Advertisement

ಮಾವು ಮಾರ್ಕೆಟಲ್ಲಿ ಕಮಿಷನ್‌ ದಂಧೆಗೆ ಕಡಿವಾಣ ಹಾಕಿ

09:09 AM May 27, 2019 | Team Udayavani |

ಶ್ರೀನಿವಾಸಪುರ: ಮಾವು ಮಾರಾಟದಲ್ಲಿ ರೈತರನ್ನು ವಂಚನೆ ಮಾಡುತ್ತಿರುವ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾತ್ರಿ ಹರಾಜು ನಿಲ್ಲಿಸಬೇಕು. ಬಿಳಿಚೀಟಿ, ಕಮಿಷನ್‌ ದಂಧೆಗೆ ಕಡಿವಾಣ ಹಾಕಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಒದಗಿಸಲು ಮೇ 30ರಂದು ಹೋರಾಟ ಮಾಡಲಾಗುವುದು ಎಂದು ರೈತ ಸಂಘ ತಿಳಿಸಿದೆ.

Advertisement

ರೋಜಾರ್‌ನಹಳ್ಳಿ ಗೇಟ್‌ನಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿ, ಗುರುವಾರ ಪಟ್ಟಣದ ಇಂದ್ರಭವನ್‌ ವೃತ್ತ ಬಂದ್‌ ಮಾಡುವ ನಿರ್ಧಾರ ಮಾಡಲಾಗಿದ್ದು, ರೈತರು ಸೇರಿ ನ್ಯಾಯಕ್ಕಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.

ಬಿಳಿ ಚೀಟಿ ದಂಧೆ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಮಾವಿಗೆ ಪ್ರಸಿದ್ಧಿಯಾಗಿರುವ ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ದಲ್ಲಾಳಿಗಳದ್ದೇ ಆರ್ಭಟ. ಅಮಾಯಕ ರೈತರನ್ನು ವಂಚನೆ ಮಾಡುವ ದೊಡ್ಡ ಜಾಲವೇ ಇದೆ. ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಮಂಡಿ ಪರವಾನಗಿ ಇರುವ ಚೀಟಿಯನ್ನು ಕೊಡಬೇಕಾದ ಮಾಲಿಕರು, ಬಿಳಿಚೀಟಿ ನೀಡಿ ಕಮಿಷನ್‌ಅನ್ನು ರಾಜಾರೋಷವಾಗಿ ತೆಗೆದುಕೊಳ್ಳುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

ವಿಶ್ರಾಂತಿ ಕೊಠಡಿ ಇಲ್ಲ: ಜೊತೆಗೆ ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಮಾರುಕಟ್ಟೆಯಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಸಿಸಿ ಕ್ಯಾಮೆರಾ ಹಾಗೂ ಪೊಲೀಸ್‌ ವ್ಯವಸ್ಥೆಯಿಲ್ಲ. ಮಾರುಕಟ್ಟೆಯಲ್ಲಿ ಆಗುವ ಅನಾಹುತಗಳ ಬಗ್ಗೆ ಕೇಳುವವರು ಇಲ್ಲ. ಇನ್ನು ಮಾರುಕಟ್ಟೆಗೆ ಆಗಮಿಸುವ ರೈತರಿಗೆ ನೀರು, ಶೌಚಾಲಯ, ಊಟದ ವ್ಯವಸ್ಥೆ, ವಿಶ್ರಾಂತಿ ಕೊಠಡಿ ಇಲ್ಲದೆ ಮಾವು ಮಾರಾಟ ಮಾಡುವವರೆಗೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ರೈತರು ರೋಗಗಳಿಗೆ ತುತ್ತಾಗಬೇಕಾದೆ ಎಂದು ಹೇಳಿದರು.

ಜಿಲ್ಲಾಡಳಿತಕ್ಕೆ ಮನವಿ: ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌ ಮಾತನಾಡಿ, ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆ ಮಾವಿನ ಸುಗ್ಗಿಯ ಸಮಯದಲ್ಲಿ ಅಧಿಕಾರಿಗಳಿಗೆ ಹಾಗೂ ದಲ್ಲಾಳಿಗಳಿಗೆ ಚಿನ್ನದ ಮೊಟ್ಟೆ ಇಡುವ ಮಾರುಕಟ್ಟೆಯಾಗಿದೆ ಎಂದು ಹೇಳಿದರು.

Advertisement

ರೈತರ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡುವ ಕಾಯಕವೇ ಹೊರತು, ಮೂಲ ಸೌಕರ್ಯ, ರೈತರನ್ನು ಸಂರಕ್ಷಣೆ ಮಾಡುತ್ತಿಲ್ಲ. ಕಷ್ಟಾಪಟ್ಟು ಬೆಳೆದ ಬೆಳೆ ಮಾರುಕಟ್ಟೆಗೆ ತಂದರೆ ಅದನ್ನು ಕಾಲಕಸದಂತೆ ಕಾಣುವ ದಲ್ಲಾಳಿಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳ ಮಧ್ಯೆ ನಲುಗಿರುವ ರೈತರ ರಕ್ಷಣೆಗಾಗಿ ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷೆ ಎ.ನಳಿನಿ, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಹಸಿರು ಸೇನೆ ಅಧ್ಯಕ್ಷ ಆಚಂಪಲ್ಲಿ ಗಂಗಾಧರ, ಹೊಸಹಳ್ಳಿ ಚಂದ್ರಪ್ಪ, ಬಂಗವಾದಿ ನಾಗರಾಜಗೌಡ, ಮುನಿಯಪ್ಪ, ತೆರ್ನಹಳ್ಳಿ ರಮೇಶ್‌, ನಾಗರಾಜ, ವೆಂಕಿ, ರಾಯಲ್ಪಾಡು ಹರೀಶ್‌, ಪುತ್ತೇರಿ ರಾಜು ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next