Advertisement

ದಾಖಲೆಯತ್ತ ಬ್ರಹ್ಮಾವರ ಕೃಷಿ ಮೇಳ: ಹರಿದು ಬಂದ ಜನಸಾಗರ

11:57 PM Oct 19, 2019 | Sriram |

ಬ್ರಹ್ಮಾವರ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಠಾರದಲ್ಲಿ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ 2 ದಿನಗಳ ಕೃಷಿ ಮೇಳದ ಮೊದಲ ದಿನವಾದ ಶನಿ ವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಸುಮಾರು 12,000 ಸಾರ್ವಜನಿಕರು ಭೇಟಿ ನೀಡಿದರು.

Advertisement

ಶನಿವಾರ ಬೆಳಗ್ಗೆ 11ರ ಸುಮಾರಿಗೆ ಕೃಷಿ ಮೇಳಕ್ಕೆ ಚಾಲನೆ ಸಿಕ್ಕಿದ್ದು, ಅಷ್ಟೊತ್ತಿಗಾಗಲೇ ಬಹುತೇಕ ಎಲ್ಲ ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ, ಸಮಗ್ರ ಕೃಷಿ ಪದ್ಧತಿಯ ಪ್ರಾತ್ಯಕ್ಷಿಕೆಯ ವ್ಯವಸ್ಥೆಯನ್ನೂ ಮಾಡಲಾಯಿತು. ಬೆಳಗ್ಗೆಯಿಂದ ಸಂಜೆಯ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಕೃಷಿ ವಿಷಯದ ಆಸಕ್ತರು ಸೇರಿದಂತೆ ಎಲ್ಲ ವರ್ಗದವರು ಮೇಳಕ್ಕೆ ಭೇಟಿ ನೀಡಿದರು.

ಮೊದಲ ದಿನ ಶೇ.20ರಷ್ಟು ಏರಿಕೆ
ಕೃಷಿ ಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷದ ಎರಡು ದಿನ ಕೃಷಿ ಮೇಳದಲ್ಲಿ 20,000 ಸಾವಿರ ಜನರು ಭೇಟಿ ನೀಡಿದ್ದರು. ಈ ಬಾರಿ ಮೊದಲ ದಿನವೇ 12,000 ಜನರು ಭೇಟಿ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮೇಳಕ್ಕೆ ಆಗಮಿಸುವವರ ಸಂಖ್ಯೆ ಶೇ. 20ಕ್ಕೆ ಏರಿಕೆಯಾಗಿದೆ. ರವಿವಾರ ಇನ್ನೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ.

ಎಲ್ಲ ವರ್ಗದ ಜನರನ್ನು ಸೆಳೆದ ಮೇಳ
ಬ್ರಹ್ಮಾವರದ ಈ ಬಾರಿ ಕೃಷಿ ಮೇಳ ಕೇವಲ ರೈತರಿಗೆ ಕೃಷಿ ಮಾದರಿಗಳ ಪ್ರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಇಲ್ಲಿ ಎಲ್ಲವೂ ಇದೆ. ಕೃಷಿಕನಿಗೆ ಸಂಬಂಧಿಸಿದ ಸಕಲ ಮಾಹಿತಿ, ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗೆ ವಿವಿಧ ಆತ್ಯಾಧುನಿಕ ಪದ್ಧತಿ ಪರಿಚಯ, ಕೃಷಿ ಪೂರಕ ಉದ್ಯಮಗಳ ಪರಿಚಯ, ಕೃಷಿ ಸಂಬಂಧಿಸಿದ ಜನೋಪಯೋಗಿ ಪರಿಕರಗಳು ಪ್ರದರ್ಶನಗಳು ಎಲ್ಲ ವರ್ಗದ ಜನರನ್ನು ಸೆಳೆಯಿತು.

ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ
ಕೃಷಿ ಮೇಳ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸ ಇದ್ದಂತೆ. ಉಡುಪಿ, ಬ್ರಹ್ಮಾವರ ಹೊರ ವಲಯದ ಸರಕಾರಿ, ಖಾಸಗಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿಂದ ವಿದ್ಯಾರ್ಥಿಗಳು ಕೃಷಿ ಮೇಳಕ್ಕೆ ತಂಡೋಪತಂಡವಾಗಿ ಬಂದಿದ್ದರು. ಶಾಲಾ ಮಕ್ಕಳು ವಿವಿಧ ಮಳಿಗೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆ ಹಾಕಿದರು. ಕೃಷಿ ಮೇಳವು ಶಾಲಾ ಮಕ್ಕಳಿಗೆ ಒಂದು ರೀತಿಯ ಅಧ್ಯಯನ ಪ್ರವಾಸವಾಗಿತ್ತು.

Advertisement

200ಕ್ಕೂ ಹೆಚ್ಚಿನ ಮಳಿಗೆ
ಕೃಷಿ, ತೋಟಗಾರಿಕಾ ಬೆಳೆಯ ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ, ಜೈವಿಕ ಇಂಧನ ಹಾಗೂ ಜೈವಿಕ ತಂತ್ರಜ್ಞಾನದ ಬಳಕೆ, ಎರೆಹುಳುವಿನ ಗೊಬ್ಬರ ಘಟಕದ ಜತೆಗೆ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟದ 200ಕ್ಕೂ ಅಧಿಕ ಮಳಿಗೆಗಳು ಮೇಳದ ವಿಶೇಷವಾಗಿತ್ತು. ಸಾವಯವ ಸೌಂದರ್ಯ ವರ್ಧಕ ವಸ್ತುಗಳು, ಆಯುರ್ವೇದ ಔಷಧ ಮುಂತಾದ ಮಳಿಗೆಗಳಲ್ಲೂ ಖರೀದಿ ಜೋರಾಗಿತ್ತು.

ವಿವಿಧ ಭತ್ತದ ತಳಿಯ ಪ್ರದರ್ಶನ
ಪದ್ಮ ರೇಖಾ, ಕುಂಕುಂ ಸಾಲಿ-2, ರಾಜಶ್ರೀ, ಸೀತಾ ಮೋಗ್‌, ಕೃಷ್ಣ, ಕೆಂಪುದಡಿ ಮುಟ್ಟು, ಮೈಸೂರು ಮಲ್ಲಿಗೆ, ಕಲ್ಚರ್‌, ಹಣಸು, ಕರಿಭತ್ತ ಸೇರಿದಂತೆ ಒಟ್ಟು 100ಕ್ಕೂ ಅಧಿಕ ಭತ್ತದ ತಳಿಗಳು ಮಾತ್ರವಲ್ಲದೇ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ಸಂಶೋಧಿ ಸಿದ ಹೊಸ ಕೆಂಪುಭತ್ತ ತಳಿ ಪ್ರದರ್ಶನಕ್ಕೆ ಇಡಲಾಯಿತು.

ಪ್ರಮುಖ ಆಕರ್ಷಣೆ
ತಾರಸಿ ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹಂದಿ ಮತ್ತು ಬಾತುಕೋಳಿ, ಮೀನು ಸಾಕಾಣಿಕೆ, ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆಗಳು, ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದಕ ಘಟಕಗಳು, ಅಲಂಕಾರಿಕ ಗಿಡಗಳ ಪ್ರದರ್ಶನ ಹಾಗೂ ಮಾರಾಟ ಆಕರ್ಷಣೆಯಾಗಿತ್ತು.

ಊಟದ ವ್ಯವಸ್ಥೆ
ಆಗಮಿಸಿದ ಸರ್ವರಿಗೂ ಮೇಳದ ವಠಾರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದ ಸಾವಿರಾರು ಮಂದಿ ಶಿಸ್ತುಬದ್ಧವಾಗಿ ಊಟ ಸವಿದು ಅಪರಾಹ್ನ ಸ್ವಲ್ಪಹೊತ್ತು ವಿಶ್ರಾಂತಿ ಪಡೆದು ಮತ್ತೆ ವಿವಿಧ ಸ್ಟಾಲ್‌ಗ‌ಳನ್ನು ವೀಕ್ಷಿಸಿದರು.

ಹಣ್ಣು, ತರಕಾರಿ ಪ್ರದರ್ಶನ
ಸೀತಾಫ‌ಲ, ಡ್ರಾಗನ್‌ ಹಣ್ಣು, ಬೆಣ್ಣೆ ಹಣ್ಣು, ಬೇರ್‌ ಹಣ್ಣು, ಫ್ಯಾಶನ್‌ ಪುಟ್‌, ಚಕೋತ, ಮಾದಲ ಫ‌ಲ, ಎಂಬ ವಿವಿಧ ಜಾತಿ ಹಣ್ಣುಗಳು, ಸ್ಥಳೀಯ ತಳಿ ಸುವರ್ಣ ಗೆಡ್ಡೆ, ಗಜ ಲಿಂಬೆ ಬೇಳೆ, ಮೆಣಸು, ಸಾಂಬ್ರಾಣಿ, ಶ್ರೀಕುಂಬಳ, ಸೋರೆಕಾಯಿ, ಸೌತೆಕಾಯಿ, ಚೀನಿ ಕಾಯಿ, ಹಾಲು ಬೆಂಡೆ, ಮಟ್ಟುಗುಳ್ಳ, ಸಾಂಬಾರು ಸೌತೆ ಸೇರಿದಂತೆ ವಿವಿಧ ತರಕಾರಿಯನ್ನು ಪ್ರದರ್ಶನಕ್ಕೆ ಇಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next