Advertisement

ಅಂಧ ಮತದಾರರಿಗೆ ಬ್ರೈಲ್ಲಿಪಿ ಬ್ಯಾಲೆಟ್

03:59 PM Apr 22, 2019 | Team Udayavani |

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಂಧ ಮತದಾರರೂ ಅಭ್ಯರ್ಥಿಗಳ ಹೆಸರು, ಚಿಹ್ನೆಯನ್ನು ಗುರುತಿಸಿ ಮತದಾನ ಮಾಡಲು ಚುನಾವಣಾ ಆಯೋಗ ವಿಶೇಷ ಕಾಳಜಿ ವಹಿಸಿದ್ದು, ಬ್ರೈಲ್ಲಿಪಿಯಲ್ಲಿ ಬ್ಯಾಲೆಟ್ ಪೇಪರ್‌ ಮುದ್ರಣ ಮಾಡಿಸಿ ಓದಿಕೊಂಡು ಮತದಾನ ಮಾಡಲು ಅವಕಾಶ ಕಲ್ಪಿಸಿದೆ.

Advertisement

ಹೌದು.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸುವ ಅಧಿಕಾರವನ್ನು ಹೊಂದಿದ್ದಾರೆ. ಮತದಾನದಿಂದ ಯಾರೂ ವಂಚಿತರಾಗಬಾರದು. ಹಾಗೂ ಎಲ್ಲರೂ ತಪ್ಪದೇ ಬಂದು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಚುನಾವಣಾ ಆಯೋಗ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಾರ್ಮಿಕರಿಂದ ಹಿಡಿದು, ಅಂಗವಿಕಲರು, ಅಂಧರು, ಲೈಂಗಿಕ ಅಲ್ಪಸಂಖ್ಯಾತರಿಗೂ ವಿಶೇಷ ಕಾಳಜಿ ಕೊಟ್ಟು ಈ ಬಾರಿ ಮತದಾನದ ಪ್ರಮಾಣಕ್ಕೆ ಹೆಚ್ಚಳ ಮಾಡಲು ಸಿದ್ಧತೆ ನಡೆಸಿದೆ.

ಈ ಹಿಂದಿನ ಚುನಾವಣೆಯಲ್ಲಿ ಅಂಧ ಮತದಾರರಿಗೆ ಮತದಾನಕ್ಕೆ ಬ್ರೈಲ್ ಲಿಪಿಯಲ್ಲಿ ಓದಿಕೊಂಡು ಮತದಾನ ಮಾಡಲು ಅವಕಾಶ ಇರಲಿಲ್ಲ. ಮತಗಟ್ಟೆಗೆ ಬಂದು ಇನ್ನೊಬ್ಬರ ಸಹಾಯ ಪಡೆದು ತಮ್ಮ ಹಕ್ಕು ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಸ್ವತಃ ಚುನಾವಣಾ ಆಯೋಗ ಅಂಧ ಮತದಾರರಿಗೆ ಪುಸ್ತಕವನ್ನು ಹಾಗೂ ಆಯಾ ಕ್ಷೇತ್ರವಾರು ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು, ಪಕ್ಷ, ಚಿಹ್ನೆ ಒಳಗೊಂಡಿರುವ ಬ್ಯಾಲೆಟ್ ಪೇಪರ್‌ಗಳನ್ನ ಬ್ರೈಲ್ಲಿಪಿಯಲ್ಲಿ ಮುದ್ರಿಸಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2,271 ಮತದಾರರಿದ್ದಾರೆ. ಮತಗಟ್ಟೆಗೆ ಅವರು ಬಂದಾಗ ಬ್ರೈಲ್ಲಿಪಿ ಒಳಗೊಂಡ ಬ್ಯಾಲೆಟ್ನ್ನು ಅವರ ಕೈಗೆ ಇಡಲಾಗುತ್ತದೆ. ಸಾಮಾನ್ಯವಾಗಿ ಪ್ರಸ್ತುತ ದಿನದಲ್ಲಿ ಬಹುತೇಕ ಅಂಧರು ಬ್ರೈಲ್ಲಿಪಿಯ ಅಕ್ಷರಭ್ಯಾಸ ಮಾಡಿಕೊಂಡಿರುತ್ತಾರೆ. ಅವರು ಮತಗಟ್ಟೆಯಲ್ಲಿ ಕೆಲ ನಿಮಿಷ ಓದಿಕೊಂಡು ತನ್ನ ಹಕ್ಕನ್ನು ಇಚ್ಛೆ ಇರುವ ಅಭ್ಯರ್ಥಿಗೆ ಚಲಾಯಿಸುವ ವ್ಯವಸ್ಥೆ ಮಾಡಲಾಗಿದೆ.

ಬ್ರೈಲ್ಲಿಪಿ ಬ್ಯಾಲೆಟ್‌ನಲ್ಲಿ ಏನಿದೆ?: ಬ್ರೈಲ್ಲಿಪಿಯ ಬ್ಯಾಲೆಟ್‌ನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿರುವ 14 ಅಭ್ಯರ್ಥಿಗಳ ಹೆಸರು ಕ್ರಮಬದ್ಧವಾಗಿವೆ. ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಪಕ್ಷ ಹಾಗೂ ಆ ಪಕ್ಷದ ಚಿಹ್ನೆಗಳಿವೆ. ನೋಟಾ ವ್ಯವಸ್ಥೆ, ಪಕ್ಷೇತರ ಮತದಾರರ ಹೆಸರು ಸೇರಿದಂತೆ ಅವರ ಚಿಹ್ನೆಗಳು ಅಂಕಿ ಸಂಖ್ಯೆಗಳನ್ನು ಮುದ್ರಣ ಮಾಡಿಸಲಾಗಿದೆ. ಅಂಧ ಮತದಾರರು ಮತಗಟ್ಟೆಗೆ ಆಗಮಿಸದ ವೇಳೆ ಅವರಿಗೆ ಈ ಬ್ಯಾಲೆಟ್ ಪ್ರತಿ ನೀಡಲಾಗುತ್ತದೆ. ಇದನ್ನು ಓದಿಕೊಂಡು ಅವರು ತಮಗೆ ಯಾವ ಅಭ್ಯರ್ಥಿ ಇಷ್ಟನೋ ಅಭ್ಯರ್ಥಿ ಹೆಸರಿನ ಮುಂದೆ ಇರುವ ಬಟನ್‌ಗೆ ಒತ್ತುವ ಅವಕಾಶ ಕಲ್ಪಿಸಲಾಗಿದೆ. ಬ್ರೈಲ್ ಲಿಪಿಯಲ್ಲಿ ಚುನಾವಣಾ ಆಯೋಗ ಇದೇ ಮೊದಲ ಬಾರಿ ವ್ಯವಸ್ಥೆ ಮಾಡಿದೆ.

Advertisement

ವಿಕಲಚೇತನರಿಗೂ ವಿಶೇಷ ಆದ್ಯತೆ: ಚುನಾವಣಾ ಆಯೋಗವು ಕೇವಲ ಅಂಧ ಮತದಾರರ ಬಗ್ಗೆ ಕಾಳಜಿ ಹೊಂದಿರುವುದಲ್ಲದೇ, ವಿಕಲಚೇತನ ಮತದಾರರ ಬಗ್ಗೆಯೂ ನಿಗಾ ವಹಿಸಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 12,185 ಮತದಾರರಿರುವುದನ್ನು ಜಿಲ್ಲಾಡಳಿತ ಗುರುತಿಸಿದೆ. ಇದರಲ್ಲಿ 2018 ಜನ ಕಿವುಡು ಹಾಗೂ ಮೂಗ ಮತದಾರರಿದ್ದಾರೆ. ಅಂಗವಿಕಲರಿಗಾಗಿ ಚುನಾವಣಾ ಆಯೋಗವು ಗ್ರಾಮೀಣ ಪ್ರದೇಶದಲ್ಲಿ ಪ್ರತಿ 2 ಗ್ರಾಪಂಗಳಂತೆ ಆಟೋ ಒದಗಿಸುವುದು.

ನಗರ ಪ್ರದೇಶಕ್ಕೆ 34 ವಾಹನ ಒದಗಿಸುವ ವ್ಯವಸ್ಥೆ ಮಾಡಿದೆ. ಮತಗಟ್ಟೆಯಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ, ಅಲ್ಲದೇ ಅಂಗವಿಕಲ ಮತದಾರರಿಗೆ ಸರದಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ಮತದಾನಕ್ಕೆ ಅವಕಾಶವಿದೆ. ವಿಚೇತನರ ಸಹಾಯಕ್ಕೆ ಎಲ್ಲ ಮತಗಟ್ಟೆಯಲ್ಲಿ ಸಹಾಯಕರನ್ನು ನಿಯೋಜಿಸಿದೆ. ಒಟ್ಟಿನಲ್ಲಿ ಚುನಾವಣಾ ಆಯೋಗವು ಮತದಾನದ ಪ್ರಮಾಣ ಹೆಚ್ಚಳಕ್ಕೆ ಸರ್ವ ಮತದಾರರ ಮೇಲೂ ನಿಗಾ ವಹಿಸಿದೆ. ಕೊಪ್ಪಳ ಜಿಲ್ಲಾಡಳಿತವೂ ಅಂಧ ಮತದಾರರು ಸೇರಿ ಅಂಗವಿಕಲರ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ ಸಕಲ ಸಿದ್ಧತೆಯಲ್ಲಿ ತೊಡಗಿದೆ.

ಅಂಧ ಮತದಾರರಿಗೆ ಈ ಬಾರಿ ಭಾರತ ಚುನಾವಣಾ ಆಯೋಗವು ಬ್ರೈಲ್ಲಿಪಿಯ ಬ್ಯಾಲೆಟ್ ಪೇಪರ್‌ ಮುದ್ರಿಸಿ ವಿತರಣೆ ಮಾಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2271 ಅಂಧ ಮತದಾರರಿರುವ ಕುರಿತು ಮ್ಯಾಪಿಂಗ್‌ ಮಾಡಿದ್ದೇವೆ. ಅವರು ಬ್ರೈಲ್ಲಿಪಿಯಲ್ಲಿಯೇ ಅದನ್ನು ಓದಿಕೊಂಡು ತಮ್ಮಿಚ್ಛೆ ಇರುವ ಅಭ್ಯರ್ಥಿ, ಪಕ್ಷಕ್ಕೆ ಹಕ್ಕನ್ನು ಚಲಾಯಿಸಬಹುದಾಗಿದೆ. ಜೊತೆಗೆ ವಿಕಲಚೇತನರ ಬಗ್ಗೆ ಹೆಚ್ಚಿ ಕಾಳಜಿ ವಹಿಸಿ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.
• ಸುನೀಲ್ ಕುಮಾರ, ಜಿಲ್ಲಾ ಚುನಾವಣಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next