ಗ್ರೇಟರ್ ನೋಯ್ಡಾ : ದಿಲ್ಲಿಯ ಮಾಜಿ ಬಾಕ್ಸರ್ 27ರ ಹರೆಯದ ಜಿತೇಂದ್ರ ಮಾನ್ ಅವರು ತಮ್ಮ ಇಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಗುಂಡೇಟಿನಿಂದ ಸತ್ತು ಬದ್ದಿರುವುದು ಪತ್ತೆಯಾಗಿದೆ.
ಮಾನ್ ಅವರು ಇಲ್ಲಿನ ಆಲ್ಫಾ ಸೆಕ್ಟರ್‌ನಲ್ಲಿನ ಜಿಮ್ ಒಂದರಲ್ಲಿ ತರಬೇತುದಾರರಾಗಿದ್ದರು. ಇವರು ಈ ಹಿಂದೆ ಉಜ್ಬೆಕಿಸ್ಥಾನ್, ಫ್ರಾನ್ಸ್ ಮತ್ತು ರಶ್ಯಗಳಲ್ಲಿ ನಡೆದಿದ್ದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹರಿಯಾಣದಲ್ಲಿ ಇವರು 2008ರಲ್ಲಿ ಬಾಕ್ಸರ್ ಆಗಿ ನೋಂದಾಯಿಸಿಕೊಂಡಿದ್ದರು. ಆದರೆ ಕೆಲ ವರ್ಷಗಳಿಂದೀಚೆಗೆ ಬಾಕ್ಸಿಂಗ್‌ನಿಂದ ನಿವೃತ್ತರಾಗಿ ಜಿಮ್ ಟ್ರೈನರ್ ಆಗಿ ದುಡಿಯುತ್ತಿದ್ದರು.
ಜನವರಿ 10ರಂದು ಜಿಮ್‌ಗೆ ಹೋಗಿದ್ದ ಮಾನ್ ಆ ಬಳಿಕ ನಾಪತ್ತೆಯಾಗಿದ್ದರು. ಅಂದಿನಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಾನ್ ಜತೆಗೆ ಈ ಹಿಂದೆ ಅವರ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ಪ್ರೀತಂ ಟೋಕಾಸ್ ಎಂಬಾಕೆಯ ಬಳಿ ಆತನ ಫ್ಲ್ಯಾಟಿನ ಕೀ ಇತ್ತು. ಮಾನ್‌ಗಾಗಿ ಹುಡುಕಾಡುತ್ತಾ ಆಕೆ ಕೊನೆಗೆ ಆತನ ಫ್ಲ್ಯಾಟ್ ಪ್ರವೇಶಿಸಿದಾಗ ಆತ ಅಲ್ಲಿ ಗುಂಡೇಟಿನಿಂದ ಸತ್ತು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಳು; ಒಡನೆಯೇ ವಿಷಯವನ್ನು ಪೊಲೀಸರಿಗೆ ತಿಳಿಸಿದಳು.
ಮಾನ್‌ನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತನನ್ನು ಗುಂಡಿಕ್ಕಿ ಸಾಯಿಸಿದ ಹಂತಕರು ಆತನ ಮೊಬೈಲ್ ಒಯ್ದಿದ್ದಾರೆ ಮಾತ್ರವಲ್ಲ ಆತನ ಫ್ಲ್ಯಾಟಿನ ಕೀಯನ್ನು ಕೂಡ ಒಯ್ದು, ಹೋಗುವಾಗ ಹೊರಗಿನಿಂದ ಲಾಕ್ ಮಾಡಿದ್ದಾರೆ ಎಂದು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಸುಪರಿಂಟೆಂಡೆಂಟ್ ಸುನೀತಿ ಸಿಂಗ್ ತಿಳಿಸಿದ್ದಾರೆ. ಮಾನ್ ನ ತಂದೆ ಸತ್ಯ ಪ್ರಕಾಶ್ ಮತ್ತು ತಾಯಿ ರಾಜಬಾಲಾ ದಿಲ್ಲಿಯಲ್ಲಿ ವಾಸವಾಗಿದ್ದಾರೆ.
ಪೊಲೀಸರು ಸಿಸಿಟಿವಿ ಚಿತ್ರಿಕೆಗಳನ್ನು ಆಧರಿಸಿಕೊಂಡು ಹಂತಕನ ಶೋಧದಲ್ಲಿದ್ದಾರೆ. ತನಿಖೆ ನಡೆಯುತ್ತಿದೆ.