Advertisement

ಸಾಹಸಿ ಮಕ್ಕಳಿಗೆ ಶೌರ್ಯ ಪ್ರಶಸ್ತಿ -ಹೆತ್ತವರನ್ನು ಕಡೆಗಣಿಸಬಾರದು- ಲಕ್ಷ್ಮಿ ಕಿವಿಮಾತು

11:28 PM Nov 23, 2023 | Team Udayavani |

ಬೆಂಗಳೂರು: ಮಕ್ಕಳು ತಮ್ಮ ಹೆತ್ತವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು. ಜತೆಗೆ ಪಾಲಕರು ತಮ್ಮ ಮಕ್ಕಳಿಗೆ ನೆಹರೂ, ಗಾಂಧೀಜಿಯಂಥ ಮಹಾನ್‌ ವ್ಯಕ್ತಿಗಳ ಬಗ್ಗೆ ತಿಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

Advertisement

ಕಬ್ಬನ್‌ ಪಾರ್ಕಿನ ಬಾಲ ಭವನದಲ್ಲಿ ಗುರುವಾರ ನಡೆದ “ಮಕ್ಕಳ ದಿನಾಚರಣೆ” ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅನೇಕ ಯೋಜನೆಗಳಿದ್ದು, ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸುವ ಸಲುವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪಾಲಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ| ಜಿ.ಸಿ.ಪ್ರಕಾಶ್‌, ನಿರ್ದೇಶಕ ಎಂ.ಎಸ್‌.ಅರ್ಚನಾ, ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ಬಾಲಭವನದ ಕಾರ್ಯದರ್ಶಿ ನಿಶ್ಚಲ್‌ ಮತ್ತಿತರರು ಉಪಸ್ಥಿತರಿದ್ದರು.

ಮೂವರಿಗೆ ಹೊಯ್ಸಳ, ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ
ಕೊಡಗಿನ ಅರ್ಜುನ್‌ ಸಾಗರ್‌, ತುಮಕೂರು ಜಿಲ್ಲೆಯ ಆರ್‌.ಸಿ.ಗೌಡ ಹಾಗೂ ಕುಮಾರಿ ಶಾಲು ಅವರಿಗೆ 2023-24ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಮಕ್ಕಳಿಗೆ 10 ಸಾವಿರ ರೂ., ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಅರ್ಜುನ್‌ ಸಾಗರ್‌
 ವಿರಾಜಪೇಟೆ ತಾಲೂಕಿನ ನೋತ್ಯಾ ಗ್ರಾಮದ ವೈ.ಡಿ.ಅರ್ಜುನ್‌ ಸಾಗರ್‌ ಎ.22ರಂದು ಸ್ನೇಹಿತರೊಂದಿಗೆ ಆಟವಾಡುವ ಸಂದರ್ಭದಲ್ಲಿ ಮೇಯಲು ಬಂದ ಹಸು ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಅರ್ಜುನ್‌ ಜೀವದ ಹಂಗು ತೊರೆದು, ನಿರಂತರ ಐದು ಗಂಟೆಗಳ ಕಾಲ ಪ್ರಯತ್ನಿಸಿ ಹಸುವನ್ನು ಪ್ರಾಣಾಪಾಯದಿಂದ ಕಾಪಾಡಿದ್ದರು.
ಆರ್‌.ಸಿ.ಗೌಡ
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಗಲಹಳ್ಳಿ ಗ್ರಾಮದ ಆರ್‌.ಸಿ.ಗೌಡ ಜ.29ರಂದು ಹಂದಿಕುಂಟೆ ಅಗ್ರಹಾರದ ಬಾಲಕಿಯರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮುಳುಗುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಸಹಾಯದಿಂದ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದರು.
 ಶಾಲು
ತುಮಕೂರು ಜಿಲ್ಲೆ ಊರುಕೆರೆ ಅಂಚೆಯ ಕುಚ್ಚಂಗಿಪಾಳ್ಯದ ಶಾಲು ಜು.8ರಂದು ತನ್ನ ಸಹೋದರಿಯೊಂದಿಗೆ ತೋಟದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದ ತನ್ನ ಸಹೋದರಿಯನ್ನು ಲೈಫ್ ಜಾಕೆಟ್‌ ಧರಿಸಿಕೊಂಡು ಬಾವಿಗೆ ಹಾರಿ ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದರು.

ವ್ಯಕ್ತಿ ವಿಭಾಗದಲ್ಲಿ ನಾಲ್ವರಿಗೆ ಪ್ರಶಸ್ತಿ
ವ್ಯಕ್ತಿ ವಿಭಾಗದಲ್ಲಿ ಧಾರವಾಡ ಜಿಲ್ಲೆಯ ಪರಶುರಾಮ, ಬಳ್ಳಾರಿಯ ರಜನಿ ಲಕ್ಕಾ, ಮಂಡ್ಯ ಜಿಲ್ಲೆಯ ಎಚ್‌.ಆರ್‌.ಕನ್ನಿಕಾ, ತುಮಕೂರು ಜಿಲ್ಲೆಯ ಲೋಕರಾಜು ಅರಸು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಸಂಘ ಸಂಸ್ಥೆ ವಿಭಾಗದಲ್ಲಿ ಬೆಳಗಾವಿ ಜಿಲ್ಲಾ ರೋಲರ್‌ ಸಂಸ್ಥೆ, ಬೀದರ್‌ ಜಿಲ್ಲೆಯ ಮರಖಲ ಬೊಮ್ಮಗೊಂಡೇಶ್ವರ ಎಜುಕೇಶನ್‌ ಚಾರಿಟಬಲ್‌ ಟ್ರಸ್ಟ್‌, ಉಡುಪಿ ಜಿಲ್ಲೆಯ ಗುರು ರಾಘವೇಂದ್ರ ಸೇವಾ ಟ್ರಸ್ಟ್‌ , ಶಿವಮೊಗ್ಗ ಜಿಲ್ಲೆಯ ಬಾಪೂಜಿ ಎಜುಕೇಷನ್‌ ಸೊಸೈಟಿ ರಾಜ್ಯ ಪ್ರಶಸ್ತಿಗೆ ಭಾಜನರಾದವು.

Advertisement

Udayavani is now on Telegram. Click here to join our channel and stay updated with the latest news.

Next