ಕುಂದಾಪುರ: ನಾರಾಯಣ ಗುರುಗಳ ಒಂದೇ ಜಾತಿ, ಓಂದೇ ಧರ್ಮ ಎನ್ನುವ ಸಂದೇಶವನ್ನು ಜೀವನದಲ್ಲಿ ಅನುಷ್ಟಾನ ಮಾಡಿದರೆ ಈ ಆಚರಣೆಗಳಿಗೆ ನಿಜವಾದ ಅರ್ಥ ಬರುತ್ತದೆ. ಗುರುಗಳ ತತ್ವ, ಸಿದ್ಧಾಂತಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜರಗಿದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ದೀಪಬೆಳಗಿಸಿ,ಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಉಡುಪಿಯ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಉಪನ್ಯಾಸಕ ದಯಾನಂದ್ ಮಾತನಾಡಿ, ವಿದ್ಯೆ, ಸ್ವತಂತ್ರ, ಸಂಘಟನೆ, ಹೋರಾಟದಿಂದ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಕಂಡುಕೊಂಡ ನಾರಾಯಣಗುರುಗಳು ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಚಿಂತನೆಯನ್ನು ಕಂಡುಕೊಂಡರು. ಶಿಕ್ಷಣ ಹಾಗೂ ಜ್ಞಾನದ ಕೊರತೆಯಿಂದಾಗಿ ಜನರಿಗೆ ಸಮಸ್ಯೆಗಳು ಎದುರಾಗುತ್ತಿರುವುದನ್ನು ಮನಗಂಡ ಅವರು ಶಿಕ್ಷಣದಿಂದ ಎಲ್ಲಾ ಸಮಸ್ಯೆಗಳ ನಿರ್ಮೂಲನೆ ಸಾಧ್ಯ ಎಂದು ಅರಿತು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಕಾರ್ಯಕ್ಕೆ ಕೈ ಹಾಕಿದರು. ಒಟ್ಟಿನಲ್ಲಿ ಅವರ ತತ್ವ ಸಿದ್ಧಾಂತಗಳ ದಾರಿಯಲ್ಲಿ ನಡೆದ್ದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವುದನ್ನು ಈ ಸಮಾಜಕ್ಕೆ ತೋರಿಸಿಕೊಟ್ಟರು ಎಂದರು.
ಕುಂದಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ತಾ.ಪಂ. ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಮಂಜು ಬಿಲ್ಲವ, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ತಾಲೂಕು ತಹಶೀಲ್ದಾರ್ ಜಿ.ಎಂ.ಬೋರ್ಕರ್ ಸ್ವಾಗತಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಪೂಜಾರಿ ವಂದಿಸಿದರು.