Advertisement

ಪುತ್ತೂರು ಜಾತ್ರೆಗೆ ಸಿದ್ಧಗೊಳ್ಳುತ್ತಿದೆ ಬ್ರಹ್ಮರಥ 

11:56 AM Apr 04, 2018 | |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಗೊನೆ ಮುಹೂರ್ತ ನಡೆದಿದೆ. ಪುತ್ತೂರು ಜಾತ್ರೆಯಲ್ಲಿ ಪ್ರಧಾನ ಆಕರ್ಷಣೆಯನ್ನು ಹೊಂದಿರುವ ಬ್ರಹ್ಮರಥವನ್ನು ಅಣಿಗೊಳಿಸುವ ಕಾರ್ಯವನ್ನು ಆರಂಭಿಸಲಾಗಿದೆ.

Advertisement

70 ಅಡಿ ಎತ್ತರದ ಬ್ರಹ್ಮರಥವನ್ನು ಸಿದ್ಧಗೊಳಿಸುವ ಕಾರ್ಯದ ಜವಾಬ್ದಾರಿಯನ್ನು ಸುಬ್ರಹ್ಮಣ್ಯದ 10ಕ್ಕೂ ಹೆಚ್ಚು ಮಲೆಕುಡಿಯ ಕುಶಲಕರ್ಮಿಗಳು ನಿರ್ವಹಿಸುತ್ತಿದ್ದಾರೆ. ಸಣ್ಣರಥವನ್ನು ಸಿದ್ಧಗೊಳಿಸುವ ಕೆಲಸವನ್ನು ಸ್ಥಳೀಯ ಪ್ರತ್ಯೇಕ ತಂಡ ಮಾಡುತ್ತಿದೆ. ಸಣ್ಣರಥವನ್ನು ಎ. 16 ರಂದು ರಾತ್ರಿ ದೇವಸ್ಥಾನದ ಹೊರಾಂಗಣದಲ್ಲಿ ಮತ್ತು ಬ್ರಹ್ಮರಥ ವನ್ನು ಎ. 17ರಂದು ದೇವಸ್ಥಾನದ ರಥಬೀದಿಯಲ್ಲಿ ಎಳೆಯಲಾಗುತ್ತದೆ.

ಗೊನೆ ಮುಹೂರ್ತದ ಬಳಿಕ ಕುಕ್ಕೆ ಸುಬ್ರಹ್ಮಣ್ಯದ ಕುಶಲ ಕರ್ಮಿಗಳು ರಥ ಕಟ್ಟುವ ಕೆಲಸ ಆರಂಭಿಸಿದ್ದಾರೆ. ಬ್ರಹ್ಮರಥದ ಗೋಲ ಮತ್ತು ಶಿಖರವನ್ನು ಸಿದ್ಧ ಪಡಿಸಲು ಹತ್ತು ಅಡಿ ಉದ್ದದ ಸುಮಾರು 800 ಬೆತ್ತದ ನಾರು ಮತ್ತು 70 ಬಿದಿರುಗಳನ್ನು ಬಳಸಲಾಗುತ್ತದೆ. ಮಧ್ಯಾಹ್ನ ವಿಪರೀತ ಬಿಸಿಲು ಇರುವ ಕಾರಣ ಪ್ರತಿದಿನ ಬೆಳಗ್ಗೆ 7ರಿಂದ 10 ಗಂಟೆಯ ತನಕ ಸಂಜೆ 4ರಿಂದ 7ರ ತನಕ ಕೆಲಸ ನಡೆಸಲಾಗುತ್ತದೆ.

ರಥ ಕಟ್ಟುವ ರೀತಿ
70 ಅಡಿ ಎತ್ತರದ ಬ್ರಹ್ಮರಥದ ಗೋಲ ಮತ್ತು ಗೋಲದ ಕೆಳಭಾಗದ ಸುತ್ತು ಪಟ್ಟಿ ರಚನೆಗೆ ಅಲ್ಯೂಮೀನಿಯಂ ಮತ್ತು ಕಬ್ಬಿಣದ ಸಲಾಕೆಗಳನ್ನು ಕೂಡ ಬಳಸಲಾಗುತ್ತದೆ. ಇದರ ರಚನೆಯನ್ನು ಮಾಡಿದ ಬಳಕ ಬಿದಿರಿನ ಸಲಾಕೆಗಳನ್ನು ಬೆತ್ತದ ನಾರಿನಿಂದ ಕಟ್ಟಲಾಗುತ್ತದೆ.

ಅನಂತರ ಪತಾಕೆ ಜೋಡಿಸುವ, ಅಷ್ಟದಿಕ್ಪಾಲಕರನ್ನು ಕಟ್ಟುವ ಕೆಲಸ ಮಾಡಲಾಗುತ್ತದೆ. ಎ. 10ರಂದು ಧ್ವಜಾರೋಹಣವಾದ ಬಳಿಕ ಬ್ರಹ್ಮರಥದ ಶಿಖರ ಕಲಶವನ್ನು ಜೋಡಿಸಲಾಗುತ್ತದೆ. ಬ್ರಹ್ಮರಥವನ್ನು ಅಲಂಕರಿಸಲು 12 ಸಾವಿರದಷ್ಟು ಬಿಳಿ ಮತ್ತು ಕೆಂಪು ಬಣ್ಣದ ಪತಾಕೆಗಳನ್ನು ಬಳಸಲಾಗುತ್ತಿದ್ದು, ಸುತ್ತು ಪಟ್ಟಿಯನ್ನು ಅಲಂಕರಿಸಲು ಧಾರ್ಮಿಕ ಚಿತ್ರಪಟವನ್ನು ಬಳಸಲಾಗುತ್ತದೆ. ಬ್ರಹ್ಮರಥದ ಶಿಖರ ಕಳಸದ ಮೇಲೆ ಸತ್ತಿಗೆಯನ್ನು ಜೋಡಿಸಲಾಗುತ್ತದೆ.

Advertisement

30 ಅಡಿ ಎತ್ತರದ ಸಣ್ಣರಥದ ಗೋಲ ಮತ್ತು ಶಿಖರವನ್ನು ಸಿದ್ಧಪಡಿಸಲು 25 ಬಿದಿರುಗಳನ್ನು ಬಳಸಲಾಗುತ್ತದೆ. ಈ ರಥವನ್ನು ಅಲಂಕರಿಸಲು ಬಿದಿರಿನ ಸಲಾಕೆಯನ್ನು, 3 ಸಾವಿರದಷ್ಟು ಬಿಳಿ ಮತ್ತು ಕೆಂಪು ಬಣ್ಣದ ಪತಾಕೆಗಳನ್ನು ಬಳಸಲಾಗುತ್ತದೆ. ಈ ರಥದ ಗೋಲದ ಕೆಳ ಭಾಗದ ಸುತ್ತು ಪಟ್ಟಿಗೆ ಬಿಳಿ ಮತ್ತು ಕೆಂಪು ಬಣ್ಣದ ಬಟ್ಟೆಯಿಂದ ಅಲಂಕರಿಸಲಾಗುತ್ತದೆ. ಎರಡೂ ರಥಗಳು ಎ. 15ರ ವೇಳೆಗೆ ಸಿದ್ಧಗೊಳ್ಳುತ್ತವೆ.

ಸಣ್ಣ ರಥ ಮತ್ತು ಬ್ರಹ್ಮರಥವನ್ನು ಅಣಿಗೊಳಿಸುವ ಕೆಲಸ ಆರಂಭಗೊಂಡಿರುವುದು ಜಾತ್ರಾ ಉತ್ಸವದ ಸಿದ್ಧತೆಯನ್ನು ಸೂಚಿಸುತ್ತದೆ. 70 ಅಡಿ ಎತ್ತರದ ಪುತ್ತೂರು ಬ್ರಹ್ಮ ರಥೋತ್ಸವವನ್ನು ವೀಕ್ಷಿಸಲು ಊರು, ಪರವೂರಿನಿಂದ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸುತ್ತಾರೆ. ಎತ್ತರದ ರಥದಲ್ಲಿ ದೇವರು ಸಾಗುವುದನ್ನು ಮತ್ತು ಮೇಲ್ಭಾಗದಲ್ಲಿ ಸುಡುಮದ್ದಿನ ಆಕರ್ಷಣೆಯನ್ನು ವೀಕ್ಷಿಸುವುದೇ ಹಬ್ಬ. ಈ ಬಾರಿ ರಥ ಬೀದಿಗೆ ನಗರಸಭೆಯಿಂದಲೂ ಹೈಮಾಸ್ಟ್‌
ವಿದ್ಯುತ್‌ ದೀಪವನ್ನು ಅಳವಡಿಸಲಾಗಿದೆ.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next