Advertisement

ಕಟೀಲು ಬ್ರಹ್ಮಕಲಶೋತ್ಸವ: ಧಾರಾಶುದ್ಧಿ -ಯಜುರ್ವೇದ ಪಾರಾಯಣ

07:59 PM Jan 31, 2020 | mahesh |

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ 4ನೇ ದಿನವಾದ ಶನಿವಾರ ಬೆಳಗ್ಗೆ 5ರಿಂದ ಧಾರಾಶುದ್ಧಿ – ಯಜುರ್ವೇದ ಪಾರಾಯಣ, ಅಂಭೃಣೀಸೂಕ್ತ ಹೋಮ, ಲಕ್ಷ್ಮೀ ಹೃದಯ ಹೋಮ, ಗಣಪತಿ ಬಿಂಬಶುದ್ಧಿ, 108 ತೆಂಗಿನಕಾಯಿ ಗಣಪತಿ ಹೋಮ, ಗಣಪತಿ ಪ್ರಾಯಶ್ಚಿತ್ತ, ಬ್ರಹ್ಮರ ಸನ್ನಿಧಿಯಲ್ಲಿ ಕಲಶಾಭಿಷೇಕ ಜರಗಿತು. ಬೆಳಗ್ಗೆ ಭ್ರಾಮರೀವನದಲ್ಲಿ ಚಂದ್ರಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷ ತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳನ್ನು ಸ್ಥಾಪಿಸಲಾಯಿತು.

Advertisement

ರಾಶಿವನ ಸ್ಥಾಪನೆ
ಭ್ರಾಮರೀವನದಲ್ಲಿ ನವಗ್ರಹ, ನಕ್ಷತ್ರ, ರಾಶಿವನದಲ್ಲಿ ಆಯಾಯ ಗಿಡಗಳನ್ನು ನೆಡಲಾಗುತ್ತಿದೆ. ಅನಂತರ ಆಸಕ್ತ ಭಕ್ತರಿಗೆ ಸಸಿಗಳನ್ನೇ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಶುಕ್ರವಾರದಂದು ಆದಿತ್ಯಹೋಮ ಮಾಡಿ, ರವಿಗ್ರಹಕ್ಕೆ ಎಕ್ಕ, ಸಿಂಹ ರಾಶಿಗೆ ಪಾತಲ, ಮಖ ನಕ್ಷತ್ರಕ್ಕೆ ಗೋಳಿ, ಹುಬ್ಬಕ್ಕೆ ಪಾಲಶ, ಉತ್ತರಕ್ಕೆ ಕಿರೊಳಿ ಹೀಗೆ ಒಂದು ಗ್ರಹ, ಒಂದು ರಾಶಿ ಹಾಗೂ ಮೂರು ನಕ್ಷತ್ರಗಳಿಗೆ ಸಂಬಂಧಿಸಿ ಗಿಡಗಳನ್ನು ಶನಿವಾರ ಬೆಳಗ್ಗೆ ನೆಡಲಾಯಿತು.

ಮೊಕ್ತೇಸರರಾದ ಸನತ್‌ ಕುಮಾರ್‌ ಶೆಟ್ಟಿ, ವಾಸುದೇವ ಆಸ್ರಣ್ಣ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌ ಮೊದಲಾದವರು ಗಿಡಗಳನ್ನು ನೆಟ್ಟರು. ಅನಂತರ ಮಾಣಿಲ ಸ್ವಾಮೀಜಿ ಅವರು ಶಾಸಕ ಉಮಾನಾಥ ಕೊಟ್ಯಾನ್‌ ಸಹಿತ ಕೆಲವು ಭಕ್ತರಿಗೆ ಗಿಡಗಳನ್ನು ಪ್ರಸಾದ ರೂಪವಾಗಿ ನೀಡಿದರು.

ಸಂಜೆ 5 ರಿಂದ ಭೂವರಾಹ ಹೋಮ, ಸ್ವಯಂವರ ಪಾರ್ವತಿ ಪೂಜೆ ಹಾಗೂ ಹೋಮ, ಉತ್ಸವಬಲಿ, ರಕ್ತೇಶ್ವರೀ ಸನ್ನಿ ಧಿಯಲ್ಲಿ ವಾಸ್ತುಪೂಜೆ, ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಶತೀಪಾರಾಯಣ ನಡೆಯಿತು. ಬ್ರಹ್ಮಕಲಶೋತ್ಸವದ ನಾಲ್ಕನೇ ದಿನ  ದಂದು ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಅನ್ನಪೂರ್ಣದಲ್ಲಿ ಭೋಜನ ಪ್ರಸಾ ದವನ್ನು ಸ್ವೀಕರಿಸಿದ್ದಾರೆ.

ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕಾಗಿ ಸ್ವಯಂಸೇವಕರಿಂದ ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದ್ದು ದೇವಸ್ಥಾನದ ಒಳಗೆ ಹಾಗೂ ಹೊರಗೆ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Advertisement

ಹೊರೆಕಾಣಿಕೆ ಉಗ್ರಾಣ ಭರ್ತಿ
ಶನಿವಾರ ಸುಳ್ಯ, ಪುತ್ತೂರು, ಬೆಂಗಳೂರಿ ನಿಂದ ಒಂದು ಲಾರಿಯಷ್ಟು ದವಸ ಧಾನ್ಯ ಗಳು ಬಂದಿದ್ದು ಬಹುತೇಕ ಉಗ್ರಾಣ ಹೊರೆಕಾಣಿಕೆಯಿಂದ ಭರ್ತಿಯಾಗಿದೆ. ಹೊರೆಕಾಣಿಕೆ ತಂದ ಭಕ್ತರಿಗೆ ಅನುಗ್ರಹ ಪತ್ರ ಹಾಗೂ ಪ್ರಸಾದ ಲಡ್ಡು ನೀಡಲು ಪ್ರತ್ಯೇಕ ಕೌಂಟರ್‌ ಮಾಡಲಾಗಿದೆ.  ದೇವಸ್ಥಾನಕ್ಕೆ ಬಜಪೆ ಕಡೆಯಿಂದ ಬರುವ ಭಕ್ತರು ನಂದಿನಿ ನದಿಯ ಸೇತುವೆಯ ಬಳಿಯಲ್ಲಿ ಬಸ್‌ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ವಾಹನದಲ್ಲಿ ಬರುವ ಭಕ್ತರಿಗೆ ಮಾಂಜ, ಕಟೀಲು ಗ್ರಾ. ಪಂ. ಬಳಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಕಿನ್ನಿಗೋಳಿ ಕಡೆಯಿಂದ ಬರುವ ಭಕ್ತರಿಗೆ ಗಿಡಿಗೆರೆ ದೈವಸ್ಥಾನದ ಬಳಿಯಲ್ಲಿ ಪಾರ್ಕಿಂಗ್‌ ಹಾಗೂ ಬಸ್‌ನಿಲ್ದಾಣ ಮಾಡಲಾಗಿದೆ.

ಬಿಗಿಭದ್ರತೆ
ಭದ್ರತೆಯ ದೃಷ್ಟಿಯಿಂದ ದೇವಸ್ಥಾನ ಹಾಗೂ ಅನ್ನಛತ್ರ, ಪಾಕಶಾಲೆ, ಪಾರ್ಕಿಂಗ್‌, ಸಭಾ ಮಂಟಪ, ರಥ ಬೀದಿಯಲ್ಲಿ 500ಕ್ಕೂ ಹೆಚ್ಚು ಸಿಸಿ ಕೆಮರಾ ಅಳವಡಿಸಲಾಗಿದೆ.

ಇಂದಿನ ಕಾರ್ಯಕ್ರಮಗಳು
ಕಟೀಲು: ಇಲ್ಲಿನ ಬ್ರಹ್ಮಕಲಶೋತ್ಸವದ ಐದನೇ ದಿನವಾದ ರವಿವಾರದಂದು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಬೆಳಗ್ಗೆ 5ರಿಂದ ಧಾರಾಶುದ್ಧಿ-ಸಾಮವೇದ ಮತ್ತು ಅಥರ್ವವೇದ ಪಾರಾಯಣ, ಅವಗಾಹ ಮತ್ತು ಸೇಕ ಶುದ್ಧಿ, ರುದ್ರಯಾಗ, ಶಾಸ್ತ್ರಬಿಂಬಶುದ್ಧಿ, ಮನ್ಯುಸೂಕ್ತಹೋಮ, ಪಂಚದುರ್ಗಾ ಹೋಮಗಳು, ರಾತ್ರಿಸೂಕ್ತ ಹೋಮ, ಒಳಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯಲಿವೆ.

ಬೆಳಗ್ಗೆ ಭ್ರಾಮರೀವನದಲ್ಲಿ ಅಂಗಾರಕಯಾಗ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ ನಡೆಯಲಿದೆ. ಸಂಜೆ 5 ರಿಂದ ವನದುರ್ಗಾಪೂಜೆ ಮತ್ತು ಹೋಮ, ದುರ್ಗಾ ಮಾರ್ಕಂಡೇಯ ಪ್ರೋಕ್ತಪ್ರಾಯಶ್ಚಿತ್ತ ಹೋಮಗಳು, ಉತ್ಸವ ಬಲಿ, ಭ್ರಾಮರೀ ವನದಲ್ಲಿ ಕೋಟಿ ಜಪಯಜ್ಞ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next