Advertisement

Brahmavar: ನಿತ್ಯ ಒದ್ದಾಟ, ರಸ್ತೆಯ ವಿಸ್ತರಣೆ ಎಂದು..?

02:36 PM Dec 09, 2024 | Team Udayavani |

ಬ್ರಹ್ಮಾವರ: ಮಣಿಪಾಲ ನೇರ ಸಂಪರ್ಕದಿಂದ ಇತ್ತೀಚಿನ ದಿನಗಳಲ್ಲಿ ಕೊಳಲಗಿರಿ ಶೀಂಬ್ರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಒಂದೇ ವಾಹನ ಸಂಚರಿಸುವಷ್ಟು ಕಿರಿದಾದ ರಸ್ತೆಯಾದ್ದರಿಂದ ಸವಾರರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

Advertisement

ಶೀಂಬ್ರದಲ್ಲಿ ಸ್ವರ್ಣಾ ನದಿಗೆ ಸೇತುವೆ ನಿರ್ಮಿಸಿದ್ದರಿಂದ ಪೇತ್ರಿ, ಆರೂರು, ಉಪ್ಪೂರು, ಹಾವಂಜೆ ಮೊದಲಾದ ಗ್ರಾಮಾಂತರ ಪ್ರದೇಶದವರಿಗೆ ಮಣಿಪಾಲ ಅತಿ ಸಮೀಪವಾಗಿದೆ. ಕೂರಾಡಿ ನೀಲಾವರ ಸಂಪರ್ಕ ಸೇತುವೆಯಿಂದ ಈ ಭಾಗದ ಜನರೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಪ್ರತಿ ನಿತ್ಯ ನೌಕರಿಗೆ ತೆರಳುವ ನೂರಾರು ಮಂದಿ ಸಹಿತ ಸಾವಿರಾರು ಜನರಿಗೆ ಈ ಮಾರ್ಗ ಅನುಕೂಲ. ಆದರೆ ಆರೂರು ಸೇತುವೆಯಿಂದ ಶೀಂಬ್ರ ತನಕ ಸುಮಾರು 5 ಕಿ.ಮೀ. ಸಂಚಾರ ಕಿರಿಕಿರಿ ಜತೆಗೆ ಅಪಾಯಕಾರಿ.

ರಸ್ತೆ ಬದಿ ಗುಂಡಿ
ಮಳೆಗಾಲದಲ್ಲಿ ಘನ ವಾಹನ ಸಂಚಾರದಿಂದ ರಸ್ತೆ ಬದಿಯಲ್ಲಾದ ಗುಂಡಿಗಳು ಈಗಲೂ ಹಾಗೆಯೇ ಇದೆ. ಎದುರಿನಿಂದ ಇನ್ನೊಂದು ವಾಹನ ಬಂದಾಗ ರಸ್ತೆಯಲ್ಲಿ ತೆರಳಲೂ ಆಗದ, ರಸ್ತೆಯಿಂದ ಕೆಳಗಿಳಿಸಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿ ಸವಾರರಿದ್ದಾರೆ. ದ್ವಿಚಕ್ರ ವಾಹನದಲ್ಲಿ ತೆರಳುವ ಮಹಿಳೆಯರ ಸ್ಥಿತಿಯಂತೂ ಹೇಳ ತೀರದು. ಮಣಿಪಾಲದಿಂದ ಬರುವಾಗ ಕೊಳಲಗಿರಿ ಸಮೀಪ ಕಡಿದಾದ ಗುಡ್ಡವನ್ನು ಏರಬೇಕಿದ್ದು ಹೊಸದಾಗಿ ಸಂಚರಿಸುವವರು, ವಯಸ್ಕರು, ಮಹಿಳೆಯರು ತೀರಾ ಅಪಾಯಕ್ಕೆ ಈಡಾಗುತ್ತಿದ್ದಾರೆ.

ರಾತ್ರಿ ದುಸ್ಥಿತಿ
ಹಗಲು ಹೇಗೋ ಸಾವರಿಸಿಕೊಂಡು ಹೋಗುವ ಪ್ರಯಾಣಿಕರು ರಾತ್ರಿ ವೇಳೆ ಪರದಾಡುತ್ತಾರೆ. ಒಂದೆಡೆ ಕಣ್ಣು ಕೋರೈಸುವ ವಾಹನಗಳ ದೀಪ, ಇನ್ನೊಂದೆಡೆ ರಸ್ತೆ ಬದಿಯ ಹೊಂಡ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಅತಿ ಶೀಘ್ರದಲ್ಲಿ ಈ ರಸ್ತೆಯನ್ನು ವಿಸ್ತರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆದ್ಯತೆಯ ಮೇಲೆ ಕ್ರಮ
ಗ್ರಾಮೀಣ ಪ್ರದೇಶಗಳಿಂದ ಮಣಿಪಾಲ ಹಾಗೂ ಜಿಲ್ಲಾ ಕೇಂದ್ರವನ್ನು ಅತೀ ಶೀಘ್ರದಲ್ಲಿ ಸಂಪರ್ಕಿಸುವ ಈ ರಸ್ತೆಯ ವಿಸ್ತರಣೆಗೆ ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿ ತ್ವರಿತ ಕಾಮಗಾರಿಗೆ ಪ್ರಯತ್ನಿಸಲಾಗುವುದು.
-ಯಶಪಾಲ್‌ ಸುವರ್ಣ, ಶಾಸಕರು, ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next