ನೆಲಮಂಗಲ: ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊರ್ವ ಸಾವಿಗೂ ಮುನ್ನ ತನ್ನ ಪ್ರಿಯತಮೆಗೆ ವಿಡಿಯೋ ಕಾಲಿಂಗ್ ಮಾಡುತ್ತಲೇ ಪ್ರಾಣ ಬಿಟ್ಟಿರುವ ಘಟನೆ ಡಾಬಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊನೆಗಳಿಗೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಪ್ರಾಣ ಬಿಟ್ಟ ಯುವಕ ಸೋಂಪುರ ಹೋಬಳಿ ದಾಸೇನಹಳ್ಳಿ ಕಿರಣ್ (22). ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ರೇಬಿಸ್ ಸೋಂಕು: ಯುವಕನಿಗೆ ಎರಡು ತಿಂಗಳ ಹಿಂದೆ ನಾಯಿ ಕಚ್ಚಿದ್ದು, ಅದಕ್ಕೆ ಚಿಕಿತ್ಸೆ ಪಡೆಯದೇ ಇರುವುದೇ ಸೋಂಕು ಹೆಚ್ಚಾಗಲು ಕಾರಣವೆಂದು ಹೇಳಲಾಗಿದೆ. ಯುವಕ ನೆಲಮಂಗಲ ಸರ್ಕಾರಿ ಆಸ್ಪತ್ರೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ನಂತರ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿಯೇ ಕೊನೆಯುಸಿರು ಎಳೆದಿದ್ದಾನೆ.
ಯುವಕನಿಗೆ ರೇಬಿಸ್ ಕಾಯಿಲೆ ಉಲ್ಬಣ ಗೊಂಡಿರುವ ಬಗ್ಗೆ ಆಸ್ಪತ್ರೆಗಳ ವರದಿಗಳಲ್ಲೂ ದಾಖಲಾ ಗಿದೆ. ಈತನ್ಮಧ್ಯೆ ಸಾಯುವ ಕ್ಷಣಗಳು ಸಮೀಪಿಸುತ್ತಿದೆ ಎನಿಸಿ ಪ್ರಿಯತಮೆಗಾಗಿ ವಿಡಿಯೋ ಮಾಡಿದ್ದ ಎನ್ನಲಾಗಿದೆ.
ವಿಡಿಯೋದಲ್ಲಿ ಏನಿದೆ: ವಿಡಿಯೋ ರೆಕಾರ್ಡ್‌ನಲ್ಲಿ ತನ್ನ ಪ್ರೀತಿಸುವ ಹುಡುಗಿಯನ್ನು ಅಂತ್ಯಕ್ರಿಯೆಗೆ ಅಹ್ವಾನ ನೀಡಿರುವ ಯುವಕ, ಹಾಯ್ ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನು ಮದುವೆ ಆಗು, ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು, ಇದು ನನ್ನ ಆಕಸ್ಮಿಕ ಸಾವು, ದಯವಿಟ್ಟು ಅಂತ್ಯ ಕ್ರಿಯೆಗೆ ಬಂದು ಹೋಗಬೇಕು, ನನ್ನ ಅಂತ್ಯ ಕ್ರಿಯೆಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ, ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಕಣೆ, ಒಳ್ಳೆಯ ದಾಗಲಿ. ನಿಮ್ಮ ಕುಟುಂಬ ಹೀಗೆ ಚೆನ್ನಾಗಿರಲೆಂದು ಲೈವ್‌ನಲ್ಲೇ ಕೈ ಮುಗಿದು ಪ್ರಾಣ ಬಿಟ್ಟಿದ್ದಾನೆ.
ಪ್ರತಿಭಟನೆ: ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಕೊಲೆ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಒತ್ತಡ ಹೇರಿ ಠಾಣೆಯ
ಮುಂದೆ ಪ್ರತಿಭಟನೆ ನಡೆಸಿದ್ದು, ಪೊಲೀಸರು ಹಾಗೂ ಸಂಘಟನೆಗಳ ಮುಖಂಡರ ಮಧ್ಯೆ ಮಾತಿನ ಚಕುಮಕಿ ಸಹ ನಡೆದಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣ ದಾಖಲು: ಯುವಕ ಕಿರಣ್ ರೇಬಿಸ್ ಕಾಯಿಲೆಯಿಂದಲೇ ಕೊನೆಯುಸಿರು ಎಳೆದಿರುವ ಬಗ್ಗೆ ಆಸ್ಪತ್ರೆಯ ದಾಖಲಾತಿಗಳು ಹೇಳುತ್ತಿದ್ದು, ಲೈವ್‌ನಲ್ಲಿ ಯುವಕನೇ ಹೇಳಿರುವಂತೆ ನನ್ನ ಸಾವು ಆಕಸ್ಮಿಕವಾದುದೆಂದು ತಿಳಿಸಿದ್ದರೂ ಯುವತಿ ಮನೆಯವರೇ ಏನೋ ಮಾಡಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಮೃತ ಯುವಕನ ಕುಟುಂಬಸ್ಥರ ವಿರುದ್ಧ ಆರೋಪ ಹಿನ್ನೆಲೆ ವಿವಿಧ ಆಯಾಮಗಳ ತನಿಖೆಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.