Advertisement
ಹೌದು, ಇಂಥವರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ರಾಜ್ಯದ 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರವು ಈ ಪಡಿತರ ಚೀಟಿ ಹಿಂದೊಪ್ಪಿಸಲು ಹಲವು ಅವಕಾಶ ನೀಡಿದ್ದರೂ ನಿರ್ಲಕ್ಷಿಸಿದ ಅನರ್ಹರ ಮಾಹಿತಿ ಸಂಗ್ರಹಿಸಿ ಅವರಿಂದ ಈ ತನಕ ಪಡೆದ ಆಹಾರ ಸಾಮಗ್ರಿಗೆ ದಂಡ ವಸೂಲಿ ಮಾಡಲಿದೆ.
Related Articles
Advertisement
ನಾಲ್ಕು ಚಕ್ರಗಳ ವಾಹನ ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರ ಕುಟುಂಬಗಳ ಮಾಹಿತಿ ನೀಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸಾರಿಗೆ ಇಲಾಖೆಯನ್ನು ಕೋರಿತ್ತು. ಇಲಾಖೆಯು ಅಂಥವರ ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡಿದೆ. ಅದರ ಅನ್ವಯ ಆಯಾ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರ/ನಿರೀಕ್ಷಕರಿಗೆ ಅನರ್ಹ ಪಡಿತರ ಚೀಟಿದಾರರ ಪಟ್ಟಿ ಕಳುಹಿಸಲಾಗಿದೆ. ನಿಯಮ ಉಲ್ಲಂ ಸಿದವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ದಾಖಲೆಗಳು, ಹೆಸರಿನ ವ್ಯತ್ಯಾಸ ಗೊಂದಲ ಇದ್ದಲ್ಲಿ ಸ್ಥಳ ಪರಿಶೀಲಿಸುವ ಅಧಿಕಾರವನ್ನು ನೀಡಲಾಗಿದ್ದು, ಅನರ್ಹರು ದಂಡ ಪಾವತಿಸಲೇ ಬೇಕಿದೆ.
ಮೂರು ದಿನ ಕಾಲಾವಕಾಶ:
ನೋಟಿಸ್ ತಲುಪಿದ 3 ದಿನಗಳ ಒಳಗೆ ಕಾರ್ಡುದಾರ ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಬೇಕು. ಅಲ್ಲಿ ಪಾವತಿಸಬೇಕಾದ ದಂಡದ ಮೊತ್ತವನ್ನು ತಿಳಿಸಲಾಗುತ್ತದೆ. ದಂಡ ಮೊತ್ತವನ್ನು ಸರ್ಕಾರದ ಟ್ರೆಜರಿಗೆ ಪಾವತಿಸಬೇಕಾದ ಕಾರಣ ಚಲನ್ ನೀಡಲಾಗುತ್ತದೆ. ಬ್ಯಾಂಕ್‌ನಲ್ಲಿ ದಂಡ ಮೊತ್ತ ಕಟ್ಟಿದ ರಶೀದಿಯನ್ನು ಪುನಃ ಆಹಾರ ನಿರೀಕ್ಷಕರಿಗೆ ನೀಡಬೇಕು. ಬಳಿಕ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ. ರಶೀದಿ ಒಪ್ಪಿಸುವ ತನಕ ಕಾರ್ಡನ್ನು ಅಮಾನತಿನಲ್ಲಿಡಲಾಗುತ್ತದೆ.
ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ:
ಪಡಿತರ ಚೀಟಿದಾರ ವಾಹನ ಖರೀದಿಸಿದ ದಿನಾಂಕ, ಪಡಿತರ ಚೀಟಿ ನೋಂದಣಿ ಆದ ದಿನಾಂಕವನ್ನು ಇಲಾಖೆಯು ವೆಬ್‌ಸೈಟ್‌ನಲ್ಲಿ ಗಮನಿಸುತ್ತದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮೊದಲೇ ವಾಹನ ಹೊಂದಿದ್ದರೆ ಆತ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿದ್ದಾನೆ ಎಂದರ್ಥ. ಅಂಥವರಿಗೆ ದಂಡ ಹೆಚ್ಚಿರುತ್ತದೆ. ಪಡಿತರ ಚೀಟಿ ಆದ ಬಳಿಕ ವಾಹನ ಖರೀದಿಸಿದ್ದರೆ, ವಾಹನ ಪಡೆದ ದಿನದಿಂದ ದಂಡ ಅನ್ವಯ ಆಗುತ್ತದೆ. ಕಾರ್ಡುದಾರ ಈ ತನಕ ಪಡೆದಿರುವ ಪಡಿತರ ಸಾಮಗ್ರಿಗೆ ಈಗಿನ ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ ಕಟ್ಟಬೇಕು. ಅಂದರೆ ಪಡಿತರ ಇಲಾಖೆಯಿಂದ 1 ರೂ.ಗೆ ಅಕ್ಕಿ ಪಡೆಯುತ್ತಿದ್ದರೆ ಈಗಿನ ಮಾರುಕಟ್ಟೆ ಮೌಲ್ಯ ಕೆ.ಜಿ.ಗೆ 28 ರೂ. ಎಂದು ಪರಿಗಣಿಸಬಹುದು. ಆರಂಭದಿಂದ ಈ ತನಕ ಪಡೆದ ಪಡಿತರ ಸಾಮಗ್ರಿಗೆ ಈಗಿನ ಮಾರುಕಟ್ಟೆ ಮೌಲ್ಯ ಪ್ರಕಾರವೇ ದಂಡ ಪಾವತಿಸಬೇಕು.
ಗರಿಷ್ಠ ಅನರ್ಹ ಬಿಪಿಎಲ್ ಕಾರ್ಡ್‌ದಾರರು:
ಕಲಬುರಗಿ: 2,026
ಚಿಕ್ಕಮಗಳೂರು : 1,838
ಬೆಂಗಳೂರು: 1,273
ಕನಿಷ್ಠ ಅನರ್ಹ ಬಿಪಿಎಲ್ ಕಾರ್ಡ್‌ದಾರರು :
ಗದಗ: 13
ಧಾರವಾಡ: 15
ಕೊಡಗು: 21
-ಕಿರಣ್ ಪ್ರಸಾದ್ ಕುಂಡಡ್ಕ