Advertisement
ರೋಗಲಕ್ಷಣಗಳುದೇಶಾದ್ಯಂತ ಪ್ರತೀ ವರ್ಷ ಸರಿಸುಮಾರು 50 ಸಾವಿರದಷ್ಟು ಜನರಿಗೆ ಈ ಕಾಯಿಲೆ ಬರುತ್ತಿದ್ದು, ಸುಮಾರು 10 ಸಾವಿರ ಜನರು ಮರಣ ಹೊಂದುತ್ತಿರುವ ವರದಿಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸೋಂಕಿಗೆ ತುತ್ತಾದ ರೋಗಿಗಳಿಗೆ ಯಾವುದೇ ಲಕ್ಷಣಗಳಿರುವುದಿಲ್ಲ. ಸೋಂಕು ತಗುಲಿದ ಕೆಲವೇ ವ್ಯಕ್ತಿಗಳಿಗೆ (ಸಾಮಾನ್ಯವಾಗಿ 250 ಜನರಲ್ಲಿ ಒಬ್ಬರಿಗೆ) ತೀವ್ರತರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 5-15 ದಿನಗಳ ಒಳಗೆ ಉಲ್ಬಣಗೊಳ್ಳುತ್ತವೆ. ತೀವ್ರತರಹದ ತಲೆನೋವು, ಮೈ-ಕೈ ನೋವು, ವಾಂತಿ, ನಡುಕ ಹೊಂದಿದ ವಿಪರೀತ ಜ್ವರ, ಮೆದುಳಿನ ಉರಿಯೂತ, ಕುತ್ತಿಗೆ ನೋವು, ಅಪಸ್ಮಾರ, ಅನಂತರ ನರಮಂಡಲದ ಇತರ ದೋಷಗಳು ಕಾಣಿಸಿಕೊಳ್ಳ ಬಹುದು. ಪ್ರಜ್ಞಾಹೀನತೆ, ಲಕ್ವಾ ಹೊಡೆಯುವುದು ಅಂತಿಮ ಹಂತದಲ್ಲಿ ಕಂಡುಬರುವ ಲಕ್ಷಣಗಳು. ಲಕ್ಷಣಗಳು ಕಾಣಿಸಿಕೊಂಡ ಅನಂತರ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾಧಾರಣವಾಗಿ 9-10 ದಿನಗಳಲ್ಲಿ ಮರಣ ಸಂಭವಿಸಬಹುದು. ಇದು ವೈರಸ್‌ನಿಂದ ಉಂಟಾಗುವ ರೋಗವಾದ್ದರಿಂದ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ/ಜೀವ ನಿರೋಧಕಗಳು ಇಲ್ಲ. ರೋಗಲಕ್ಷಣಕ್ಕೆ ಅನುಗುಣವಾಗಿ ರೋಗಿಗೆ ಚಿಕಿತ್ಸೆ ನೀಡುವುದು ಅಗತ್ಯವಾಗಿರುತ್ತದೆ.
ಡಿಸೆಂಬರ್ 5ನೇ ತಾರೀಕಿನಿಂದ 1-15 ವರ್ಷದ ಎಲ್ಲ ಮಕ್ಕಳಿಗೆ ಜಪಾನೀಸ್ ಎನ್‌ಸೆಫಲೈಟಿಸ್ ವಿರುದ್ಧ ಲಸಿಕೆ ನೀಡುವ ಅಭಿಯಾನವನ್ನು ಕರ್ನಾಟಕದ ಆಯ್ದ ಹತ್ತು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಮೂರು ವಾರಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ಮೊದಲ ವಾರದಲ್ಲಿ ಶಾಲೆಗೆ ಹೋಗುವ ಹದಿನೈದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮುಂದಿನ ಎರಡು ವಾರಗಳಲ್ಲಿ ಕಿರಿಯ ಮಕ್ಕಳು, ಶಾಲೆಗೆ ಹೋಗದವರಿಗೆ ಅಥವಾ ಶಾಲಾ ಕಾರ್ಯಕ್ರಮದ ಸಮಯದಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಲಸಿಕೆ ನೀಡಲಾಗುವುದು. ಈ ಅಭಿಯಾನದ ಅನಂತರ ಎಲ್ಲ ಮಕ್ಕಳಿಗೆ 9-12 ತಿಂಗಳು ಮತ್ತು 16-24 ತಿಂಗಳಿಗೆ ಸಾಮಾನ್ಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಲಸಿಕೆಯನ್ನು ನೀಡಲಾಗುವುದು. ಜಪಾನೀಸ್ ಎನ್‌ಸೆಫಲೈಟಿಸ್ ವಿರುದ್ಧ ಎರಡು ತರಹದ ಲಸಿಕೆಗಳು ಲಭ್ಯವಿದ್ದು, ಇವೆರಡನ್ನೂ ನಿಷ್ಕ್ರಿಯಗೊಂಡ ಸಂಬಂಧಪಟ್ಟ ವೈರಸ್‌ಗಳನ್ನು ಬಳಸಿ ತಯಾರಿಸಲಾಗಿದೆ.
Related Articles
Advertisement
ಅಭಿಯಾನದ ಸಮಯದಲ್ಲಿ 1-15 ವರ್ಷದ ಎಲ್ಲ ಮಕ್ಕಳಿಗೆ ಅಥವಾ ಹತ್ತನೇ ತರಗತಿಯವರೆಗೆ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ದೇಶೀಯವಾಗಿ ತಯಾರಾದ ಜೆನ್ ವ್ಯಾಕ್ ಎಂಬ ಲಸಿಕೆ 0.5 ಎಂ.ಎಲ್. ಒಂದು ಡೋಸ್ ಚುಚ್ಚುಮದ್ದು ನೀಡಲಾಗುವುದು ಹಾಗೂ ಲಸಿಕೆ ಪಡೆದ ಪ್ರತೀ ಮಕ್ಕಳ ದಾಖಲೆಯನ್ನು ಇರಿಸಲಾಗುವುದು. ಚುಚ್ಚುಮದ್ದು ಪಡೆದ ಅನಂತರ ಮಕ್ಕಳು ಪಡೆಯುವ ಇತರ ಯಾವುದೇ ಲಸಿಕೆಗಳಲ್ಲಿ ಕಂಡು ಬರುವಂತಹ ಸಾಮಾನ್ಯ ಅಡ್ಡಪರಿಣಾಮಗಳಾದ ಚುಚ್ಚುಮದ್ದು ಪಡೆದ ಜಾಗದಲ್ಲಿ ಸ್ವಲ್ಪ ಸಮಯ ನೋವು, ಮೈ ಕೈ ನೋವು, ತಲೆ ನೋವು, ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಳ್ಳಬಹುದು. ಈಗಾಗಲೇ ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕಾ ಸಮಯದಲ್ಲಿ ಈ ಲಸಿಕೆಯನ್ನು ನೀಡಲಾಗುವುದಿಲ್ಲ. ಅವರಿಗೆ ಜ್ವರ ಸಂಪೂರ್ಣವಾಗಿ ಕಡಿಮೆಯಾದ ಅನಂತರ ಈ ಲಸಿಕೆಯನ್ನು ಪಡೆಯಲು ಪಡೆಯಲು ಸಲಹೆ ನೀಡಲಾಗುವುದು. ಯಾವುದೇ ಮಕ್ಕಳಿಗೆ ಈ ಹಿಂದೆ ಯಾವುದೇ ಲಸಿಕೆ ನೀಡಿದ ಸಮಯದಲ್ಲಿ ಅಲರ್ಜಿ/ಹೆಚ್ಚಾದ ಅಡ್ಡ ಪರಿಣಾಮ ಕಂಡುಬಂದಿದ್ದಲ್ಲಿ ಈ ಲಸಿಕೆಯನ್ನು ನೀಡಲಾಗುವುದಿಲ್ಲ. ಈ ಲಸಿಕಾ ಅಭಿಯಾನದ ಉದ್ದೇಶ ಜಪಾನೀಸ್ ಎನ್‌ಸೆಫಲೈಟಿಸ್‌ಗೆ ಸಂಬಂಧಿಸಿದ ರೋಗ ಮತ್ತು ಮರಣಗಳನ್ನು ತಡೆಯುವುದು ಹಾಗೂ ಸೋಂಕಿನಿಂದ ಉಂಟಾಗಬಹುದಾದ ಯಾವುದೇ ತರಹದ ದೈಹಿಕ ನ್ಯೂನ್ಯತೆಗಳನ್ನು ತಡೆಗಟ್ಟುವುದು ಆಗಿದೆ.
– ಡಾ| ಅಜಯ್ ಮಲ್ಯ, ಸೀನಿಯರ್ ರೆಸಿಡೆಂಟ್– ಡಾ| ಸ್ನೇಹಾ ಡಿ. ಮಲ್ಯ. ಅಸೋಸಿಯೇಟ್ ಪ್ರೊಫೆಸರ್
– ಡಾ| ಅಶ್ವಿನಿ ಕುಮಾರ್ ಗೋಪಾಡಿ, ಪ್ರೊಫೆಸರ್ ಹಾಗೂ ಮುಖ್ಯಸ್ಥರು
ಕಮ್ಯೂನಿಟಿ ಮೆಡಿಸಿನ್ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ