ಪಡುಬಿದ್ರಿ: ಶ್ರೀ ಮಹಾಲಕ್ಷ್ಮೀ ಸನ್ನಿಧಿ ಸುಂದರವಾಗಿ ಮೂಡಿ ಬಂದಿದೆ. ಕ್ಷೇತ್ರವು ಯಾತ್ರಾಸ್ಥಳವಾಗಿ ಶ್ರೀ ಮಹಾಲಕ್ಷ್ಮೀಯು ಸಮಾಜವನ್ನು ಸದಾ ಹರಸಲಿ. ವರ್ಷದೊಳಗೆ ಶ್ರೀ ಸನ್ನಿಧಿಗೆ ಸ್ವರ್ಣ ರಥದ ಸಮರ್ಪಣೆಯೂ ಆಗಲಿ ಎಂದು ಕಟಪಾಡಿಯ ಶ್ರೀ ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಅವರು ರವಿವಾರ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಕೌಶಲಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಜತೆಗೆ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳೂ ಈ ದೇವಾಲಯದ ಪರಿಸರದಲ್ಲಿ ಸ್ಥಾಪಿಸಲ್ಪಡಲಿ. ಸಂಸ್ಕಾರಯುತ ಶಿಕ್ಷಣ ಇಲ್ಲಿ ಸಿಗಲಿ. ಪ್ರತೀ ರವಿವಾರ ಇಲ್ಲಿ ಬಾಲ ಸಂಸ್ಕಾರ ಕೇಂದ್ರವನ್ನೂ ನಡೆಸುವಂತಾಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಜಿ. ಶಂಕರ್ ಮಾತನಾಡಿ, ಕೇಂದ್ರ ಸರಕಾರದ ಕೌಶಲಾಭಿವೃದ್ಧಿ ಶಿಕ್ಷಣ ಕೇಂದ್ರವನ್ನು ಹಾಸ್ಟೆಲ್ ಜತೆಗೆ ಆರಂಭಿಸುವ ಯೋಜನೆಯಿದೆ. ಇದಕ್ಕಾಗಿ ರವಿಕುಮಾರ್ ಪ್ರಯತ್ನದಿಂದ ರಾಜ್ಯ ಸರಕಾರವು ಇನ್ನೂ ಸುಮಾರು 5 ಕೋಟಿ ರೂ. ಅನುದಾನ ನೀಡುವಂತಾಗಬೇಕು ಎಂದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ದ.ಕ., ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್, ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾ ಅಧ್ಯಕ್ಷೆ ಯಶೋದಾ, ಮುಂಬಯಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಬಿ.ಜಿ. ಶ್ರೀಯಾನ್, ಉದ್ಯಮಿ ಆನಂದ ಸಿ. ಕುಂದರ್, ದ.ಕ., ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷ ಮೌಲಾಲಿ, ದ.ಕ., ಮೊಗವೀರ ಹಿತಸಾಧನಾ ವೇದಿಕೆ ಅಧ್ಯಕ್ಷ ಸರ್ವೋತ್ತಮ ಕುಂದರ್, ಸುರತ್ಕಲ್‌ನ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಎರ್ಮಾಳು, ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಮಂಡ್ಯ ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ರಮೇಶ್, ಮಂಗಳೂರು ಮೊಗವೀರ ಯುವ ವೇದಿಕೆಯ ಜಗದೀಶ್, ಶಿವಮೊಗ್ಗ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಣ್ಣಪ್ಪ, ತೀರ್ಥಹಳ್ಳಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಶ್ರೀನಿವಾಸ, ಶಿವಮೊಗ್ಗ ಜಿಲ್ಲೆ ಗಂಗಾಮತಸ್ಥರ ಸಂಘದ ಅಧ್ಯಕ್ಷ ಡಿ.ವಿ. ಕೆಂಚಪ್ಪ, ಸಾಗರ ಟೌನ್ ಗಂಗಾಮತಸ್ಥರ ಸಂಘದ ಅಧ್ಯಕ್ಷ ಶಿವಾನಂದ, ಹೊಸನಗರ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ನರಸಿಂಹ, ಚಿಕಮಗಳೂರು ಮೊಗವೀರ ಮಹಾಜನ ಸಂಘದ ರಾಮಣ್ಣ ಉಪಸ್ಥಿತರಿದ್ದರು.
ದೇಣಿಗೆ ಹಸ್ತಾಂತರ
ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗಾಗಿ 1ಲಕ್ಷ ರೂ.ಗಳ ದೇಣಿಗೆ ಡಾ| ಜಿ. ಶಂಕರ್ ಅವರಿಗೆ ಹಸ್ತಾಂತರಿಸಲಾಯಿತು. ಶಿವಮೊಗ್ಗ ಗಂಗಾಮತಸ್ಥ ಸಂಘದಿಂದ ಡಾ| ಜಿ. ಶಂಕರ್ ಅವರನ್ನು ಗೌರವಿಸಲಾಯಿತು.
ಸುರೇಶ್ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶಂಕರ ಸಾಲ್ಯಾನ್ ವಂದಿಸಿದರು.
ಬಡ ಸಮಾಜವಲ್ಲ; “ಬಡಾ’ ಸಮಾಜ
ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಮಾತನಾಡಿ, ಶ್ರೀ ಮಹಾಲಕ್ಷ್ಮೀ ಕ್ಷೇತ್ರದಿಂದ ಹಿಂದೂ ಸಮಾಜಕ್ಕೆ ಒಂದು ಶಕ್ತಿ ಸಿಗುವಂತೆ ಡಾ| ಜಿ. ಶಂಕರ್ ಮಾಡಿದ್ದಾರೆ. ಗಂಗಾಮತಸ್ಥ, ಮೊಗವೀರ ಸಮಾಜವು ಇನ್ನಷ್ಟು ಒಗ್ಗಟ್ಟಾಗಬೇಕಿದೆ. ನಮ್ಮದು ಬಡ ಸಮಾಜ ಅಲ್ಲ. ಬಡಾ(ದೊಡ್ಡ) ಸಮಾಜವಾಗಿದೆ ಎಂದರು.