Advertisement

ಆಲಂಬಗಿರಿಯಲ್ಲಿ ವೈಭವದ ಬ್ರಹ್ಮರಥೋತ್ಸವ

11:03 AM Apr 20, 2019 | Team Udayavani |

ಕೋಲಾರ: ಜಿಲ್ಲೆಯ ಆಲಂಬಗಿರಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಕಲ್ಕಿ ಲಕ್ಷ್ಮಿವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ವಿಕಾರಿನಾಮ ಸಂವತ್ಸರದ ಚೈತ್ರ ಮಾಸದ ಹುಣ್ಣಿಮೆಯಂದು ವೈಭವವಾಗಿ ನಡೆಯಿತು.

Advertisement

ರಥೋತ್ಸವದ ಸಂದರ್ಭದಲ್ಲಿ ಆಕಾಶದಲ್ಲಿ ಬಂದ ಗರುಡಪಕ್ಷಿ ರಥವನ್ನು ಪ್ರದಕ್ಷಿಣೆ ಮಾಡಿ ಭಕ್ತರಿಗೆ ದರ್ಶನವನ್ನು ನೀಡಿತು. ನಂತರ ಗೋವಿಂದ, ಗೋವಿಂದ ಎಂದು ಸ್ಮರಿಸುತ್ತಾ ಸಹಸ್ರಾರು ಭಕ್ತರು ಬೃಹತ್‌ ರಥವನ್ನು ಎಳೆದು ಕೃತಾರ್ಥರಾದರು.

ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ  ಅಲಂಕರಿಸಲಾಗಿತ್ತು. ಬೆಳಗ್ಗಿನಿಂದಲೇ ದೂರದ ಊರಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಕೈವಾರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ತಂದು, ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಗುರುಗಳ ವತಿಯಿಂದ ಶ್ರೀಕೃಷ್ಣ ಗಂಧೋತ್ಸವ ವಿಶೇಷ ಸೇವೆಯನ್ನು ಶ್ರೀಯೋಗಿನಾರೇಯಣ ಮಠದ ಧರ್ಮಾ ಕಾರಿ
ಡಾ.ಎಂ.ಆರ್‌.ಜಯರಾಮ್‌ ದಂಪತಿಗಳು ಶ್ರದ್ಧಾಭಕ್ತಿಗಳಿಂದ ನೇರವೇರಿಸಿದರು. ಶ್ರೀಕೃಷ್ಣ ಗಂಧೋತ್ಸವ ಸೇವೆಯ ನಂತರ ಆಸ್ಥಾನ ಸೇವೆಯನ್ನು ನೇರವೇರಿಸಿ, ಅಲಂಕೃತಗೊಂಡಿದ್ದ ರಥಕ್ಕೆ ಶ್ರೀಭೂನೀಳಾ ಸಮೇತ ಶ್ರೀಲಕ್ಷಿ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಉತ್ಸವ ಪಲ್ಲಕ್ಕಿಯಲ್ಲಿ ವೇದ ಘೋಷದಲ್ಲಿ ಕರೆತರ ಲಾಯಿತು. ರಥದಲ್ಲಿ ದೇವರನ್ನು ಇಡುತ್ತಿದ್ದಂತೆಯೇ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ಭಕ್ತರು ತೇರು ಬಾಳೆಹಣ್ಣು, ಧವನ ತೇರಿಗೆ ಅರ್ಪಿಸಿದರು.

ನೀರು ಮಜ್ಜಿಗೆ ವಿತರಣೆ: ಬಿಸಿಲಿನ ಬೇಗೆಯನ್ನು ತಣಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನಬಂಡಿಗಳಲ್ಲಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮಜ್ಜಿಗೆ, ಪಾನಕ ಕೊಸಂಬರಿ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉಚಿತ ನೀರಿನ ಪ್ಯಾಕೆಟ್‌ಗಳನ್ನು ಸಹ ಹಂಚುತ್ತಿದ್ದರು. ನಾದಸ್ವರ, ತಮಟೆ ವಾದ್ಯದೊಂದಿಗೆ ರಥೋತ್ಸವವು ಸಾಗಿತು.

ವಿವಿಧ ವಾಹನೋತ್ಸವ: 11 ದಿನಗಳು ನಡೆಯುವ ಈ ಬ್ರಹ್ಮ ರಥೋತ್ಸವ ಕೈಂಕರ್ಯಗಳು ಶ್ರೀರಾಮ  ನವಮಿ ಯಿಂದ ಆರಂಭವಾಗಿ ಅಂಕುರಾರ್ಪಣೆ, ಧ್ವಜಾರೋಹಣ ಕಾರ್ಯಕ್ರಮಗಳು ನಡೆಯುತ್ತದೆ. ನಂತರದ ದಿನಗಳಲ್ಲಿ, ಸಿಂಹವಾಹನೋತ್ಸವ, ಹನುಮಂತವಾಹನೋತ್ಸವ, ಶೇಷವಾಹನೋತ್ಸವ, ಸೂರ್ಯಪ್ರಭವಾಹನೋತ್ಸವ, ಗರುಡೋತ್ಸವ, ಗಜವಾಹನೋತ್ಸವ ಹೀಗೆ ಹಲವಾರು ವಿಶೇಷ ವಾಹನಗಳ ಸೇವೆಯನ್ನು ಸ್ವಾಮಿಗೆ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next