ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಗುರಿ ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗ ಬಾರದು ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಡಳಿತ ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಸಂತನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಹಾಸ್ಟೆಲ್‌ಗಳ ಕೊರತೆ ಇದ್ದು, ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಕೊಡುತ್ತಿದ್ದೇವೆ. ಕೆಲವು ಕಡೆ ಬಾಡಿಗೆ ಪಡೆದು ಹಾಸ್ಟೆಲ್ ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳು ಸಾವಿರ ವಿದ್ಯಾರ್ಥಿಗಳು ಒಂದೇ ಕಡೆ ವಾಸಮಾಡಲು ದೀನದಯಾಳ್ ಸಮುತ್ಛಯ ನಿರ್ಮಿಸಲು ಕ್ರಮ ಕೈಗೊಂಡಿದ್ದಾರೆ ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಕಲುಷಿತ ಸಮಾಜದಲ್ಲಿ ಕೆಸರಿನಲ್ಲಿ ಕಮಲದಂತೆ ಕಾಣುವ ಏಕೈಕ ವ್ಯಕ್ತಿ ಕೋಟಾ ಶ್ರೀನಿವಾಸ ಪೂಜಾರಿಯವರು. ಮೈಸೂ ರಿಗೆ ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಂದ ವಿದ್ಯಾರ್ಥಿಗಳು ಓದಲು ಬರುತ್ತಾರೆ. ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಸ್ವಾಮೀಜಿಗಳನ್ನು ಕರೆಸಿ ವಾರ್ಡನ್‌ಗಳಿಗೆ ತರಬೇತಿ ಕೊಡಿಸಿದ್ದೆ. ವಾರ್ಡನ್‌ಗಳು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಕಳಪೆ ಆಹಾರ ಸರಬರಾಜು ಮಾಡುವವರಿಗೆ ತರಾಟೆ ತೆಗೆದುಕೊಳ್ಳಿ, ಹಣ ಇರುವವರು ಲಕ್ಷ-ಲಕ್ಷ ಕೊಟ್ಟು ಕಾನ್ವೆಂಟ್‌ಗಳಿಗೆ ಸೇರಿಸುತ್ತಾರೆ. ಆದರೆ ನೀವೆಲ್ಲಾ ರೈತರ ಮಕ್ಕಳು ನಿಮ್ಮ ತಂದೆ-ತಾಯಿ ಕನಸನ್ನು ಕಟ್ಟಿಕೊಂಡು ಓದಲು ಕಳಿಸಿದ್ದಾರೆ. ನೀವೆಲ್ಲರು ಸ್ವಂತ ಕಾಲ ಮೇಲೆ ನಿಲ್ಲಬೇಕು. ಸರಳತೆ, ಸಜ್ಜನಿಕೆ, ಪ್ರೀತಿ, ವಿಶ್ವಾಸ ಕಲಿತುಕೊಂಡು ಜ್ಞಾನಾರ್ಜನೆಯ ಜೊತೆಗೆ ಆದರ್ಶರಾಗಬೇಕು. ಸ್ವಾಭಿಮಾನದಿಂದ ಬದುಕಬೇಕು ಎಂದರು.
ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಜಿಲ್ಲೆಗೆ ಇನ್ನೂ ಹೆಚ್ಚಿನ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಕಾಡಾ ಅಧ್ಯಕ್ಷ ಎನ್.ಶಿವಲಿಂಗಯ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ, ಎ. ಹೇಮಂತ್‌ಕುಮಾರ್ ಗೌಡ, ಎಂ.ಅಪ್ಪಣ್ಣ, ಕೃಷ್ಣಪ್ಪಗೌಡ ವಿ.ಆರ್, ಎಸ್.ಮಹಾದೇವಯ್ಯ, ಎನ್ .ವಿ.ಫಣೀಶ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿ.ಪಂ. ಸಿ.ಇ.ಓ ಬಿ.ಆರ್. ಪೂರ್ಣಿಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್. ಎಸ್. ಬಿಂದ್ಯಾ, ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿ. ಮಾಲತಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನಿರಾಜು ಇದ್ದರು.