Advertisement

ವರ್ಷ ಕಳೆದರೂ ಕೈ ಸೇರದ ಕಾರ್ಡ್‌; ಸ್ಥಳ ಪರಿಶೀಲನೆ ಬಳಿಕವಷ್ಟೇ ಬಿಪಿಎಲ್‌ ಸೌಲಭ್ಯ

12:15 AM Sep 28, 2021 | Team Udayavani |

ಪುತ್ತೂರು: ವಿಳಂಬ ಪ್ರಕ್ರಿಯೆ, ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಹೊಸ ನಿಯಮಗಳಿಂದಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿ ಭರ್ತಿ ಒಂದು ವರ್ಷ ಕಳೆದರೂ ಅರ್ಜಿ ಸಲ್ಲಿಸಿದವರ ಕೈಗಿನ್ನೂ ಬಿಪಿಎಲ್‌ ಪಡಿತರ ಚೀಟಿ ಸಿಕ್ಕಿಲ್ಲ. ಇದರಿಂದ ಗ್ರಾಮ ಪಂಚಾಯತ್‌ನ ವಸತಿ ಸಹಿತ ವಿವಿಧ ಸರಕಾರಿ ಇಲಾಖೆಗಳಿಂದ ಸವಲತ್ತು ಪಡೆಯಲಾಗದ ದುಸ್ಥಿತಿ ಉಂಟಾಗಿದೆ.

Advertisement

ಪಡಿತರ ಚೀಟಿ ಹೊಂದಿಲ್ಲದ ಫಲಾನುಭವಿಗಳು ಹೊಸದಾಗಿ ಪಡಿತರ ಚೀಟಿ ಪಡೆಯಲು ವರ್ಷದ ಹಿಂದೆ ಸರಕಾರ ಆಹಾರ ಮತ್ತು ನಾಗರಿಕ ಇಲಾಖೆಯ ಮೂಲಕ ಅರ್ಜಿ ಆಹ್ವಾನಿಸಿತ್ತು. ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.

ಕೋವಿಡ್‌ ಕಾಲಘಟ್ಟದಲ್ಲಿ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿದ್ದರೂ ಕೆಲವು ದಿನಗಳಿಂದ ಮತ್ತೆ ಸೈಟ್‌ ತೆರೆದಿದೆ. ಸರ್ವರ್‌ ಸಮಸ್ಯೆಗಳ ಮಧ್ಯೆ ನೂರಾರು ಮಂದಿ ಆಹಾರ ಇಲಾಖೆ ಅಥವಾ ನೋಂದಾಯಿತ ಸೈಬರ್‌ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಸ್ಥಳ ಪರಿಶೀಲನೆಯ ಬಳಿಕವಷ್ಟೇ ಬಿಪಿಎಲ್‌ ಎಪಿಎಲ್‌ ಕಾರ್ಡ್‌ದಾರರಿಗೆ ಅರ್ಜಿ ಸಲ್ಲಿಸಿದ ತತ್‌ಕ್ಷಣ ತಾತ್ಕಾಲಿಕ ಪಡಿತರ ಚೀಟಿ ದೊರೆಯುತ್ತಿದೆ. ಆದರೆ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ. ಬಿಪಿಎಲ್‌ ಕಾರ್ಡ್‌ ನೀಡಲು ಹಲವು ನಿಯಮಗಳನ್ನು ವಿಧಿಸಲಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಸಮರ್ಪಕ ವಾಗಿದೆಯೇ ಎನ್ನುವ ಬಗ್ಗೆ ಕಚೇರಿ ತಪಾಸಣೆ ನಡೆಯುತ್ತದೆ. ಪ್ರಸ್ತುತ ಈ ಹಂತದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಲ್ಲಿ ಒಪ್ಪಿಗೆಯಾದರೆ ಅರ್ಜಿದಾರರ ವಾಸ ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿ ಬಿಪಿಎಲ್‌ ಸೌಲಭ್ಯ ಪಡೆಯಲು ಅರ್ಹನೇ ಎಂದು ಪರಿಶೀಲಿಸಲು ಸರಕಾರ ಸೂಚನೆ ನೀಡಿದೆ. ಈ ಪರಿಶೀಲನೆಯ ಜವಾಬ್ದಾರಿ ಆಹಾರ ಇಲಾಖೆಯದೇ ಅಥವಾ ಕಂದಾಯ ಇಲಾಖೆಯದೇ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ಪರಿಶೀಲನೆಯ ಬಳಿಕ ಅರ್ಹ ಫಲಾನುಭವಿಗೆ ಪಡಿತರ ಚೀಟಿ ಒದಗಿಸಲು ಸಾಪ್ಟ್ವೇರ್‌ನಲ್ಲಿ ಆಪ್ಶನ್‌ ತೆರೆಯಬೇಕಿದೆ.

ಇದನ್ನೂ ಓದಿ:ದೇವಾಲಯ ತೆರವು: ನಂಜನಗೂಡು ತಹಶೀಲ್ದಾರ್ ಮೊಹನ ಕುಮಾರಿಗೆ ತಲೆ ದಂಡ

Advertisement

ಈ ಎರಡೂ ಪ್ರಕ್ರಿಯೆಗಳು ಬಾಕಿ ಇರುವ ಕಾರಣ ಬಿಪಿಎಲ್‌ ಕಾರ್ಡ್‌ ನೀಡಿಕೆ ವಿಳಂಬವಾಗುತ್ತಿದೆ. ಈ ಪರಿಶೀಲನೆಯು ದುರ್ಬಳಕೆಯನ್ನು ತಪ್ಪಿಸುವ ಉದ್ದೇಶ ಹೊಂದಿದ್ದರೂ ವಿಳಂಬ ನೀತಿಯಿಂದ ಅರ್ಹರಿಗೆ ತೊಂದರೆ ಆಗುತ್ತಿದೆ. ಪುತ್ತೂರು ತಾಲೂಕಿನಲ್ಲಿ 920 ಅರ್ಜಿಗಳು ಸಲ್ಲಿಕೆಯಾಗಿದ್ದರೆ ವಿಲೇ ಆಗಿರುವುದು 10 ಮಾತ್ರ. ಬಂಟ್ವಾಳದಲ್ಲಿ 1,303 ಅರ್ಜಿಗಳಲ್ಲಿ ನಾಲ್ಕು ಮಾತ್ರ ವಿಲೇ ಆಗಿವೆ. ಬೆಳ್ತಂಗಡಿಯಲ್ಲಿ 824 ಅರ್ಜಿ ಸಲ್ಲಿಕೆಯಾಗಿದ್ದರೆ 5 ಮಾತ್ರ ವಿಲೇ ಆಗಿವೆ.

ತಿದ್ದುಪಡಿಗೆ ಅವಕಾಶ ನೀಡಿ
ಈಗಾಗಲೇ ಕಾರ್ಡ್‌ ಹೊಂದಿದ್ದು, ತಿದ್ದುಪಡಿ ಮಾಡಬೇಕಿದ್ದರೆ ಅದಕ್ಕೆ ಈಗ ಅವಕಾಶ ಇಲ್ಲ. ಇದೂ ಸಮಸ್ಯೆಯಾಗಿದೆ. ಬಿಪಿಎಲ್‌ ಕಾರ್ಡ್‌ ಸದಸ್ಯನೊಬ್ಬ ಮೃತಪಟ್ಟಿದ್ದರೆ ಕಾರ್ಡ್‌ನಿಂದ ಹೆಸರು ತೆಗೆಯುವಂತಿಲ್ಲ. ಇದರಿಂದ ಕೆವೈಸಿಗೆ ತೊಂದರೆ. ಸೆಪ್ಟಂಬರ್‌ನಲ್ಲಿ ನಾಲ್ಕು ದಿನಗಳ ಕಾಲ ಸಾಫ್ಟ್ವೇರ್‌ನಲ್ಲಿ ತಿದ್ದುಪಡಿಗೆ ಅವಕಾಶ ಸಿಕ್ಕಿದ್ದರೂ ಹೆಚ್ಚಿನವರಿಗೆ ಮಾಹಿತಿ ಸಿಗದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸೈಬರ್‌ ಕೇಂದ್ರವೊಂದರ ಮುಖ್ಯಸ್ಥರು.

ಹೊಸ ಪಡಿತರ ಚೀಟಿ ಇಲ್ಲ!
ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಫಲಾನುಭವಿಗಳಿಗೆ ಹೊಸ ಕಾರ್ಡ್‌ ಬಂದಿಲ್ಲ. ತಾತ್ಕಾಲಿಕ ಕಾರ್ಡ್‌ ಕೂಡ ಸಿಗುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆಯಲ್ಲಿ ಪ್ರಶ್ನಿಸಿದರೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರಕ್ಕಷ್ಟೇ ಅವಕಾಶ ಇದೆ, ಹೊಸ ಕಾರ್ಡ್‌ ನೀಡುವ ಆಪ್ಶನ್‌ ಇನ್ನಷ್ಟೇ ತೆರೆಯಬೇಕು. ವೈದ್ಯಕೀಯ ತುರ್ತು ಇದ್ದವರಿಗೆ ವೈದ್ಯರು, ತಹಶೀಲ್ದಾರರ ವರದಿ ಆಧರಿಸಿ ಕಾರ್ಡ್‌ ಒದಗಿಸಬಹುದು ಎನ್ನುವ ಉತ್ತರ ದೊರೆತಿದೆ. ಸಮಸ್ಯೆಯ ಬಗ್ಗೆ ಅರ್ಜಿದಾರರು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪರಿಹಾರವಾಗಿಲ್ಲ. ಶಾಲಾ ಚಟುವಟಿಕೆ ಪುನರಾರಂಭಗೊಂಡಿದ್ದು, ಸ್ಕಾಲರ್‌ಶಿಪ್‌ ಮತ್ತಿತರ ಸೌಲಭ್ಯಗಳಿಗಾಗಿ ಬಿಪಿಎಲ್‌ ಕಾರ್ಡ್‌ ಆವಶ್ಯಕತೆ ಉಳ್ಳವರಿಗೆ ತೊಂದರೆಯಾಗಿದೆ.

ಇ-ಕೆವೈಸಿ: ಅ. 1ರಿಂದ ಅವಕಾಶ
ಇ-ಕೆವೈಸಿ ಸದ್ಯ ಸ್ಥಗಿತಗೊಂಡಿದೆ. ಅ. 1ರಿಂದ ಅ. 10ರ ತನಕ ಇ-ಕೆವೈಸಿಗೆ ಅವಕಾಶ ಇದ್ದು, ಮಾಡಿಸಿಕೊಳ್ಳದವರು ಸದು ಪಯೋಗ ಪಡೆಯಬಹುದು ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ಪಡಿತರ ಚೀಟಿ ಶೀಘ್ರ ವಿತರಿಸುವ ನಿಟ್ಟಿನಲ್ಲಿ ಆಹಾರ ಸಚಿವರ ಜತೆ ಚರ್ಚಿಸಿದ್ದೇನೆ. ಗುರುವಾರ ಮತ್ತೂಮ್ಮೆ ಅವರ ಜತೆ ಮಾತನಾಡಿ ಅರ್ಹರಿಗೆ ಪಡಿತರ ಚೀಟಿ ದೊರೆಯಲು ಅಗತ್ಯ ಕ್ರಮ ಕೈಗೊಳ್ಳ ಲಾಗುವುದು.
-ಎಸ್‌. ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ

ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಲು ಆನ್‌ಲೈನ್‌ನಲ್ಲಿ ಆಪ್ಶನ್‌ ತೆರೆದುಕೊಳ್ಳಬೇಕಿದೆ. ಕೆಲವು ದಿನಗಳಲ್ಲಿ ಅವಕಾಶ ದೊರೆಯಲಿದೆ. ಈ ಬಗ್ಗೆ ಸರಕಾರದಿಂದಲೂ ಸೂಚನೆ ಲಭಿಸಿದ್ದು, ಅದಾದ ಬಳಿಕ ಪಡಿತರ ಚೀಟಿ ನೀಡಲಾಗುವುದು.
– ಕೆ.ಪಿ. ಮಧುಸೂದನ್‌,
ಜಂಟಿ ನಿರ್ದೇಶಕರು, ಆಹಾರ ಇಲಾಖೆ, ದಕ್ಷಿಣ ಕನ್ನಡ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next