Advertisement

ಬೆಳ್ಳಿತೆರೆಗಳ ಮೇಲೆ ಬಿಪಿಎಲ್‌ ಜಾಗೃತಿ

10:13 AM Nov 29, 2019 | Team Udayavani |

ಬೆಂಗಳೂರು: ಬಸ್‌ ಆದ್ಯತಾ ಪಥದ ಬಗ್ಗೆ ಜನರಲ್ಲಿ ಜಾಗೃತಿಗೆ ಸಂಬಂಧಿಸಿದಂತೆ ಅಲ್ಪಾವಧಿಯಲ್ಲಿ ಹೆಚ್ಚು ಜನರನ್ನು ತಲುಪಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಯವೊಂದನ್ನುಮಾಡಿದ್ದು, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ ಗಳಲ್ಲಿ ಕಿರುಚಿತ್ರ ಪ್ರದರ್ಶಿಸಲಿದೆ.

Advertisement

ನಗರದಲ್ಲಿರುವ ಎಲ್ಲ ಪ್ರಕಾರದ ಚಿತ್ರಮಂದಿರಗಳು ಹಾಗೂ ಮಾಲ್‌ಗ‌ಳಲ್ಲಿರುವ ಮಲ್ಟಿಪ್ಲೆಕ್ಸ್‌ಗಳಲ್ಲಾಗುವ ಸಿನಿಮಾ ಪ್ರದರ್ಶನಗಳ ನಡುವೆ ಈ ಬಸ್‌ ಆದ್ಯತೆ ಪಥದ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಿ ಜಾಗೃತಿಗೆ ಸಂಸ್ಥೆ ಮುಂದಾಗಿದೆ. ಉಪಚುನಾವಣೆ ನೀತಿ ಸಂಹಿತೆ ತೆರವಾಗುತ್ತಿದ್ದಂತೆ, ಬೆಳ್ಳಿತೆರೆಗಳಲ್ಲಿ ಈ “ಕಿರು ಚಿತ್ರ’ ಮೂಡಿಬರಲಿದೆ.

ಒಂದರಿಂದ ಮೂರು ನಿಮಿಷದ ವೀಡಿಯೊ ಚಿತ್ರೀಕರಣದಲ್ಲಿ ಆದ್ಯತೆ ಪಥ ಎಂದರೇನು? ಅದರಿಂದಾಗುವ ಉಪಯೋಗಗಳು ಏನು? ಇತರೆ ವಾಹನಗಳ ಸಂಚಾರಕ್ಕೆ ಅಲ್ಲಿ ಅವಕಾಶ ಇಲ್ಲ ಹಾಗೂ ನಿಯಮ ಉಲ್ಲಂಘನೆಗೆ ದಂಡ ವಿಧಿಸುವುದು ಸೇರಿದಂತೆ ಹಲವು ಮಾಹಿತಿ ನೀಡಲು ಉದ್ದೇಶಿಸಲಾಗಿದೆ. ಚಿತ್ರಪ್ರದರ್ಶನ ಆರಂಭದಲ್ಲಿ, ಮಧ್ಯಂತರ ಹಾಗೂ ಕೊನೆಗೆ ಈ ಮೂರು ಸಂದರ್ಭಗಳ ಪೈಕಿ ಒಮ್ಮೆ ಅಥವಾ ಸಾಧ್ಯವಾದರೆ ಮೂರೂ ಸಮಯದಲ್ಲಿ ಬಿತ್ತರಿಸುವ ಚಿಂತನೆಯೂಇದೆ. ಈ ಬಗ್ಗೆ ಮಾತುಕತೆ ನಡೆದಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಪ್ರಸ್ತುತ ಬಿಎಂಟಿಸಿ, ಸಂಚಾರ ಪೊಲೀಸರು ಸೇರಿದಂತೆ ವಿವಿಧ ಸರ್ಕಾರೇತರ ಸಂಘ-ಸಂಸ್ಥೆಗಳು ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌. ಪುರ ನಡುವಿನ ಆದ್ಯತೆ ಪಥದ ಬಗ್ಗೆ ಫ‌ಲಕಗಳು, ಕರಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲ, ನಿರ್ವಹಣೆಗೆ ಸಿಬ್ಬಂದಿ ನಿಯೋಜಿ ಸಲಾಗಿದೆ. (ಆದರೆ, ಸಿಟಿಜನ್‌ ಫಾರ್‌ ಬೆಂಗಳೂರು ನಡೆಸಿದ ಆನ್‌ಲೈನ್‌ ಸಮೀಕ್ಷೆ ಪ್ರಕಾರ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಿಲ್ಲ). ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಖಾಸಗಿ ವಾಹನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಈ ಪಥದಲ್ಲಿ ವಾಹನಗಳ ನಿಲುಗಡೆ ಕೂಡ ಮಾಡಲಾಗುತ್ತಿದೆ. ಇದರಿಂದ ಬಸ್‌ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಲು ಇಂತಹದ್ದೊಂದು “ಐಡಿಯಾ’ ಮಾಡಲಾಗುತ್ತಿದೆ ಎಂದೂ ಹೇಳಿದರು.

150 ಥಿಯೇಟರ್‌, 40 ಮಲ್ಟಿಪ್ಲೆಕ್ಸ್‌: ನಗರದಲ್ಲಿ ಅಂದಾಜು 150 ವಿವಿಧ ಪ್ರಕಾರದ ಚಿತ್ರಮಂದಿರಗಳಿದ್ದು, 40ಕ್ಕೂ ಅಧಿಕ ಮಲ್ಟಿಪ್ಲೆಕ್ಸ್‌ ಗಳಿವೆ. ಇನ್ನು ಹೊರವರ್ತುಲ ರಸ್ತೆಯಲ್ಲಿ ಸಂಚರಿಸುವ ಜನ ಹೆಚ್ಚಾಗಿ ಟೆಕ್ಕಿಗಳಾಗಿದ್ದು, ಅವರಲ್ಲಿ ಬಹುತೇಕರು ಚಿತ್ರವೀಕ್ಷಣೆಗೆ ಮಾಲ್‌ಗ‌ಳಿಗೆ ತೆರಳುತ್ತಾರೆ. ಈ ನಿಟ್ಟಿನಲ್ಲಿ “ಜಾಗೃತಿ ಕಾರ್ಯಕ್ರಮ’ದ ಉದ್ದೇಶ ಫ‌ಲಿಸಬಹುದು ಎಂಬ ಲೆಕ್ಕಾಚಾರ ಸ್ಥಳೀಯ ಸಂಸ್ಥೆಗಳದ್ದಾಗಿದೆ. ವೀಡಿಯೊ ತುಣುಕು ಮೂರು ನಿಮಿಷಕ್ಕಿಂತ ಹೆಚ್ಚಿದ್ದರೆ, ಅದಕ್ಕೆ ಸಾಮಾನ್ಯವಾಗಿ ಜಾಹೀರಾತುಗಳಿಗೆ ವಿಧಿಸುವ ವಾಣಿಜ್ಯ ದರ ವಿಧಿಸಲಾಗುತ್ತದೆ. ಆದ್ದರಿಂದ ಒಂದೆರಡು\ ನಿಮಿಷಗಳಿಗೆ ಸೀಮಿತಗೊಳಿಸಲಾಗುವುದು ಎಂದುಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next