ಮೆಲ್ಬರ್ನ್: ಆಸ್ಟ್ರೇಲಿಯ ವಿರುದ್ಧದ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯಕ್ಕಾಗಿ ನ್ಯೂಜಿಲ್ಯಾಂಡ್ ಮಹತ್ವದ ಬದಲಾವಣೆಯೊಂದನ್ನು ಮಾಡಿಕೊಂಡಿದೆ. ಜೀತ್ ರಾವಲ್ ಬದಲು ಟಾಮ್ ಬ್ಲಿಂಡೆಲ್ ಅವರನ್ನು ಆರಂಭಿಕನನ್ನಾಗಿ ಇಳಿಸಲು ನಿರ್ಧರಿಸಿದೆ.
ರವಿವಾರ ಆರಂಭಗೊಂಡ ವಿಕ್ಟೋರಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯ ದಲ್ಲಿ ಪ್ರಾಯೋಗಿಕವಾಗಿ ಟಾಮ್ ಬ್ಲಿಂಡೆಲ್ ಅವರನ್ನು ಓಪನರ್ ಆಗಿ ಇಳಿಸಲಾಗಿದೆ. ಈ ಮುಖಾಮುಖೀಯಲ್ಲಿ ಅವರು 59 ಎಸೆತಗಳಿಂದ 70 ರನ್ ಬಾರಿಸಿ ಮಿಂಚಿದರು.
“ನಾನು ಯಾವುದೇ ಕ್ರಮಾಂಕದಲ್ಲೂ ಆಡಬಲ್ಲೆ ಎಂಬ ವಿಶ್ವಾಸ ಹೊಂದಿದ್ದೇನೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಟಾಮ್ ಬ್ಲಿಂಡೆಲ್ ವಿಕೆಟ್ ಕೀಪರ್ ಆಗಿದ್ದು, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 2017ರ ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ಅಜೇಯ ಶತಕ ಬಾರಿಸಿದ್ದರು. ಈವರೆಗಿನ 93 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬ್ಲಿಂಡೆಲ್ ಐದಕ್ಕಿಂತ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿಲ್ಲ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಜೀತ್ ರಾವಲ್ ತಲಾ ಒಂದು ರನ್ ಮಾಡಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ನ್ಯೂಜಿಲ್ಯಾಂಡ್ ಈ ಬದಲಾವಣೆಗೆ ಮುಂದಾಗಿದೆ.