Advertisement
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಬೆಂಗಳೂರು ನಗರದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನ ಮಂಡಲದ ಅಧಿವೇಶನದಲ್ಲಿ ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 10,000 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಇದಕ್ಕೆ ಪೂರಕವಾಗಿ ಒಂದಷ್ಟು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಬ್ರ್ಯಾಂಡ್ ಬೆಂಗಳೂರು ನಗರ ಸಾಕಾರಕ್ಕೆ ವಿಶೇಷ ಮುತುವರ್ಜಿ ವಹಿಸಿ ಕಾರ್ಯೋನ್ಮುಖವಾಗಿದ್ದಾರೆ. ಕರ್ನಾಟಕದ ಹೆಬ್ಟಾಗಿಲು ಎಂದು ಪರಿಗಣಿಸಲ್ಪಟ್ಟಿರುವ, ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರಕ್ಕೂ ಬ್ರ್ಯಾಂಡ್ ಬೆಂಗಳೂರು ಮಾದರಿಯ ಯೋಜನೆಯೊಂದು ಸಿದ್ಧಪಡಿಸುವುದು ಅಪೇಕ್ಷಣೀಯವಾಗಿದೆ.
Related Articles
ಮಂಗಳೂರು ನಗರ ಬೆಳೆಯುತ್ತಿದೆ. ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ಸಂಚಾರ ದಟ್ಟನೆ, ಮಾಲಿನ್ಯ, ರಸ್ತೆ ಸೌಲಭ್ಯ ಸಹಿತ ಮೂಲಸೌಕರ್ಯಗಳ ಸಮಸ್ಯೆಗಳನ್ನು ಮಂಗಳೂರು ನಗರವೂ ಎದುರಿಸುತ್ತಿದೆ. ತ್ಯಾಜ್ಯ ನಿರ್ವಹಣೆಯೂ ಒಂದು ಸವಾಲು ಆಗಿ ಪರಿಣಮಿಸುತ್ತಿದೆ. ವೈಜ್ಞಾನಿಕ ವಿಲೇವಾರಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಸಮರ್ಪಕ ತ್ಯಾಜ್ಯ ವಿಂಗಡನೆ, ತ್ಯಾಜ್ಯ ಸಂಗ್ರಹಣೆಯಲ್ಲಿ ಅಸಮರ್ಪಕತೆ ಮುಂತಾದ ಸಮಸ್ಯೆಗಳು ಬೆಂಗಳೂರಿನಂತೆ ಮಂಗಳೂರಿನ ಲ್ಲೂ ಇವೆ. ನಗರದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂದಷ್ಟು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಇದು ಕೆಲವೊಂದು ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿದೆ. ಸಮಗ್ರ ನಗರ ವ್ಯಾಪ್ತಿಯನ್ನು ಹೊಂದಿಕೊಂಡು ನಗರದ ಬೆಳವಣಿಗೆ ಗತಿಯ ದೃಷ್ಟಿಯಲ್ಲಿಟ್ಟುಕೊಂಡು ಬ್ರ್ಯಾಂಡ್ ಬೆಂಗಳೂರು ಮಾದರಿಯಲ್ಲೇ ಮಂಗಳೂರು ನಗರಕ್ಕೂ ಕಾಲಮಿತಿಯನ್ನು ಹಾಕಿಕೊಂಡು ಸಮಗ್ರ ಯೋಜನೆಯನ್ನು ರೂಪಿಸುವುದು ಅತೀ ಅವಶ್ಯವಾಗಿದೆ.
Advertisement
ಮಂಗಳೂರು ನಗರದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಾಯೋಜನೆ ರೂಪಿಸುವ ಪ್ರಯತ್ನಗಳು ಈ ಹಿಂದೆ ಹಲವಾರು ಬಾರಿ ನಡೆದಿವೆ. ಆದರೆ ಇವುಗಳು ಮೂರ್ತ ಸ್ವರೂಪವನ್ನು ಪಡೆದುಕೊಳ್ಳವಲ್ಲಿ ಯಶಸ್ವಿಯಾಗಿಲ್ಲ. ದಶಕಗಳ ಹಿಂದೆ ರೂಪಿಸಿರುವ ಆನೇಕ ಪ್ರಸ್ತಾವನೆಗಳು ವಿವಿಧ ಇಲಾಖೆಗಳಲ್ಲಿ ಈಗಲೂ ಬಾಕಿಯುಳಿದಿವೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 2009ರಲ್ಲಿ ರೂಪಿಸಿದ ಮಹಾಯೋಜನೆಯಲ್ಲಿ ಕೂಡ ಕೆಲವು ಪ್ರಸ್ತಾವನೆಗಳನ್ನು ಮಾಡಲಾಗಿತ್ತು. ಇದರಲ್ಲಿ ಮುಖ್ಯವಾಗಿ ನಗರದ 66 ರಸ್ತೆಗಳ ಅಗಲೀಕರಣ ಪ್ರಸ್ತಾವನೆ ಮಾಡಲಾಗಿತ್ತು. ಬೆಂಗಳೂರು ಮಾದರಿಯಲ್ಲೇ ರಿಂಗ್‌ರೋಡ್ ವೊಂದನ್ನು 2009ರ ಯೋಜನೆಯಲ್ಲಿ ಪ್ರಸ್ತಾವನೆ ಮಾಡಲಾಗಿತ್ತು. ಇದು ಕೋಟೆಕಾರು, ದೇರಳಕಟ್ಟೆ, ಬೆಳ್ಮ, ಅಡ್ಯಾರು, ನೀರುಮಾರ್ಗ, ಮೂಡುಶೆಡ್ಡೆ, ಮರಕಡ, ಕೆಂಜಾರು, ತೋಕೂರು, ಬಾಳ, ಇಡ್ಯಾ, ಸುರತ್ಕಲ್ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿತ್ತು. ಕಣ್ಣೂರು, ಬಜಪೆ, ಹೊಸಬೆಟ್ಟು , ಪಣಂಬೂರುಗಳಲ್ಲಿ ಟ್ರಕ್ ಟರ್ಮಿನಲ್ ಪ್ರಸ್ತಾವನೆಗಳು ಇದರಲ್ಲಿ ಒಳಗೊಂಡಿತ್ತು.
ಯೋಜನೆಗಳು ಸಿದ್ಧವಿವೆಮಂಗಳೂರು ನಗರದ ಸಂಚಾರ ಸಮಸ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋನೋ ರೈಲು, ಸ್ಕೈಬಸ್ ಯೋಜನೆಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಬೆಂಗಳೂರಿನ ಕಾರಿಡಾರ್ ಯೋಜನೆಗಳ ಸ್ವರೂಪದಂತೆಯೇ ವರ್ತುಲ ರಸ್ತೆ ಪ್ರಸ್ತಾವನೆಗಳನ್ನು ರೂಪಿಸಲಾಗಿದೆ. ನಾಲ್ಕು ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣ ಯೋಜನೆಗಳಿವೆ. ಕರಾವಳಿಯಲ್ಲಿ ವಿಪುಲ ಅವಕಾಶವಿರುವ ಸಾಗರ ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದಷ್ಟು ಯೋಜನೆಗಳನ್ನು ಪ್ರಸ್ತಾವನೆ ಮಾಡಲಾಗಿದೆ. ಪ್ರಸ್ತುತ ಪ್ರಸ್ತಾವನೆಯಲ್ಲಿರುವ ಎಲ್ಲ ಯೋಜನೆಗಳನ್ನು ಕ್ರೋಡೀಕರಿಸಿ ಬ್ರ್ಯಾಂಡ್ ಬೆಂಗಳೂರು ಮಾದರಿಯಲ್ಲಿ ಬ್ರ್ಯಾಂಡ್ ಮಂಗಳೂರು ಯೋಜನೆ ರೂಪಿಸಬೇಕಾಗಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಅನುದಾನಗಳನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಸಮನ್ವಯತೆ ಏರ್ಪಡಬೇಕಾಗಿದೆ. ಕೇಶವ ಕುಂದರ್