ಎಂದಿನಂತೆ ಪ್ರಾರ್ಥನೆಗೆಂದು ವಿದ್ಯಾರ್ಥಿಗಳ ಸಾಲು ಮಾಡಿಸಿ ಆಗಿತ್ತು. ಆಗ ನನ್ನ ಕಣ್ಣುಗಳು ಅÇÉೇ ನಮ್ಮ ಎದುರಿನಲ್ಲಿಯೇ, ಕಚೇರಿ ಪಕ್ಕದಲ್ಲಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣದ ಕೆಲಸಕ್ಕೆಂದು ಬಂದಿದ್ದ ಇಬ್ಬರು ತರುಣರ ಕಡೆಗೆ ಹೊರಳಿತು. ಗುದ್ದಲಿ, ಸೆನಿಕೆ, ಹಾರೆ ಗಳೊಂದಿಗೆ ಅಡಿಪಾಯ ತೆಗೆಯಲು ಸಿದ್ಧರಾಗಿ ನಿಂತಿದ್ದರು. ನಾಡಗೀತೆ ಮುಗಿಯಿತು. ರಾಷ್ಟ್ರಗೀತೆ ಶುರುವಾಯಿತು. ನೋಡ ನೋಡುತ್ತಿದ್ದಂತೆ, ಅವರ ಕೈಯಲ್ಲಿದ್ದ ಹಾರೆ, ಸೆನಿಕೆಗಳು ನೆಲದ ಸ್ಪರ್ಶ ಮಾಡಿದವು. ಇಲ್ಲಿ ರಾಷ್ಟ್ರಗೀತೆ ಶುರೂಕರ್ ಎಂದ ತಕ್ಷಣ ಆ ಇಬ್ಬರು ಹುಡುಗರ ದೇಹ ಬಿಗಿಗೊಂಡಿತು, ಯಾವುದೇ ಸಿಪಾಯಿಗೂ ಕಡಿಮೆ ಇಲ್ಲದಂತೆ. ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ. ಸಾಧನಗಳು ಮತ್ತೆ ಕೈ ಸೇರಿದವು.
ಮಾರನೇ ದಿನ, ಇವತ್ತು ಏನು ಮಾಡ್ತಾರೆ ಅಂತ ನೋಡಿದರೆ, ಮತ್ತದೇ ಶಿಸ್ತು ಪ್ರದರ್ಶನ. ಆಶ್ಚರ್ಯ ಹೆಚ್ಚಾಯಿತು. ಮಧ್ಯಾಹ್ನದ ಊಟದ ವೇಳೆ ಅವರು ಕೆಲಸ ಮಾಡುವ ಕಡೆಗೆ ಹೋದೆ. ಅವರಿಬ್ಬರೂ, 23-25ರ ವಯೋಮಾನದ ಯುವಕರು. ಬೀಡಿ ಸೇದಬಹುದಾ, ಕುಡಿಯಬಹುದಾ? ಅನುಮಾನ ಇತ್ತು. ಅಲ್ಲಿ ಎಲ್ಲೂ ಮೋಟು ಬೀಡಿಗಳು ಕಾಣಿಸಲಿಲ್ಲ. ಅಂದರೆ, ದುರಭ್ಯಾಸಕ್ಕೆ ದಾಸರಾಗಿರಲಿಲ್ಲ. ನನ್ನ ಅನುಮಾನಕ್ಕೆ ಅಂತ್ಯ ಇರಲಿಲ್ಲ. ಅವರ ವಿದ್ಯಾಭ್ಯಾಸ, ಸ್ವಂತ ಊರಿನ ಬಗ್ಗೆ ಮಾಹಿತಿ ಕೇಳುತ್ತಾ ಬೆಳಗ್ಗೆ ಶಾಲೆಯಲ್ಲಿ ರಾಷ್ಟ್ರಗೀತೆ ಹೇಳುವಾಗ ಇಲ್ಲಿ ನೀವು ಕೆಲಸ ಯಾಕೆ ನಿಲ್ಲಿಸಿದಿರಿ? ಅಂದೆ..
ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಸಾ ಅಂದ ಇಬ್ಬರಲ್ಲಿ ಒಬ್ಬ. ನನಗೆ ಪುಳಕವುಂಟಾಗಿತ್ತು. ಸಿಕ್ಕಾಪಟ್ಟೆ ಓದಿಕೊಂಡಿರುವವರೇ ರಾಷ್ಟ್ರಗೀತೆ ಶುರುವಾದರೆ ಕ್ಯಾರೇ ಅನ್ನುವುದಿಲ್ಲ. ಕೂಲಿ ಕೆಲಸ ಮಾಡುವ ಈ ಹುಡುಗರಿಗೆ ಎಂಥ ಸದ್ಭಾವನೆ ಗುಣ ಇದೆಯಲ್ಲ ಅನ್ನಿಸಿ, ಅವರನ್ನು ಅನುಮಾನಿಸಿದ್ದ ನನ್ನ ಬಗ್ಗೆ ನನಗೇ ನಾಚಿಕೆಯಾದಂತಾಯಿತು. ಈ ಸ್ಫೂರ್ತಿ ದಾಯಕ ಸಂಗತಿಯನ್ನು ನನ್ನ ಎಲ್ಲ ಸಹೋದ್ಯೋಗಿಗಳಿಗೂ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೂ ತಿಳಿಸಿದೆ. ಈ ಹೊಸ ವಿಚಾರ ತಿಳಇದು ಮಕ್ಕಳೆಲ್ಲಾ ಖುಷಿ ಪಟ್ಟರು.
ಮಂಜುನಾಥ ಸು. ಮ., ಚಿಂತಾಮಣಿ.