ಬ್ರೆಜಿಲ್: ಭೀಕರ ಪ್ರವಾಹದಿಂದ ಬ್ರೆಜಿಲ್ ತತ್ತರಿಸಿಹೋಗಿದ್ದು, ದಕ್ಷಿಣ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Mangaluru:ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ
ರಾಜ್ಯ ರಾಜಧಾನಿ ಪೋರ್ಟೊ ಅಲೆಗ್ರೇಯಿಂದ 17 ಕಿಲೋ ಮೀಟರ್ ದೂರದಲ್ಲಿರುವ ಎಲ್ ಡೊರಾಡೊ ಡೊ ಸುಲ್ ನಲ್ಲಿ ಜನರು ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಕಳೆದ ಮೂರು ದಿನಗಳಿಂದ ನಮಗೆ ಏನೂ ಆಹಾರ ಸಿಕ್ಕಿಲ್ಲ, ಕೇವಲ ಬ್ಲಾಂಕೆಟ್ ಮಾತ್ರ ಸಿಕ್ಕಿದ್ದು, ನನ್ನ ಕುಟುಂಬ ಸದಸ್ಯರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಯುವಕ ರಿಕಾರ್ಡೋ ಜ್ಯೂನಿಯರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಭಾರೀ ಪ್ರವಾಹದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ನಿರಾಶ್ರಿತರಾದ ಜನರು ಈಗಲೂ ರಕ್ಷಣೆಗಾಗಿ ಕಾಯುತ್ತಿದ್ದಾರೆ. ಹೀಗೆ ಆಪತ್ತಿನಲ್ಲಿ ಸಿಲುಕಿದವರನ್ನು ಸಣ್ಣ ದೋಣಿಗಳ ಮೂಲಕ ರಕ್ಷಿಸಬೇಕಾಗಿದೆ. ಈವರೆಗೆ 1,55,000 ಮಂದಿ ನಿರ್ವಸಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.