ಬೆಂಗಳೂರು: “ದೇವದಾಸಿ’ ಎಂಬ ಅನಿಷ್ಟ ಪದ್ಧತಿಯಿಂದ ಹೊರಬಂದ ಮಹಿಳೆಯೊಬ್ಬರು ಇದೀಗ ಗ್ರಾಮ ಪಂಚಾಯ್ತಿ ಕಸದ ವಾಹನದ ಚಾಲಕಿ ಆಗಿ ಕಾರ್ಯನಿರ್ವಹಿಸಿ ಮಾದರಿ ಆಗಿದ್ದಾರೆ. ಆ ಮೂಲಕ ಹೀಗೂ, ದೇವದಾಸಿ ಯರು ತಮ್ಮ ಬದುಕು ಕಟ್ಟಿಕೊಳ್ಳಬಹುದು ಎಂಬುವುದನ್ನು ನಿರೂಪಿಸಿದ್ದಾರೆ.
ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಮೊರಬ ಗ್ರಾಮ ಪಂಚಾಯ್ತಿಯ ಬಡೆಲಡಕು ಅಡಿವೆಮ್ಮ ಎಂಬ ಮಹಿಳೆ ಕಳೆದ 4 ತಿಂಗಳುಗಳಿಂದ ಗ್ರಾಮ ಪಂಚಾಯ್ತಿ ಕಸದ ವಾಹನ ಚಾಲಕಿಯಾಗಿದ್ದಾರೆ.
ಇದಕ್ಕಾಗಿಯೇ ವಾಹನ ಚಾಲನ ತರಬೇತಿ ಕೇಂದ್ರಕ್ಕೆ ತೆರಳಿ ವಾಹನ ಚಾಲನಾ ತರಬೇತಿ ಪಡೆದಿದ್ದಾರೆ. ಇದೀಗ 4 ಚಕ್ರದ ವಾಹನವನ್ನು ಸಲೀಲಾಗಿ ಓಡಿಸುವುದನ್ನು ಪ್ರಾರಂಭಿಸಿದ್ದಾರೆ. ಪ್ರತಿದಿನ ಮೂರ್ನಾಲ್ಕು ಊರುಗಳನ್ನು ಸುತ್ತಿ ಕಸ ಸಂಗ್ರಹ ಮಾಡುತ್ತಿದ್ದಾರೆ. ಬೆಳಗ್ಗೆ ವೇಳೆ ಸಹಾಯಕ ಸಿಬ್ಬಂದಿ ಜತೆಗೆ ಮನೆ ಮನೆಗೆ ತೆರಳಿ ಒಣಕಸ -ಹಸಿಕಸ ಸಂಗ್ರಹಿಸಿ ಬಳಿಕ ಒಟ್ಟು ಸಂಗ್ರಹವಾದ ಕಸವನ್ನು ತ್ಯಾಜ್ಯ ಸಂಗ್ರಹ ಘಟಕಕ್ಕೆ ರವಾನಿಸುತ್ತಾರೆ. ಕಸ ಸಂಗ್ರಹ ಕೆಲಸ ಮುಗಿದ ತಕ್ಷಣ ತಮ್ಮ ಮನೆಯ ಕಾಯಕದಲ್ಲಿ ನಿರತವಾಗುತ್ತಾರೆ.
ದೇವದಾಸಿ ಪದ್ಧತಿಯಿಂದ ನಾನು ಹಲವು ಅಪಮಾನಗಳನ್ನು ಅನುಭವಿಸಿದ್ದೆ. ಆ ಹಿನ್ನೆಲೆಯಲ್ಲಿ ಈ ಅನಿಷ್ಟ ಪದ್ಧತಿಯಿಂದ ಹೊರಬಂದೆ. ಆಗ ಭವಿಷ್ಯತ್ತಿನ ಬಗ್ಗೆ ಭಯ ಕಾಡ ತೊಡಗಿತ್ತು. ಮೊದಲು ಟೈಲರಿಂಗ್ ಕೆಲಸ ಮಾಡಿದೆ. ಆ ನಂತರ ನರೇಗಾದಲ್ಲಿ ಕೂಲಿ ಮಾಡಿದೆ. ಇಂತಹ ಕಷ್ಟದ ಸಂದರ್ಭ ದಲ್ಲಿ ಮೊರಬ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಪಿಡಿಒ ನನಗೆ ನೀಡಿದ ಆಸರೆಯನ್ನು ನಾನು ಸಾಯುವ ವರೆಗೂ ಮರೆಯಲು ಸಾಧ್ಯವಿಲ್ಲ ಎಂದು ಅಡಿವೆಮ್ಮ ಎಂಬ ಹೇಳುತ್ತಾರೆ.
ನನಗೆ ಸೈಕಲ್ ಓಡಿಸಲು ಕೂಡ ಬರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರು, ಪಿಡಿಒ ಸೇರಿದಂತೆ ಎಲ್ಲರೂ ಧೈರ್ಯ ತುಂಬಿ, ನಾಲ್ಕು ಚಕ್ರದ ವಾಹನ ಕಲಿಯಲು ಆಸರೆಯಾದರು. ಗ್ರಾಮ ಪಂಚಾಯ್ತಿ ಸ್ವಂತ ಹಣದಿಂದ ಕೂಡ್ಲಗಿಗೆ ಕಳುಹಿಸಿ ನನಗೆ ವಾಹನ ಚಾಲನಾ ತರಬೇತಿ ನೀಡಲಾಯಿತು. ವಾಹನ ಚಾಲನಾ ಪರವಾನಗಿ ಪಡೆದ ನಂತರ ಇದೀಗ ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನದ ಜವಾಬ್ದಾರಿ ಕೂಡ ವಹಿಸಿದ್ದಾರೆ. ನನಗೆ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಮೊರಬ ಗ್ರಾಮ ಪಂಚಾಯ್ತಿಗೆ ಋಣಿಯಾಗಿದ್ದೇನೆ ಎನ್ನುತ್ತಾರೆ.
ದೇವದಾಸಿ ಪದ್ಧತಿ ವಿರುದ್ಧ ಹೋರಾಡುತ್ತೇನೆ : ಪ್ರೌಢಶಾಲೆವರೆಗೂ ಶಿಕ್ಷಣ ಕಲಿತಿದ್ದೀರಿ, ಆದರೆ ದೇವದಾಸಿ ಪದ್ಧತಿಗೆ ಹೇಗೆ ಸಮರ್ಪಣೆ ಮಾಡಿಕೊಂಡಿರಿ ಎಂದು ಪ್ರಶ್ನಿಸುತ್ತಿದ್ದಂತೆ ಅಡಿಮೆಮ್ಮ ಭಾವುಕರಾದರು. ನನ್ನ ಅಜ್ಜಿ , ನನ್ನವ್ವ ತೆಗೆದುಕೊಂಡ ತೀರ್ಮಾನದಿಂದ ನನ್ನ ಬದುಕು ಮೂರಾಬಟ್ಟೆಯಾಯಿತು ಎಂದು ದುಃಖೀಸಿದರು. ನಾನೀಗ ಮೂರು ಮಕ್ಕಳ ತಾಯಿ. ಆ ಮಕ್ಕಳಿಗೆ ಶಾಲೆಯಲ್ಲಿ ತಂದೆ ಹೆಸರು ಕೇಳಿದಾಗ ಅವು ಕೂಡ ತಂದೆ ಯಾರು ಎಂದು ಹೇಳಲಾಗದೆ ಕಣ್ಣೀರಿಟ್ಟಿರುವ ಪ್ರಸಂಗ ಕೂಡ ಇದೆ. ಇಂತಹ ಹಲವು ಅಪಮಾನಗಳನ್ನು ನುಂಗಿಕೊಂಡಿದ್ದೇನೆ. ಜತೆಗೆ ನೆಂಟರ ಮನೆ ಶುಭ ಕಾರ್ಯಗಳಿಗೆ ಪತಿ-ಪತ್ನಿಯರು ಜೋಡಿಯಾಗಿ ಬಂದಾಗ ಅವರನ್ನು ನೋಡಿದಾಗ ದೇವರೆ ನನಗೆ ಯಾಕೆ ಈ ಬದುಕು ಕೊಟ್ಟೆ ಎಂದು ಅತ್ತಿರುವ ಘಟನೆ ಗಳು ಇವೆ ಎಂದು ಕಣ್ಣೀರು ಹಾಕಿದರು. ಸಮಾಜದಲ್ಲಿ ದೇವದಾಸಿ ಪದ್ಧತಿ ತೊಲಗಬೇಕು.ದೇವದಾಸಿ ಪದ್ಧತಿಯ ವಿರುದ್ಧ ಸರ್ಕಾರ ಹಮ್ಮಿಕೊಳ್ಳುವ ಜನಜಾಗೃತಿ ಕಾರ್ಯಕ್ರಮಗಳಿಗೆ ಕೈ ಜೋಡಿಸುತ್ತೇನೆ. ಈ ಅನಿಷ್ಟ ಪದ್ಧತಿ ವಿರುದ್ದ ಹೋರಾಡುತ್ತೇನೆ ಎನ್ನುತ್ತಾರೆ.
ದೇವದಾಸಿ ಪದ್ಧತಿಯಿಂದ ಸಾಕಷ್ಟ ಮಹಿಳೆಯರು ಮತ್ತು ಮಕ್ಕಳು ತೊಂದ ರೆಗೆ ಒಳಪಟ್ಟಿದ್ದಾರೆ. ಸರ್ಕಾರ ಕಾಯ್ದೆ ತಂದಿದೆ. ಆದರೂ ಸರ್ಕಾರಕ್ಕೆ ಗೊತ್ತಾಗದ ರೀತಿಯಲ್ಲಿ ಹೆಣ್ಣು ಮಕ್ಕಳನ್ನು ಈ ಅನಿಷ್ಟ ಪದ್ಧತಿಗೆ ನೂಕುವ ಪ್ರವೃತ್ತಿ ಇನ್ನೂ ಇದೆ. ಹೀಗಾಗಿ ಇಂತಹ ಮಕ್ಕಳ ಶಿಕ್ಷಣ ಜತೆಗೆ ಬದುಕನ್ನು ಕೂಡ ಕಸಿದುಕೊಳ್ಳುವ ಕೆಲಸ ಆಗುತ್ತಿದ್ದು ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆ.
– ವಾಸುದೇವ ಶರ್ಮಾ, ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ
– ದೇವೇಶ ಸೂರಗುಪ್ಪ