Advertisement
ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಹಾಗೂ ಸೇನಾ ಗುಪ್ತಚರ ದಳ ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿವೆ. ಸ್ಥಳೀಯ ಪೊಲೀಸರೂ ನೆರವಾಗಿದ್ದಾರೆ. ಈ ಸಂಬಂಧ ದಾಳಿ ಇನ್ನೂ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ. ನಿಶಾಂತ್‌ನಿಂದ ಕೆಲವು ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಪಾಕಿಸ್ಥಾನ ಭಾರತದ ಸೇನೆ ಹಾಗೂ ವಿವಿಧ ಹಂತಗಳ ಅಧಿಕಾರಿಗಳ ಮೂಲಕ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಪ್ರಯತ್ನ ಮಾಡಿದ್ದು ಇದೇ ಮೊದಲೇನಲ್ಲ. ಕಳೆದ ತಿಂಗಳಷ್ಟೇ ಬಿಎಸ್‌ಎಫ್ ಯೋಧರೊಬ್ಬರನ್ನು ಹನಿ ಟ್ರ್ಯಾಪ್ ಮಾಡಿದ ವಿಚಾರ ಬಯಲಾಗಿತ್ತು. ಇವರಿಂದ ಸೂಕ್ಷ್ಮ ಮಾಹಿತಿಯನ್ನು ಪಾಕ್ ಐಎಸ್‌ಐ ಪಡೆದಿತ್ತು ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ ಮೇಯಲ್ಲಿ ಉತ್ತರಾಖಂಡದ ವ್ಯಕ್ತಿಯೊಬ್ಬನನ್ನು ಐಎಸ್‌ಐ ಗೂಢಚರ ಎಂಬ ಅನುಮಾನದ ಮೇಲೆ ಬಂಧಿಸಲಾಗಿತ್ತು. ಬ್ರಹ್ಮೋಸ್ ಕ್ಷಿಪಣಿ ಯಾಕೆ ಮಹತ್ವದ್ದು?
ಬ್ರಹ್ಮೋಸ್ ಮಧ್ಯಮ ಶ್ರೇಣಿಯ ಸೂಪರ್‌ಸಾನಿಕ್ ಕ್ಷಿಪಣಿ. ಇದರ ಸಾಮರ್ಥ್ಯ ಎಷ್ಟಿದೆಯೆಂದರೆ ಸಬ್‌ಮರೀನ್, ಹಡಗುಗಳು, ವಿಮಾನ ಹಾಗೂ ಭೂಮಿ ಮೇಲಿಂದಲೂ ಉಡಾವಣೆ ಮಾಡಬಹುದಾಗಿದೆ. ವಿಶ್ವದಲ್ಲೇ ಅತ್ಯಂತ ವೇಗದ ಕ್ಷಿಪಣಿ ಇದು. ರಷ್ಯಾದ ಎನ್‌ಪಿಒ ಮಶಿನೋಸ್ತ್ರೇಯೋನಿಯಾ ಮತ್ತು ಡಿಆರ್‌ಡಿಒ ಇದನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಕಳೆದ ನವೆಂಬರ್‌ನಲ್ಲಷ್ಟೇ ಇದರ ಸುಧಾರಿತ ಆವೃತ್ತಿಯನ್ನು ಪ್ರಯೋಗಿಸಲಾಗಿತ್ತು. ಈ ವೇಳೆ ಭೂಮಿ, ವಾಯು ಮತ್ತು ಸಮುದ್ರದಿಂದಲೂ ಉಡಾವಣೆ ಮಾಡಬಹುದಾದ ಸಾಮರ್ಥ್ಯ ಇದಕ್ಕೆ ಲಭ್ಯವಾಗಿತ್ತು. ಹೀಗಾಗಿ ಇದರ ತಾಂತ್ರಿಕ ವಿವರಗಳು ಅತ್ಯಂತ ಸೂಕ್ಷ್ಮವಾಗಿದ್ದು, ಪಾಕಿಸ್ಥಾನಕ್ಕೆ ಸಿಕ್ಕಿದಲ್ಲಿ ಪ್ರತ್ಯಸ್ತ್ರ ತಯಾರಿಸುವ ಆತಂಕ ಎದುರಾಗಿದೆ.