Advertisement

ದಿಲ್ಲಿ ವಿದ್ಯಾರ್ಥಿಗಳ ವಿಕೃತಿ ಎಚ್ಚರಿಕೆ ಅಗತ್ಯ

07:38 PM May 10, 2020 | Hari Prasad |

ಅಂತರ್ಜಾಲ ಮತ್ತು ಮೊಬೈಲ್‌ ಇಂದು ಬದುಕಿನ ಅವಿಭಾಜ್ಯ ಅಂಗಗಳಾಗಿ ಬದಲಾಗಿವೆ. ಭಾರತದಲ್ಲಿ 4ಜಿ ಹಾಗೂ ಅಗ್ಗದ ಸ್ಮಾರ್ಟ್‌ಫೋನ್‌ಗಳ ಕ್ರಾಂತಿ ಆರಂಭವಾದಾಗಿನಿಂದ ದೇಶದ ಬಹುತೇಕರಿಗೆ ಅಂತರ್ಜಾಲ ಸಂಪರ್ಕ ಬೆರಳಂಚಿಗೆ ನಿಲುಕಿದೆ.

Advertisement

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳು ಇವೆ. ಅದರಲ್ಲೂ ಲಾಕ್‌ ಡೌನ್‌ ಆರಂಭವಾದ ಅನಂತರದಿಂದ ದೇಶದಲ್ಲಿ ಅಂತರ್ಜಾಲ ಬಳಕೆ ಪ್ರಮಾಣ ಅಪಾರವಾಗಿ ವೃದ್ಧಿಸಿದೆ.

ಪ್ರತಿ ವ್ಯಕ್ತಿಯ ಸರಾಸರಿ ಅಂತರ್ಜಾಲ ಬಳಕೆ ಪ್ರಮಾಣ 4 ಗಂಟೆಗಳಿಗೂ ಅಧಿಕವಾಗಿದೆ. ಮನೆಯಿಂದ ಕೆಲಸ ಮಾಡುವವರಿಗಷ್ಟೇ ಅಲ್ಲದೇ, ಶಾಲೆ – ಕಾಲೇಜುಗಳು ಬಂದ್‌ ಆಗಿರುವುದರಿಂದ ಮನೆಯಲ್ಲೇ ಕುಳಿತು ಓದುತ್ತಿರುವ ಮಕ್ಕಳ ಅಂತರ್ಜಾಲ ಬಳಕೆ ಪ್ರಮಾಣವೂ ಹೆಚ್ಚಿದೆ. ಆದರೆ ಇದು ವಿಕೃತಿಗೂ ಎಡೆಮಾಡಿಕೊಡುತ್ತಿರುವುದು ದುರಂತ.

ದಕ್ಷಿಣ ದಿಲ್ಲಿಯ ಕೆಲವು ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮವೊಂದರಲ್ಲಿ ಬಾಯ್ಸ್ ಲಾಕರ್‌ ರೂಮ್‌ ಎಂಬ ಗುಂಪು ರಚಿಸಿಕೊಂಡು ಸಹ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಸಂದೇಶಗಳು, ಮಾರ್ಫ್ಡ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಯಾವ ಮಟ್ಟದ ವಿಕೃತಿ ಈ ಗ್ರೂಪ್‌ನಲ್ಲಿ ಇತ್ತೆಂದರೆ, ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಕುರಿತೂ ಈ ಹುಡುಗರು ಚರ್ಚಿಸುತ್ತಿದ್ದರಂತೆ. ಸಹಜವಾಗಿಯೇ, ಈ ಘಟನೆ ಹೊರಗೆ ಬರುತ್ತಿದ್ದಂತೆಯೇ ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪರಾಧಿಕ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗುತ್ತಿದೆ.

Advertisement

ಪೊಲೀಸರೀಗ ಈ ಗ್ರೂಪ್‌ನಲ್ಲಿದ್ದ ಹುಡುಗರನ್ನು ಪತ್ತೆಹಚ್ಚಿ ವಿಚಾರಣೆಯನ್ನೂ ನಡೆಸಿದ್ದಾರೆ. ಈ ಮಕ್ಕಳಲ್ಲಿ ಹೆಣ್ಣುಮಕ್ಕಳ ಬಗ್ಗೆ ಇಷ್ಟೊಂದು ಕೀಳು ಮನಸ್ಥಿತಿ ಬೆಳೆದಿದ್ದೇಕೆ, ಇವರ ಪಾಲನೆಯಲ್ಲಿ ಪೋಷಕರು, ಶಿಕ್ಷಣ ವಲಯ ಎಲ್ಲಿ ಎಡವಿದವು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.

ಇಂದು ಅಂತರ್ಜಾಲವು ಜನರ ಮನಸ್ಥಿತಿಯ ಮೇಲೆ ಸಾಧಿಸುತ್ತಿರುವ ನಿಯಂತ್ರಣ, ಬೀರುತ್ತಿರುವ ದುಷ್ಟಭಾವ ಬೆಚ್ಚಿಬೀಳಿಸುವಂತಿದೆ. ಅದರಲ್ಲೂ ಸೋಷಿಯಲ್‌ ಮೀಡಿಯಾವಂತೂ ವಿಕೃತಿಯ ಆಗರವಾಗಿ ಹೋಗಿದೆ.

ಹುಸಿ ಸುದ್ದಿಗಳು, ಕೊಲೆ, ಥಳಿತದ ವಿಡಿಯೋಗಳು, ಅಶ್ಲೀಲ ಚಿತ್ರಗಳು, ನಕಲಿ ಫೋಟೋಗಳು ಅತ್ಯಂತ ಸಾಮಾನ್ಯವಾಗಿಬಿಟ್ಟಿದ್ದು, ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಹರಿದಾಡುತ್ತಲೇ ಇರುತ್ತವೆ. ಇದು ಮನುಷ್ಯನ ಸಂವೇದನೆಯನ್ನೇ ಹಾಳುಮಾಡಿಬಿಟ್ಟಿದೆ.

ನಿರ್ಭಯಾ ಪ್ರಕರಣದ ಅನಂತರ ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿದೆ ಎನ್ನಲಾಗುತ್ತದೆಯಾದರೂ, ಅದು ಎಷ್ಟು ನಿಜ ಎನ್ನುವ ಪ್ರಶ್ನೆಯನ್ನು ಮೇಲಿನ ಘಟನೆಗಳು ಎದುರಿಡುತ್ತಿವೆ.

ಈ ವಿದ್ಯಾವಂತ ಮಕ್ಕಳು ಅತ್ಯಾಚಾರದ ಬಗ್ಗೆ ಅತ್ಯಂತ ಸಹಜವೇನೋ ಎಂಬಂತೆ ಆಡುವ ಮಾತುಗಳು ನಿಜಕ್ಕೂ ಆತಂಕಕಾರಿ. ಇಂಥ ಇನ್ನೆಷ್ಟು ಗುಂಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿವೆಯೋ ತಿಳಿಯದು.  ಈ ವಿಚಾರದಲ್ಲಿ ಪೋಷಕರ ಜವಾಬ್ದಾರಿಯೂ ಅಧಿಕವಿದೆ.

ಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸುವ ಜತೆಜತೆಗೇ ಅವರ ಅಂತರ್ಜಾಲ ಬಳಕೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಮಕ್ಕಳೆಂದಷ್ಟೇ ಅಲ್ಲ, ಮನೆಯವರೆಲ್ಲರೂ ಅಂತರ್ಜಾಲ ಬಳಕೆಯನ್ನು ತಗ್ಗಿಸುವುದು, ಆದಷ್ಟೂ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದೀತು.

Advertisement

Udayavani is now on Telegram. Click here to join our channel and stay updated with the latest news.

Next