ನವದೆಹಲಿ: ದೇಶದ ರಾಜಧಾನಿ ಕೆಂಪುಕೋಟೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ (ಆಗಸ್ಟ್ 15,2020) ಧ್ವಜಾರೋಹಣ ನೆರವೇರಿಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ವಾರಿಯರ್ಸ್ ಗೆ ನಾನು ತಲೆಬಾಗಿ ನಮಿಸುವುದಾಗಿ ಹೇಳಿದರು.
ಕೋವಿಡ್ 19 ಸೋಂಕಿನ ವಿರುದ್ಧ ಅವಿರತವಾಗಿ ಶ್ರಮಿಸುತ್ತಿರುವ ಮೆಡಿಕಲ್ ಪ್ರೊಫೆಷನಲ್ಸ್, ಪೊಲೀಸ್ ಸಿಬ್ಬಂದಿ ಹಾಗೂ ಅಗತ್ಯ ವಸ್ತುಗಳ ಸೇವೆಯನ್ನು ನೀಡುತ್ತಿರುವವರ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ದೇಶಾದ್ಯಂತ ಕೋವಿಡ್ 19 ಸೋಂಕಿನ ಮಹಾಮಾರಿಗೆ ಈವರೆಗೆ 48,000 ಸಾವಿರ ಮಂದಿ ಸಾವನ್ನಪ್ಪಿದ್ದು, ಅವರಿಗೆಲ್ಲರಿಗೂ ಪ್ರಧಾನಿ ಸಂತಾಪ ಸೂಚಿಸಿದರು.
ಸೋಂಕು ಹರಡಲು ಆರಂಭಿಸಿದ ಈ ಕೆಲವು ತಿಂಗಳುಗಳ ಕಾಲ ಕೋವಿಡ್ 19 ವಿರುದ್ಧ ಕಾರ್ಯನಿರ್ವಹಿಸಿದವರನ್ನು ನಮಗೆ ಲೆಕ್ಕ ಹಾಕಲು ಸಾಧ್ಯವಿಲ್ಲ. ಈ ಕಾರ್ಯಕರ್ತರಿಗೆ ಮತ್ತು ಕೋವಿಡ್ ವಾರಿಯರ್ಸ್ ಗೆ ನಾನು ತಲೆಬಾಗಿ ನಮಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಡದಲ್ಲಿಯೂ ಹಲವು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆ ಕುಟುಂಬಗಳಿಗೆ ನಾನು ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಇಂತಹ ಕಾಲಘಟ್ಟದಲ್ಲಿ ನಾವು ಇದನ್ನು ಎದುರಿಸಿ ಗೆಲ್ಲಬೇಕಾಗಿದೆ ಎಂದು ತಿಳಿಸಿದರು.