- ಮಕ್ಕಳಲ್ಲಿ ಮೆದುಳು ಗಡ್ಡೆಗಳು ಕಾಣಿಸಿಕೊಳ್ಳುವ ಪ್ರಮಾಣ ಎಷ್ಟಿದೆ? – ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಪ್ರಕರಣಗಳಲ್ಲಿ ಮೆದುಳು ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದ್ದರೆ ಒಂದನೇ ಸ್ಥಾನ ರಕ್ತ ಕ್ಯಾನ್ಸರ್ ನದ್ದಾಗಿದೆ. ಭಾರತದಲ್ಲಿ ಪ್ರತೀ ವರ್ಷ 0-19 ವರ್ಷ ವಯೋಮಾನದ 12 ಸಾವಿರ ಮಕ್ಕಳು ಮೆದುಳು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂತಹ ಮಕ್ಕಳಲ್ಲಿ ಮೂರನೇ ಎರಡರಷ್ಟು ಮಕ್ಕಳು ಈ ಗಡ್ಡೆಗಳ ಕುರಿತಾದ ಅರಿವಿನ ಕೊರತೆಯಿಂದಾಗಿ ಕ್ಯಾನ್ಸರ್ ಆರೈಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಅಂದಾಜಿಸಲಾಗಿದೆ. ಮಕ್ಕಳಲ್ಲಿ ಮೆದುಳು ಗಡ್ಡೆಗಳು
- ಮಕ್ಕಳ ಮೆದುಳು ಗಡ್ಡೆಗಳ ಸಾಮಾನ್ಯ ವಿಧಗಳು ಯಾವುವು? – ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೆದುಳು ಗಡ್ಡೆಗಳು ಅಪಾಯಕಾರಿಯಾಗಿರ ಬಹುದು ಅಥವಾ ನಿರಪಾಯಕಾರಿಯಾಗಿರ ಬಹುದು. ಮೆದುಳಿನ ಯಾವುದೇ ಭಾಗದಲ್ಲಿ ಇವು ಉಂಟಾಗಬಹುದು. ಮಕ್ಕಳಲ್ಲಿ ಬಹುತೇಕ ಇವು ಮೆದುಳಿನ ಕೆಳಾರ್ಧ (ಇನ್‌ಫ್ರಾಟೆಂಟೋರಿಯಲ್ ಗಡ್ಡೆಗಳು) ದಲ್ಲಿ ಕಂಡುಬರುತ್ತದೆ ಮತ್ತು ವಯಸ್ಕರಲ್ಲಿ ಮೆದುಳಿನ ಮೇಲರ್ಧ ಭಾಗ (ಸುಪ್ರಾಟೆಂಟೋರಿಯಲ್ ಗಡ್ಡೆಗಳು) ದಲ್ಲಿ ತಲೆದೋರುತ್ತವೆ. ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಮೆದುಳು ಗಡ್ಡೆ ಲೋ ಗ್ರೇಡ್ ಗ್ಲಿಯೊಮಾ ಮತ್ತು ಬಳಿಕ ಮೆಡುಲ್ಲೊಬ್ಲಾಸ್ಟೊಮಾ.
- ಮೆದುಳು ಗಡ್ಡೆಗಳ ಸಾಮಾನ್ಯ ಲಕ್ಷಣಗಳೇನು? – ಮೆದುಳು ಗಡ್ಡೆಗಳ ಸಾಮಾನ್ಯ ಲಕ್ಷಣ ಎಂದರೆ ಸತತ ತಲೆನೋವು-ಬೆಳಗಿನ ಸಮಯದಲ್ಲಿ ಹೆಚ್ಚಿದ್ದು ಮಗುವಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತದೆ ಮತ್ತು ವಾಂತಿಗೆ ಕಾರಣವಾಗುತ್ತದೆ. ದೃಷ್ಟಿಯಲ್ಲಿ ತೊಂದರೆ, ಕಣ್ಣು ಒಂದು ಬದಿಗೆ ಸರಿಯುವುದು, ನಡಿಗೆಯಲ್ಲಿ ತೊಂದರೆ, ಅಸಮತೋಲನ ಮತ್ತು ಕೆಲವೊಮ್ಮೆ ನಡುಕ ಉಂಟಾಗುವುದು ಇತರ ಲಕ್ಷಣಗಳು. ಶಿಶುಗಳಲ್ಲಿ (1 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು) ಸದಾ ಕಿರಿಕಿರಿಗೊಳ್ಳುವುದು, ತಲೆಯ ಗಾತ್ರ ದೊಡ್ಡದಾಗುವ ಲಕ್ಷಣಗಳು ಕಂಡುಬರುತ್ತವೆ.
- ಸಾಮಾನ್ಯವಾಗಿ ಮೆದುಳು ಗಡ್ಡೆಗಳು ಪತ್ತೆಯಾಗುವುದು ನಿಧಾನವಾಗುವುದೇಕೆ? – ಮೆದುಳು ಗಡ್ಡೆಗಳಿಂದ ಉಂಟಾಗುವ ರೋಗಲಕ್ಷಣಗಳು ಶೀತಜ್ವರ ಅಥವಾ ಇತರ ವೈರಾಣು ಸೋಂಕುಗಳಿಂದ ಉಂಟಾಗುವ ರೋಗ ಲಕ್ಷಣಗಳನ್ನೇ ಹೋಲುವುದರಿಂದ ಶೇ. 40ರಿಂದ 45ರಷ್ಟು ಮೆದುಳು ಗಡ್ಡೆಗಳು ವಿಳಂಬವಾಗಿ ಪತ್ತೆಯಾಗುತ್ತವೆ. ಈ ಲಕ್ಷಣಗಳು ಸತತವಾಗಿದ್ದು, ವೈದ್ಯರು ನೀಡುವ ಔಷಧಗಳನ್ನು ತೆಗೆದುಕೊಂಡ ಬಳಿಕವೂ ಹೆಚ್ಚು ಪರಿಹಾರ ಕಾಣದ ಬಳಿಕವೇ ಮೆದುಳು ಗಡ್ಡೆಗಳು ಇರಬಹುದು ಎಂಬ ಸಂದೇಹ ತಲೆದೋರುತ್ತದೆ.
- ಮೆದುಳು ಗಡ್ಡೆಗಳನ್ನು ಹೇಗೆ ಪತ್ತೆ ಮಾಡಲಾಗುತ್ತದೆ? – ಮೆದುಳು ಗಡ್ಡೆ ಉಂಟಾಗಿರಬಹುದು ಎಂಬ ಸಂದೇಹ ಮೂಡಿದ ಬಳಿಕ, ರೋಗಪತ್ತೆಯ ಸುಲಭ ವಿಧಾನವೆಂದರೆ ಸಿಟಿ ಸ್ಕ್ಯಾನ್ ಅಥವಾ ಎಂಆರ್‌ಐ ಸ್ಕ್ಯಾನ್. ಸಿಟಿ ಸ್ಕ್ಯಾನ್ ಮಾಡುವುದರಿಂದ ಗಡ್ಡೆಯ ಗಾತ್ರ ಇತ್ಯಾದಿ ಮಾಹಿತಿಗಳು ಲಭ್ಯವಾದರೆ, ಎಂಆರ್‌ಐ ಮಾಡುವುದರಿಂದ ಗಡ್ಡೆಯ ಸ್ವಭಾವ, ಅದಕ್ಕೆ ರಕ್ತ ಸರಬರಾಜು ಇತ್ಯಾದಿ ಮಾಹಿತಿಗಳು ಕೂಡ ದೊರೆತು ಶಸ್ತ್ರಚಿಕಿತ್ಸೆ, ಬಯಾಪ್ಸಿ ಅಥವಾ ರೇಡಿಯೋಥೆರಪಿಯಂತಹ ನಿರ್ದಿಷ್ಟ ಚಿಕಿತ್ಸೆಗಳನ್ನು ಯೋಜಿಸಲು ಅನುಕೂಲವಾಗುತ್ತದೆ.
- ಮಕ್ಕಳಲ್ಲಿ ಮೆದುಳು ಗಡ್ಡೆ ಉಂಟಾಗಲು ಕಾರಣವೇನು? – ಮಕ್ಕಳಲ್ಲಿ ಮೆದುಳು ಗಡ್ಡೆ ಉಂಟಾಗುವುದಕ್ಕೆ ಖಚಿತವಾದ ಕಾರಣಗಳು ತಿಳಿದುಬಂದಿಲ್ಲ. ಇಂತಹ ಗಡ್ಡೆಗಳಲ್ಲಿ ಶೇ. 5ರಿಂದ 7ರಷ್ಟು ಗಡ್ಡೆಗಳು ವಂಶವಾಹಿ ಮೂಲದಿಂದ ಉಂಟಾಗಿರುತ್ತವೆ ಮತ್ತು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ರವಾನೆಯಾಗಿರುತ್ತವೆ. ಇದಕ್ಕೆ ಕೆಲವು ಉದಾಹರಣೆಗಳು ಎಂದರೆ, ಮೆದುಳಿನ ಲೋ ಗ್ರೇಡ್ ಗ್ಲಿಯೊಮಾಸ್‌ನೊಂದಿಗೆ ಕಾಣಿಸಿಕೊಳ್ಳುವ ನ್ಯೂರೊಫೈಬ್ರೊಮೆಟೋಸಿಸ್ – ಟೈಪ್ 1. ಶೇ. 95ರಷ್ಟು ಪ್ರಮಾಣದ ಮೆದುಳು ಗಡ್ಡೆ ಪ್ರಕರಣಗಳಿಗೆ ಹಲವು ಕಾರಣಗಳು ಸಂಯೋಜಿತವಾಗಿರುತ್ತವೆ – ವಿಕಿರಣಗಳು, ಇಲೆಕ್ಟ್ರೊಮ್ಯಾಗ್ನೆಟಿಕ್ ಕ್ಷೇತ್ರಗಳಿಗೆ ಒಡ್ಡಿಕೊಂಡಿರುವುದು, ಸಂಭಾವ್ಯ ಅಪಾಯ ಕಾರಣಗಳು ಎಂದು ಸಂಶೋಧಕರು ಗುರುತಿಸಿರುವ ಕೆಲವು ವೈರಾಣು ಸೋಂಕು ಇತ್ಯಾದಿ. ಆದರೆ ಇದನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ.
- ಚಿಕಿತ್ಸೆ ಹೇಗಿರುತ್ತದೆ? – ಮೆದುಳು ಗಡ್ಡೆಗಳಿಗೆ ಚಿಕಿತ್ಸೆಯು ಅನೇಕ ಅಂಶಗಳನ್ನು ಆಧರಿಸಿರುತ್ತದೆ – ಗಡ್ಡೆಯ ಸ್ಥಾನ, ಯಾವ ವಯಸ್ಸಿನಲ್ಲಿ ಉಂಟಾಗಿದೆ ಮತ್ತು ಯಾವೆಲ್ಲ ಸಿಂಡ್ರೋಮ್ ಗಳಿವೆ ಇತ್ಯಾದಿ. ಬಹುತೇಕ ಮೆದುಳು ಗಡ್ಡೆಗಳನ್ನು ಅವುಗಳ ಸ್ವಭಾವವನ್ನು ಖಚಿತಪಡಿಸಿಕೊಳ್ಳಲು ಬಯಾಪ್ಸಿ/ಶಸ್ತ್ರಕ್ರಿಯೆ ನಡೆಸಬೇಕಾಗುತ್ತದೆ. ಗಡ್ಡೆಯು ಅಪಾಯಕಾರಿ ಎಂಬುದು ಖಚಿತವಾದ ಬಳಿಕ ಮುಂದಿನ ಚಿಕಿತ್ಸೆಯು ರೋಗಿಯ ವಯಸ್ಸನ್ನು ಆಧರಿಸಿ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ 3 ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಮೆದುಳು ಗಡ್ಡೆ ಕಂಡುಬಂದರೆ ರೇಡಿಯೋಥೆರಪಿ ನೀಡುವುದಿಲ್ಲ. ಇಂತಹ ಗಡ್ಡೆಗಳಿಗೆ ಆಗಾಗ ಕಿಮೊಥೆರಪಿ ಒದಗಿಸಬೇಕಾಗುತ್ತದೆ.
- ಈ ಗಡ್ಡೆಗಳು ಗುಣ ಹೊಂದುವ ದರ ಎಷ್ಟಿದೆ? – ಗುಣ ಹೊಂದುವಿಕೆಯ ದರವು ಗಡ್ಡೆಯ ವಿಧ, ನೀಡಲಾದ ಚಿಕಿತ್ಸೆ ಮತ್ತು ಚಿಕಿತ್ಸೆಗೆ ಪ್ರತಿಸ್ಪಂದನೆಯನ್ನು ಆಧರಿಸಿರುತ್ತದೆ. ಸಾಮಾನ್ಯವಾಗಿ ಮಕ್ಕಳ ಮೆದುಳು ಗಡ್ಡೆಗಳ ಗುಣ ಹೊಂದುವ ದರವು ಶೇ. 60ರಿಂದ 80ರಷ್ಟಿರುತ್ತದೆ.
- ಮಕ್ಕಳು ಮೆದುಳು ಗಡ್ಡೆಗಳಿಗೆ ಚಿಕಿತ್ಸೆ ನೀಡಲು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಾವ ಯಾವ ಸೌಲಭ್ಯಗಳಿವೆ? – ಆಸ್ಪತ್ರೆಯಲ್ಲಿ ಪರಿಣತ ನ್ಯೂರೊಸರ್ಜನ್‌ಗಳು, ರೇಡಿಯೇಶನ್ ಆಂಕಾಲಜಿಸ್ ಗಳು, ಪೀಡಿಯಾಟ್ರಿಕ ಆಂಕಾಲಜಿಸ್ಟ್ ಮತ್ತು ನರ್ಸಿಂಗ್ ತಂಡವಿದ್ದು, ಇದರ ಜತೆಗೆ ಫಿಸಿಯೋಥೆರಪಿಸ್ಟ್‌ಗಳು, ಆಕ್ಯುಪೇಶನಲ್ ಥೆರಪಿಸ್ಟ್ ಇತ್ಯಾದಿ ಪೂರಕ ಆರೋಗ್ಯ ಸೇವೆ ಮತ್ತು ಸಿಬಂದಿ ಇದ್ದಾರೆ. ಇದರ ಜತೆಗೆ ರೋಗಿಗಳಿಗೆ ಎಂಡೊಕ್ರೈನ್ ಮತ್ತು ಮನೋಶಾಸ್ತ್ರೀಯ ವಿಶ್ಲೇಷಣೆ ಹಾಗೂ ಫಾಲೊಅಪ್ ಅಗತ್ಯವೂ ಇದ್ದು, ಇದಕ್ಕಾಗಿ ಪೀಡಿಯಾಟ್ರಿಕ್ ಎಂಡೊಕ್ರೈನಾಲಜಿಸ್ಟ್‌ಗಳು ಮತ್ತು ಮಕ್ಕಳ ಮನೋಶಾಸ್ತ್ರಜ್ಞರು ಲಭ್ಯರಿದ್ದಾರೆ. ಕ್ಯಾನ್ಸರ್ ಕೇಂದ್ರದಲ್ಲಿ ಬಹು ವೈದ್ಯಶಾಸ್ತ್ರೀಯ ಗಡ್ಡೆ ಮಂಡಳಿ ಇದ್ದು, ಇದರ ಮೂಲಕ ಪ್ರತೀ ರೋಗ ಪ್ರಕರಣವನ್ನು ಆಂಕಾಲಜಿಸ್ಟ್‌ಗಳು, ನ್ಯೂರೊಸರ್ಜನ್ ಗಳು, ರೇಡಿಯಾಲಜಿಸ್ಟ್‌ಗಳು ಮತ್ತು ಪೆಥಾಲಜಿಸ್ಟ್‌ಗಳು ಚರ್ಚಿಸಿ ಮೆದುಳು ಗಡ್ಡೆ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ಮತ್ತು ಗುಣ ಹೊಂದುವ ಅತ್ಯುತ್ತಮ ಚಿಕಿತ್ಸೆ ವಿಧಾನವನ್ನು ಅನುಸರಿಸುತ್ತಾರೆ.
- ಇಂತಹ ರೋಗಿಗಳಿಗೆ ಚಿಕಿತ್ಸೆಯ ಬಳಿಕ ಫಾಲೊಅಪ್ ಹೇಗೆ? – ಇಂತಹ ರೋಗಿಗಳಿಗೆ ಆಫ್ಟರ್ ಕಂಪ್ಲೀಶನ್ ಆಫ್ ಥೆರಪಿ (ಎಸಿಟಿ)ಯ ಮೂಲಕ ಫಾಲೊಅಪ್ ಒದಗಿಸಲಾಗುತ್ತದೆ. ಇಂತಹ ರೋಗಿಗಳಲ್ಲಿ ಬಹುತೇಕ ಮಂದಿಗೆ ರಕ್ತ ಮತ್ತು ಕಣ್ಣಿನ ಪರೀಕ್ಷೆಗಳು ಅಗತ್ಯವಾಗುತ್ತದಾದರೂ ಕೆಲವು ಮಕ್ಕಳಿಗೆ ವಾರ್ಷಿಕವಾಗಿ ಸಿಟಿ/ಎಂಆರ್‌ಐ ಬೇಕಾಗುತ್ತದೆ. ಎಸಿಟಿ ಕ್ಲಿನಿಕ್ ಇಂತಹ ರೋಗಿಗಳಿಗೆ ಈ ಪರೀಕ್ಷೆಗಳನ್ನು ಕೈಗೊಳ್ಳಲು ನೆರವು ನೀಡುವುದಷ್ಟೇ ಅಲ್ಲದೆ ಮರಳಿ ಶಾಲಾ ಕಲಿಕೆಯನ್ನು ಮುಂದುವರಿಸಲು ವಿದ್ಯಾರ್ಥಿ ವೇತನಗಳಿಗೂ ಸಹಾಯ ಮಾಡುತ್ತದೆ.
Advertisement
-ಡಾ| ವಾಸುದೇವ ಭಟ್
Related Articles
Advertisement
ಕೆಎಂಸಿ, ಮಾಹೆ, ಮಣಿಪಾಲ
-ಡಾ| ಹರೀಶ್ ವರ್ಮಾ ಟಿ.
ಅಸಿಸ್ಟೆಂಟ್ ಪ್ರೊಫೆಸರ್ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)