ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬಹುಕೋಟಿ ರೂಪಾಯಿ ಹಗರಣ ನಡೆದಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್, ಉಡುಪಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅ. 9ರಂದು ಬ್ರಹ್ಮಾವರದಲ್ಲಿ ಕಾಲ್ನಡಿಗೆ ಜಾಥಾ, ಪ್ರತಿಭಟನೆ ಸಭೆ ನಡೆಯಲಿದೆ ಎಂದು ಶನಿವಾರ ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅ. 9ರಂದು ಬೆಳಗ್ಗೆ 10ಕ್ಕೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ ಬ್ರಹ್ಮಾವರ ಬಸ್ ನಿಲ್ದಾಣದವರೆಗೆ ಸಾವಿರಾರು ಮಂದಿ ಜನರು ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟಿಸಲಿದ್ದೇವೆ. ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. 3. ಕೋ.ರೂ. ಜಿಎಸ್‌ಟಿ ಸಹಿತ 14 ಕೋ.ರೂ.ಗೂ ಅಧಿಕ ವಂಚನೆ ಮಾಡಲಾಗಿದೆ. ಈ ಅವ್ಯವಹಾರದ ಸಂಪೂರ್ಣ ಸತ್ಯ ಆರ್‌ಟಿಐ ಮಾಹಿತಿಯಿಂದ ಬಯಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.
ಗುಜರಿ ಖರೀದಿ ಗುತ್ತಿಗೆ ಪಡೆದ ಮೆ| ನ್ಯೂ ರಾಯಲ್ ಟ್ರೇಡರ್ಸ್ ಚೆನ್ನೈ ಸಂಸ್ಥೆಯು ಟೆಂಡರ್‌ನಲ್ಲಿ ಜಿ.ಎಸ್.ಟಿ. ಹೊರತುಪಡಿಸಿ ಕೆ.ಜಿ.ಗೆ 82 ರೂ. ದರ ನಮೂದಿಸಿದೆ. ಆದರೆ ಮಾಹಿತಿ ಪ್ರಕಾರ ಸಾಗಾಟದ ಇ-ವೇ ಬಿಲ್ ಮತ್ತು ಹೊಸದಾಗಿ ಇನ್ವಾಯ್ಸ ರಚಿಸಿ ಸರಕಾರದ ಬೊಕ್ಕಸಕ್ಕೆ (ಜಿಎಸ್‌ಟಿ.) ಮತ್ತು ಕಾರ್ಖಾನೆಗೆ ವಂಚನೆ ಮಾಡಲು ಟೆಂಡರ್‌ನಲ್ಲಿ ನಮೂದಿಸಿದ ದರಕ್ಕಿಂತ ಕಡಿಮೆ ಮೊತ್ತ ಕೆ.ಜಿ.ಗೆ 30 ರೂ. ನಮೂದಿಸಿ ಕಾರ್ಖಾನೆ ಅವರು ಪಾವತಿಸಿದ ಜಿ.ಎಸ್.ಟಿ. ಮೊತ್ತಕ್ಕೆ ಸರಿದೂಗಿಸಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪ್ರಸಾದ್‌ರಾಜ್ ಹೇಳಿದರು.
ಎಲ್ಲ ಹಗರಣಗಳು ಉಡುಪಿ ಜಿಲ್ಲಾ ರೈತ ಸಂಘದ ಗಮನಕ್ಕೆ ಬಂದ ದಿನಾಂಕದಿಂದ ಬೇರೆ ಬೇರೆ ಮೂಲಗಳಿಂದ ಮಾಹಿತಿ ಕಲೆಹಾಕಿ ಪೊಲೀಸ್ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
50 ಸಾವಿರ ರೂ. ಮೇಲ್ಪಟ್ಟ ಯಾವುದೇ ಸರಕು ಸಾಮಗ್ರಿ ಮಾರಾಟ ಮಾಡುವಾಗ ಇ-ವೇ ಬಿಲ್, ವೇ ಬ್ರಿಜ್ ರಶೀದಿ, ಇನ್ವಾಯ್ಸ್, ಗೇಟ್ ಪಾಸ್ ಇವುಗಳನ್ನು ಮಾರಾಟ ಮಾಡುವ ಸಂಸ್ಥೆ ಕಡ್ಡಾಯ ದಾಖಲಿಸಿಕೊಳ್ಳಬೇಕು. ಆದರೆ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸರಕಾರಕ್ಕೆ ಯಾವುದೇ ಮಾಹಿತಿ ನೀಡದೆ ಎಲ್ಲ ನಿಯಮ ಉಲ್ಲಂ ಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ತಿಳಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ ಹೇರೂರು, ಮುಖಂಡರಾದ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಜ್ಯೋತಿ ಹೆಬ್ಟಾರ್, ಕುಶಲ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.