ಉಡುಪಿ: ಗರೋಡಿಗಳ ಅರ್ಚಕರು, ಪಾತ್ರಿಗಳು ದೇವರ ಸೇವೆಗಾಗಿ ದುಡಿಯುವವರು ಅವರಲ್ಲಿ ಸಮರ್ಪಣ ಮನೋಭಾವ ಇರುವುದರಿಂದ ಸೇವೆ ಮಾಡುತ್ತಿದ್ದಾರೆ.ಅವರ ಸೇವೆ ಅನನ್ಯವಾದುದು ಎಂದು ರಾಜ್ಯ ಸರಕಾರದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೆ. 10ರಂದು ಬ್ರಹ್ಮಾವರ ಬಿಲ್ಲವ ಸೇವಾ ಸಂಘದಲ್ಲಿ ಸಂಘದ ವತಿಯಿಂದ ನಡೆದ ನಾರಾಯಣ ಗುರು ಜಯಂತಿ, ಸ್ಥಳೀಯ ಗರೋಡಿಗಳ ಅರ್ಚಕರಿಗೆ, ಗುರಿಕಾರರಿಗೆ, ವಿದ್ಯಾರ್ಥಿ, ಸಮಾಜ ಸೇವಾಕರಿಗೆ ಸಮ್ಮಾನ,ವಿದ್ಯಾರ್ಥಿ ವೇತನ, ಅನಾರೋಗ್ಯರಿಗೆ ಧನ ಸಹಾಯ, ಬಹುಮಾನ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳೇ ನಿಮಗೆ ಮುಂದೆ ಭವಿಷ್ಯವಿದೆ ಅದನ್ನು ಬಳಸಿಕೊಂಡು ನೀವು ಸ್ವಂತ ಕಾಲಲ್ಲಿ ನಿಂತು ನಮ್ಮ ಸಮಾಜವನ್ನು ಮುಂದೆ ತರುವ ಕೆಲಸ ಮಾಡಬೇಕಾಗಿದೆ ಎಂದರು. ಬಿಲ್ಲವ ಸೇವಾ ಸಂಘ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದರು.
ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಬಿಲ್ಲವ ಪರಿಷತ್‌ನ ಶೇಖರ ಕರ್ಕೇರ, ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಶಂಕರ ಪೂಜಾರಿ, ಹತ್ತನೇ ತರಗತಿಯಲ್ಲಿ ಶೇಕಡಾ ನೂರು ಅಂಕ ಪಡೆದ ಪ್ರತೀಕ್ಷಾ, ಬಿಲ್ಲವ ಸೇವಾ ಸಂಘ ಉಪಾಧ್ಯಕ್ಷ ಅಶೋಕ ಪೂಜಾರಿ ಹಾರಾಡಿ, ರಾಘು ಪೂಜಾರಿ, ಕಾರ್ಯದರ್ಶಿ ಪ್ರಶಾಂತ ಪೂಜಾರಿ, ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೀತಿ ರಾಜು ಪೂಜಾರಿ,ಕಾರ್ಯದರ್ಶಿ ಶೇಖರ ಕೋಟ್ಯಾನ್,ಕೋಶಾಧಿಕಾರಿ ಮೋಹನ ಪೂಜಾರಿ, ಮಾಜಿ ಕೋಶಾಧಿಕಾರಿ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನರಸಿಂಹ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೂಜಾರಿ ಪ್ರಸ್ತಾವನೆಗೈದರು. ಉಪ ನ್ಯಾಸಕ ದಯಾನಂದ ಕಾರ್ಯ ಕ್ರಮ ನಿರೂಪಿಸಿದರು. ಯುವ ವೇದಿಕೆಯ ಅಧ್ಯಕ್ಷ ಅಶೋಕ ಹೇರೂರು ಅವರು ವಂದಿಸಿದರು.