ಬೆಂಗಳೂರು: ಬ್ರ್ಯಾಂಡ್ ಮೇಲೆ ನಂಬಿಕೆಯಿಟ್ಟು 41 ಸಾ. ರೂ. ಕೊಟ್ಟು ಖರೀದಿಸಿದ್ದ ವಾಚು ಮೂರೇ ವಾರದಲ್ಲಿ ನಿಂತು ಹೋಗಿದ್ದ ಬಗ್ಗೆ ದೂರು ನೀಡಿದರೂ ಸ್ಪಂದಿಸದ ಕಂಪೆನಿಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ.
ನಗರದ ಹೊರವರ್ತುಲ ರಸ್ತೆಯ 45 ವರ್ಷದ ವ್ಯಕ್ತಿಯೊಬ್ಬರು 2021ರ ಸೆಪ್ಟಂಬರ್‌ನಲ್ಲಿ 41,650 ರೂ. ಮೊತ್ತದ ವಾಚ್ ಖರೀದಿಸಿದ್ದರು. ಅದು ಕೆಟ್ಟಾಗ ವಾರೆಂಟಿ ಕಾರ್ಡ್ ಸಹಿತ ಎಲ್ಲ ದಾಖಲೆಗಳೊಂದಿಗೆ ಶೋ ರೂಂಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.
ಬಳಿಕ ಬೆಂಗಳೂರು ನಗರ 2ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ಮೊರೆ ಹೋದ ಗ್ರಾಹಕರು, ವಾಚ್ ಮೊತ್ತ, 20,000 ರೂ. ಪರಿಹಾರ ಹಾಗೂ ಕೋರ್ಟ್ ವ್ಯಾಜ್ಯಕ್ಕೆ ಸಂಬಂಧಿಸಿ 20,000 ರೂ. ಸಹಿತ ಒಟ್ಟು 81,650 ರೂ. ಪರಿಹಾರ ಕೋರಿದ್ದರು.
ವಾದ ವಿವಾದ ಆಲಿಸಿದ ನ್ಯಾಯಾಧೀಶರು, ವಾಚ್‌ನ ಮೊತ್ತ 41,650 ರೂ.ಗೆ ಶೇ.5ರಷ್ಟು ಬಡ್ಡಿಯೊಂದಿಗೆ ಒಟ್ಟು 46,650, ಪ್ರಕರಣದಿಂದ ಮಾನಸಿಕ ಒತ್ತಡಕ್ಕೆ ಗುರಿಯಾದ ಹಿನ್ನೆಲೆಯಲ್ಲಿ 5 ಸಾ. ರೂ. ಪರಿಹಾರ ಹಾಗೂ ಕೋರ್ಟ್ ಖರ್ಚಿನ ಬಾಬ್ತು 5 ಸಾ. ರೂ. ಸಹಿತ ಒಟ್ಟು 56,650 ರೂ. ಅನ್ನು ಜುಲೈ ಅಂತ್ಯದೊಳಗೆ ಪಾವತಿಸುವಂತೆ ಆದೇಶಿಸಿದೆ.