪರವಾಗಿ ಸರ್ಕಾರ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಎಸ್‌ಟಿ ಒಳ್ಳೆಯ ನಿರ್ಧಾರ: ಸರ್ಕಾರದ ಮಹತ್ವದ ಕನಸುಗಳಲ್ಲಿ ಒಂದಾದ ಸರಕು ಹಾಗೂ ಸೇವಾ ತೆರಿಗೆಯ ಕುರಿತು ಪ್ರಣಬ್‌, “ಕೆಲವೊಂದು ಆರ್ಥಿಕ ಮುಗ್ಗಟ್ಟುಗಳನ್ನು ಬಿಡಿಸಲು ಜಿಎಸ್‌ಟಿ ಕಮಿಟಿ ಶ್ರಮಿಸುತ್ತಿರುವುದಕ್ಕೆ ಧನ್ಯವಾದಗಳು. ಜಾಗತಿಕ ಆರ್ಥಿಕತೆ ಕುಸಿಯುತ್ತಿರುವ ವೇಳೆಯಲ್ಲಿ ಆರ್ಥಿಕ ಪ್ರಗತಿಯ ಕಾರಣಕ್ಕಾಗಿ ಜಗತ್ತಿನ ಇತರೆ ದೇಶಗಳಿಂದ ಹೊಗಳಿಸಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.

Advertisement

ಅಲ್ಲದೆ, ನರೇಂದ್ರ ಮೋದಿ ಸರ್ಕಾರ ಫೆಬ್ರವರಿ 1ರಂದು ಮಂಡಿಸುತ್ತಿರುವ ಬಜೆಟ್‌ ಅನ್ನು ಐತಿಹಾಸಿಕ ಬಜೆಟ್‌ಗೆ ಪ್ರಣಬ್‌ ಹೋಲಿಸಿದ್ದಾರೆ. “ಫೆಬ್ರವರಿ 1ರಂದೇ ಬಜೆಟ್‌ ಆಗುತ್ತಿರುವುದು ಭಾರತದಲ್ಲಿ ಇದೇ ಮೊದಲು. ಈ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿರುವುದಕ್ಕೆ ನಿಜಕ್ಕೂ ಖುಷಿ ಆಗುತ್ತಿದೆ’ ಎಂದರು. ರಾಷ್ಟ್ರಪತಿ ಪ್ರಣಬ್‌ಗ ಇದೇ ಕೊನೆಯ ಅಧಿವೇಶನವಾಗಿದೆ.

ಮಾಜಿ ಸಚಿವ ಅಹ್ಮದ್‌ಗೆ ಹೃದಯಾಘಾತ
ಬಜೆಟ್‌ ಅಧಿವೇಶನದ ರಾಷ್ಟ್ರಪತಿ ಭಾಷಣದ ವೇಳೆ ಮಾಜಿ ಸಚಿವ ಇ. ಅಹ್ಮದ್‌ ಹೃದಯಾಘಾತದಿಂದ ಕುಸಿದು ಬಿದ್ದ ಘಟನೆ ನಡೆಯಿತು. ಕೇರಳ ಮಲಪ್ಪುರಂನ ಸಂಸದರಾದ ಅವರನ್ನು ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೃತಕ ಜೀವರಕ್ಷಕವನ್ನು ಅಳವಡಿಸಲಾಗಿದೆ. “ಆಸ್ಪತ್ರೆಗೆ ಸಂಸದರು ದಾಖಲಾಗುವಾಗ ನಾಡಿಮಿಡಿತ ನಿಂತಿತ್ತು. ವೈದ್ಯರ ತಂಡ ಕೂಡಲೇ ಪರೀಕ್ಷಿಸಿ, ಹೃದಯ ಪುನಃ ಬಡಿದುಕೊಳ್ಳುವಂತೆ ಮಾಡಿದರು. ಈಗ ಅವರನ್ನು ತೀವ್ರ ನಿಘಾಘಟಕದಲ್ಲಿಡಲಾಗಿದೆ’ ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಅಹಮದ್‌ ಈ ಹಿಂದೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಖಾತೆ ಸಹಾಯಕ ಸಚಿವರಾಗಿದ್ದರು.

ದೇಶದಲ್ಲಿ ಇಂದು ಉದ್ಯೋಗ ಸೃಷ್ಟಿಯೇ ದೊಡ್ಡ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫ‌ಲವಾಗಿದ್ದು, ಉದ್ಯೋಗ ಸೃಷ್ಟಿಯತ್ತ ಗಮನವನ್ನೇ ಹರಿಸುತ್ತಿಲ್ಲ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ 

ಕಾಂಗ್ರೆಸ್‌ ಉಪಾಧ್ಯಕ್ಷರ ಹೇಳಿಕೆ ಸರಿಯಾಗಿಲ್ಲ. ಅವರದ್ದು ಉತ್ಪ್ರೇಕ್ಷೆಯ ಹೇಳಿಕೆಯಾಗಿದೆ.
ಆರ್‌.ಪಿ.ರೂಡಿ, ಕೇಂದ್ರ ಸಚಿವ. 

Advertisement

Udayavani is now on Telegram. Click here to join our channel and stay updated with the latest news.

Next