Advertisement

‘ಮೂಲ ಮೃತ್ತಿಕಾ ಪ್ರಸಾದ ಅತಿ ಶ್ರೇಷ್ಠ’

11:34 AM Apr 23, 2018 | |

ಸುಳ್ಯ : ಮೂಲ ಮೃತ್ತಿಕಾ ಪ್ರಸಾದಕ್ಕೆ ಶ್ರೇಷ್ಠ ಸ್ಥಾನವಿದೆ. ಅದರ ಸಾಧ್ಯತೆ, ಸಾಮರ್ಥ್ಯವನ್ನು ವಿಜ್ಞಾನಿಗಳು ಗ್ರಹಿಸಲು ಸಾಧ್ಯವಿಲ್ಲ. ಅದು ಅದೃಶ್ಯ ಸ್ವರೂಪದ, ಅತೀಂದ್ರಿಯ ಶಕ್ತಿ ಎಂದು ಮಂತ್ರಾಲಯದ ಯತಿವರೇಣ್ಯ ಶ್ರೀ ಸುಬುಧೇಂದ್ರ ಸ್ವಾಮೀಜಿ ಹೇಳಿದರು.

Advertisement

ಅವರು ಸುಳ್ಯದ ನೂತನ ಶ್ರೀ ಗುರು ರಾಘವೇಂದ್ರ ಮಠದದಲ್ಲಿ ರವಿವಾರ ಶ್ರೀ ಗುರುರಾಘವೇಂದ್ರಾಂತರ್ಗತ ಶ್ರೀ ಮೂಲ ದೇವರ ಪ್ರತಿಷ್ಠೆ, ಶ್ರೀ ಗುರು ರಾಘವೇಂದ್ರ ಯತಿಗಳ ಬೃಂದಾವನ ಪ್ರತಿಷ್ಠೆ, ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಅನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶ್ರೀ ಗುರು ರಾಘವೇಂದ್ರ ಯತಿಗಳ ಶಕ್ತಿ ಅತ್ಯದ್ಭುತ. ಮಂತ್ರಾಲಯ ಬೆಳೆದಂತೆ, ಅವರ ಸಾನ್ನಿಧ್ಯ ಹೊಂದಿರುವ ಸುಳ್ಯದ ಮಠವು ಬೆಳೆಯಲಿ. ಎಲ್ಲ ಭಕ್ತರ ಅಭೀಷ್ಟೆಗಳನ್ನು ಈಡೇರಿಸಿ, ಇದೊಂದು ಪುಣ್ಯ ನೆಲೆಯಾಗಿ ಪರಿವರ್ತನೆ ಹೊಂದಲಿ ಎಂದು ನುಡಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಂ ಭಟ್‌ ಮಾತನಾಡಿ, ಅವಿಭಜಿತ ದ.ಕ. ದೇವಾಲಯಗಳ ಜಿಲ್ಲೆ. ನೂರಾರು ಧಾರ್ಮಿಕ ಕೇಂದ್ರಗಳು ಪುನರುತ್ಥಾನಗೊಂಡಿವೆ. ಆ ಸಾಲಿಗೆ ಹೊಸದೊಂದು ಸೇರ್ಪಡೆಗೊಂಡಿದ್ದು, ಗುರು ರಾಘವೇಂದ್ರರ ಆರಾಧನೆಯಿಂದ ಮನಃಶಾಂತಿ ದೊರೆಯಲು ಸಾಧ್ಯವಿದೆ ಎಂದರು.

ಮಂಗಳೂರು ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಜಯರಾಮ ಉಡುಪ ಧಾರ್ಮಿಕ ವಿಚಾರಗಳ ಕುರಿತು ವಿವರಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ, ಶ್ರೀ ರಾಘವೇಂದ್ರ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಮಾತನಾಡಿ, ಸರ್ವ ಭಕ್ತರ ಸಮಾಗಮದೊಂದಿಗೆ ಸುಂದರ ಮಠ ನಿರ್ಮಾಣವಾಗಿದೆ. ಅದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ, ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಲಿ ಎಂದರು.

Advertisement

ವೇದಿಕೆಯಲ್ಲಿ ಸುಳ್ಯ ಬೃಂದಾವನ ಸೇವಾ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಶ್ರೀಕೃಷ್ಣ ಎಂ.ಎನ್‌., ಶ್ರೀ ರಾಘವೇಂದ್ರ ಮಠ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್‌ ಕುಮಾರ್‌ ಮೇನಾಲ, ಶ್ರೀ ರಾಘವೇಂದ್ರ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳೀಕೃಷ್ಣ ಡಿ.ಆರ್‌., ಪ್ರವೀಣ ಎಸ್‌. ರಾವ್‌, ಶಶಿಧರ ಎಂ.ಜೆ., ಪ್ರಕಾಶ್‌ ಮೂಡಿತ್ತಾಯ ಪಿ., ರಮೇಶ್‌ ಸೋಮಯಾಗಿ, ಕೆ. ಪ್ರಭಾಕರ ನಾಯರ್‌ ಉಪಸ್ಥಿತರಿದ್ದರು. ಮಠ ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ.ಬಿ. ಸುಧಾಕರ ರೈ ಪ್ರಸ್ತಾವನೆಗೈದು, ಸ್ವಾಗತಿಸಿದರು. ರೇಖಾ ಶೇಟ್‌ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ ಸುಳ್ಯ ಶಿವಳ್ಳಿ ಸಂಪನ್ನ, ಮುರುಳ್ಯ ಶ್ರೀ ಮಹಾಗಣಪತಿ ಭಜನ ಮಂಡಳಿ ಅವರಿಂದ ಭಜನೆ ನಡೆಯಿತು. ಸುಬ್ರಹ್ಮಣ್ಯ ಯಜ್ಞೆಶ್‌ ಆಚಾರ್‌ ಮತ್ತು ಬಳಗದಿಂದ ಭಕ್ತಿ ಸಂಗೀತ ನಡೆಯಿತು. ಶ್ರೀ ಗುರುರಾಯರ ಬಳಗದ ಪುಟಾಣಿಗಳಿಂದ ದಶಾವತಾರ ಯಕ್ಷ-ಭರತ-ನಾಟಕ ಪ್ರದರ್ಶನಗೊಂಡಿತ್ತು.

ಬಿಟ್ಟು ಹೋಗಲಾಗುತ್ತಿಲ್ಲ 
ತುಳು ಭಾಷೆಯಲ್ಲಿ ಮಾತು ಆರಂಭಿಸಿದ ಶ್ರೀ ಸುಬುಧೇಂದ್ರ ಸ್ವಾಮೀಜಿ, ಇದೊಂದು ಅದ್ಭುತ ನೆಲೆ. ಇಲ್ಲಿ ನದಿ, ಪರಿಸರ, ವಿವಿಧ ದೇವರ ಸಾನ್ನಿಧ್ಯಗಳನ್ನು ಕಂಡಾಗ, ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ ಎಂದು ಹೇಳಿ, ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next