ಅಹಮಾಬಾದ್: ಏಕದಿನ ವಿಶ್ವಕಪ್ ನ ಅತ್ಯಂತ ಮಹತ್ವದ ಭಾರತ- ಪಾಕಿಸ್ತಾನ ನಡುವಿನ ಪಂದ್ಯವು ಶನಿವಾರ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆದರೆ ಇದೀಗ ಈ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದನೆಯಲ್ಲಿ ತೊಡಗಿರುವ ಕಾರಣ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪಂದ್ಯವನ್ನು ಬಹಿಷ್ಕರಿಸಬೇಖು ಎಂದಿದ್ದಾರೆ.
ಸೆಪ್ಟೆಂಬರ್ 13 ರಂದು, ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಕರ್ನಲ್ ಒಬ್ಬ ಮೇಜರ್ ಮತ್ತು ಪೊಲೀಸ್ ಉಪ ಅಧೀಕ್ಷಕರೊಂದಿಗೆ ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡರ್ ಹುತಾತ್ಮರಾಗಿದ್ದರು. ನೆರೆ ರಾಷ್ಟ್ರ ಪಾಕಿಸ್ತಾನ ಇಷ್ಟೆಲ್ಲಾ ಮಾಡುತ್ತಿದ್ದರೂ ಭಾರತ ಅವರೊಂದಿಗೆ ಕ್ರಿಕೆಟ್ ಆಡಬಾರದು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
ಪಾಕ್ ಪಂದ್ಯದ ಮೊದಲು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಾಲಿವುಡ್ ಗಾಯಕರಾದ ಅರಿಜಿತ್ ಸಿಂಗ್, ಶಂಕರ್ ಮಹಾದೇವನ್ ಮತ್ತು ಸುಖ್ವಿಂದರ್ ಸಿಂಗ್ ಅವರ ಕಾರ್ಯಕ್ರಮ ನಡೆಯಲಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆ ಯಾವುದೇ ಉದ್ಘಾಟನಾ ಸಮಾರಂಭ ಮಾಡದೆ ಇದೀಗ ಪಾಕ್ ಪಂದ್ಯಕ್ಕೆ ಮೊದಲು ಇಂತಹ ಕಾರ್ಯಕ್ರಮ ಯಾಕೆ ಆಯೋಜನೆ ಮಾಡಲಾಗುತ್ತಿದೆ ಎಂದು ಹಲವರು ಬಿಸಿಸಿಐಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಾಕಿಸ್ತಾನ ತಂಡವು ಅಹಮದಾಬಾದ್ ಗೆ ಬಂದಿಳಿದಾಗ ಅವರನ್ನು ಸ್ವಾಗತಿಸಿದ ರೀತಿಗೂ ಹಲವರು ಕಿಡಿಕಾರಿದ್ದಾರೆ. “ಬಿಸಿಸಿಐ ಮತ್ತು ಜಯ್ ಶಾ ಅವರು ಪಾಕಿಸ್ತಾನ ತಂಡದ ಗೌರವಾರ್ಥವಾಗಿ ಮಾಡಿದ್ದನ್ನು ಸಹಿಸಲಾಗದು, ಗಡಿಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ವಿರುದ್ಧ ನಮ್ಮ ಸೈನಿಕರು ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ. ಪಂದ್ಯವನ್ನು ನಿಷೇಧಿಸಿ” ಎಂದು ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.