ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾಸಂಘಟನೆ ಗಾಂಧಿನಗರ ಬೈಕಾಡಿ ಇವರ ಆಯೋಜನೆಯ ಮೂರನೇ ವರ್ಷದ ‘ರಂಗೋತ್ಸವ-2024’ ಕಾರ್ಯಕ್ರಮವು ದಿನಾಂಕ ಏಪ್ರಿಲ್ 05 ರಿಂದ 07ರವರೆಗೆ ಮೂರು ದಿನಗಳ ಕಾಲ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣ ನಿರ್ಮಲ ಶಾಲಾ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವು ನಾದ ಮಣಿನಾಲ್ಕೂರು ಅವರ ಸದಾಶಯದ ಅರಿವಿನ ಹಾಡುಗಳೊಂದಿಗೆ ಉದ್ಘಾಟನೆಗೊಳ್ಳಲಿದ್ದು ಮುಖ್ಯ ಅಥಿತಿಗಳಾಗಿ ರಂಗನಿರ್ದೇಶಕರಾಗಿರುವ ವಾಸುದೇವ ಗಂಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಹೋಲಿ ಫ್ಯಾಮಿಲಿ ಚರ್ಚ್ ಇದರ ಫಾದರ್ ಜಾನ್ ಫೆರ್ನಾಂಡಿಸ್, ದ.ಸಂ.ಸ ಇದರ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಡಾ. ಎವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇದರ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿರಲಿದ್ದಾರೆ.
ಪ್ರತಿದಿನ ಸಂಜೆ 7 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಮೊದಲನೇ ದಿನ ಅಸ್ತಿತ್ವ (ರಿ.) ಮಂಗಳೂರು ಇವರ ಅರುಣ್ ಲಾಲ್ ಕೇರಳ ನಿರ್ದೇಶನದ ‘ಜುಗಾರಿ’ ನಾಟಕ ಪ್ರದರ್ಶನಗೊಳ್ಳಲಿದೆ, ಎರಡನೇ ದಿನ ಅಂಕದ ಮನೆ ಜಾನಪದ ಕಲಾತಂಡ ರಿ. ತೆಂಕುಬಿರ್ತಿ ಇವರು ನಡೆಸಿಕೊಡುವ ಜನಪದ ಸಂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಎರಡನೇ ದಿನ ಅತಿಥಿಯಾಗಿ ಡಾ. ಮಹಾಬಲೇಶ್ವರ್ ರಾವ್ ಸಮನ್ವಯಾಧಿಕಾರಿಗಳು ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿ ಇವರು ಉಪಸ್ಥಿತರಿರಲಿದ್ದಾರೆ.
ರಂಗಪಯಣ ಬೆಂಗಳೂರು ಪ್ರಸ್ತುತಪಡಿಸುವ ರಾಜ್ ಗುರು ಹೊಸಕೋಟೆ ನಿರ್ದೇಶನದ ‘ನವರಾತ್ರಿಯ ಕೊನೆಯ ದಿನ’ ನಾಟಕ ನಡೆಯಲಿದೆ. ಹಾಗೂ ಮೂರನೇ ದಿನದ ಅತಿಥಿಯಾಗಿ ಡಾ. ಗಣನಾಥ ಎಕ್ಕಾರ್ ನಿಕಟಪೂರ್ವ ಎನ್ಎಸ್ಎಸ್ ಅಧಿಕಾರಿ ಹಾಗೂ ಪದನಿಮಿತ್ತ ಜಂಟಿ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಇವರು ಉಪಸ್ಥಿತರಿರಲಿದ್ದು ಆ ದಿನ ಸಂಗಮ ಕಲಾವಿದೆರ್ ಮಣಿಪಾಲ (ರಿ.) ಇವರ ರೋಹಿತ್ ಎಸ್ ಬೈಕಾಡಿ ನಿರ್ದೇಶನದ ಮೃತ್ಯುಂಜಯ ನಾಟಕ ಪ್ರದರ್ಶನಗೊಳ್ಳಲಿದೆ.
ಮಂದಾರ(ರಿ.) ಯುವಕರೇ ಒಗ್ಗೂಡಿ ಮುನ್ನಡೆಯುತ್ತಿರುವ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯಾಗಿದೆ.