ಬೆಂಗಳೂರು: ಪ್ರೀತಿ ನಿರಾಕರಿಸಿ ಬೇರೊಬ್ಬ ಯುವಕನ ಜತೆ ಮದುವೆಯಾಗಲು ಮುಂದಾಗಿದ್ದ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿ ಉಸಿರುಗಟ್ಟಿಸಿ ಹತ್ಯೆಗೈದಿದ್ದ ಪ್ರಿಯಕರನೊಬ್ಬ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಲ್ಸನ್‌ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಲ್ಸನ್‌ಗಾರ್ಡನ್ ವಿನಾಯನಗರ ನಿವಾಸಿ ಶಾಲಿನಿ (23) ಕೊಲೆಯಾದ ಯುವತಿ. ಕೃತ್ಯ ಎಸಗಿದ ಆಕೆಯ ಪ್ರಿಯಕರ, ಕೆ.ಪಿ.ಅಗ್ರಹಾರ ನಿವಾಸಿ ಮನೋಜ್ ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಣಾಪಾಯದಿಂದ ಪಾರಾಗಿ ರುವ ಆರೋಪಿಯನ್ನು ಚೇತರಿಸಿಕೊಂಡ ಬಳಿಕ ಬಂಧಿಸಲಾಗುತ್ತದೆ. ಮಂಗಳವಾರ ರಾತ್ರಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
9ನೇ ತರಗತಿ ವ್ಯಾಸಂಗ ಮಾಡಿರುವ ಶಾಲಿನಿ ಮತ್ತು ಆರೋಪಿ ಮನೋಜ್ ಈ ಹಿಂದೆ ಪ್ರತ್ಯೇಕ ಮೆಡಿಕಲ್ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆಗ ಮನೋಜ್, ಶಾಲಿನಿಗೆ ಪ್ರೇಮ ನಿವೇದನೆ ಮಾಡಿ ಕೊಂಡಿದ್ದ. ಆದರೆ, ಆಕೆ ನಿರಾಕರಿಸಿದ್ದಳು. ಈ ಮಧ್ಯೆ ಆತ ಕೆಲಸ ಬಿಟ್ಟು ರಸ್ತೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಜತೆ ಕೆಲಸ ಮಾಡುತ್ತಿದ್ದ. ಈ ವೇಳೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಮತ್ತೆ ಇಬ್ಬರು ಪರಿಚಯವಾಗಿದ್ದು, ಬಳಿಕ ಇಬ್ಬರು ಆಗಾಗ ಭೇಟಿ ಆಗುತ್ತಿದ್ದರು. ಈ ವೇಳೆ ಮತ್ತೂಮ್ಮೆ ಶಾಲಿನಿಗೆ ಮನೋಜ್ ಪ್ರೇಮ ನಿವೇದಿಸಿದ್ದಾನೆ. ಆಕೆ ಕೂಡ ಒಪ್ಪಿಕೊಂಡು ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮತ್ತೂಂದೆಡೆ ಶಾಲಿನಿಗೆ ಆಕೆ ಪೋಷಕರು ಸಂಬಂಧಿ ಯುವಕನ ಜತೆ ಮದುವೆ ನಿಶ್ಚಿಯಿಸಲು ಮುಂದಾಗಿದ್ದು, ಸೋಮವಾರ ಮತ್ತು ಮಂಗಳವಾರ ಕೆಲ ಶುಭ ಕಾರ್ಯಗಳನ್ನು ಏರ್ಪಡಿಸಿದ್ದರು. ಮಂಗಳವಾರ ಸಂಜೆ ಪೋಷಕರು, ಸಂಬಂಧಿಕರು, ಶಾಲಿನಿ ಮನೆ ಸಮೀಪದ ಸಂಬಂಧಿ ಮನೆಯಲ್ಲಿದ್ದರು. ಇದೇ ವೇಳೆ ಪ್ರೇಯಸಿ ಮತ್ತೂಂದು ಮದುವೆ ಆಗುತ್ತಿದ್ದಾಳೆ ಎಂಬ ವಿಚಾರ ತಿಳಿದ ಮನೋಜ್, ಸಂಜೆ 7 ಗಂಟೆ ಸುಮಾರಿಗೆ ವಿನಾಯಕನಗರದ ಶಾಲಿನಿ ಮನೆ ಬಳಿ ಬಂದಿದ್ದಾನೆ. ಮನೆಯಲ್ಲಿ ಯಾರು ಇಲ್ಲದನ್ನು ಖಚಿತ ಪಡಿಸಿಕೊಂಡು ಆಕೆ ಜತೆ ಮದುವೆ ವಿಚಾರವಾಗಿ ಜಗಳ ಆರಂಭಿಸಿದ್ದಾನೆ. ‘ನೀನು ಮನೆಯವರು ನೋಡಿದ ಯುವಕನ ಜತೆ ಮದುವೆಯಾಗಲು ಒಪ್ಪಿಕೊಂಡಿದ್ದಿಯಾ? ಹಾಗಾದರೆ ತನ್ನೊಂದಿಗೆ ಇಷ್ಟು ದಿನ ಪ್ರೀತಿ, ಓಡಾಟ ಮಾಡಿದ್ದು ಏನು?’ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಆದರೆ, ಆಕೆ ಪೋಷಕರ ತೀರ್ಮಾನವೇ ಅಂತಿಮ ಎಂದಿದ್ದಾಳೆ.
ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ: ಆಕೆಯ ಮಾತಿನಿಂದ ಆಕ್ರೋಶಗೊಂಡ ಆರೋಪಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅನಂತರ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಕೆ.ಪಿ.ಅಗ್ರಹಾರದಲ್ಲಿರುವ ಆತನ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅದನ್ನು ಗಮನಿಸಿದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೂಂದೆಡೆ ರಾತ್ರಿ 10 ಗಂಟೆ ಸುಮಾರಿಗೆ ಪೋಷಕರು ಮನೆಗೆ ಬಂದಾಗ ಶಾಲಿನಿ ಹತ್ಯೆ ಬೆಳಕಿಗೆ ಬಂದಿದೆ.
ಈ ಸಂಬಂಧ ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ಕೊಲೆ, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಹಾಗೆಯೇ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮನೋಜ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.