Advertisement

ಮಂಚಿಕಟ್ಟೆ ಬಳಿ ಬಾಯ್ತೆರೆದ ಗುಡ್ಡ; ಮಡುಗಟ್ಟಿದ ಆತಂಕ

01:00 AM Aug 17, 2019 | Team Udayavani |

ಸುಬ್ರಹ್ಮಣ್ಯ: ವರ್ಷಧಾರೆಗೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆಯ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಭಾರೀ ಭೂಕುಸಿತದ ಸಾಧ್ಯತೆಯನ್ನು ತೆರೆದಿಟ್ಟಿದೆ. ಮಳೆ ಅಬ್ಬರ ತೀವ್ರವಾದರೆ ಯಾವುದೇ ಕ್ಷಣದಲ್ಲಿ ಅಪಾಯವನ್ನು ತಂದಿಡಬಹುದು.

Advertisement

ಪಂಜಬೈಲು, ಗರಡಿಬೈಲು ಮಂಚಿಕಟ್ಟೆ ಈ ಮೂರು ಬೈಲುಗಳ ಮಧ್ಯೆ ಹರಿಯುತ್ತಿರುವ ನದಿ ಪಕ್ಕದ ಮಂಚಿಕಟ್ಟೆ ಬಳಿಯ ಮೇಲಿನ ಗುಡ್ಡದಲ್ಲಿ ಭೂಮಿ ಬಾಯಿ ತೆರೆದಿದೆ. ಸೊಪ್ಪಿಗೆಂದು ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಹೊಳೆ ಬದಿಯ ಗುಡ್ಡಕ್ಕೆ ತೆರಳಿದ್ದ ವೇಳೆ ಭೂಮಿಯಲ್ಲಿ ಬಿರುಕು ಬಿಟ್ಟಿರುವುದು ಗೋಚರಿಸಿದೆ. ಗುಡ್ಡದ ಮೇಲ್ಭಾಗದ ಮಂಚಿಕಟ್ಟೆಯಲ್ಲಿ 28 ಕುಟುಂಬಗಳು ವಾಸಿಸುತ್ತಿದ್ದು, ಕೆಳಭಾಗದಲ್ಲಿ ಪಂಜ ಮತ್ತು ಗರಡಿಬೈಲುಗಳಿವೆ. ಇಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ.

ಕುಸಿಯುತ್ತಿದೆ ಮಣ್ಣು
ಬಿರುಕು ಬಿಟ್ಟ ಗುಡ್ಡದ ಹೊಳೆ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಜರಿದಿದೆ. ಗುಡ್ಡ ಮತ್ತೆ ಕುಸಿಯುತ್ತಿದೆ. ಗುಡ್ಡದ ಮೇಲ್ಭಾಗದಲ್ಲಿ 50 ಮೀ.ನಷ್ಟು ಉದ್ದ, 30 ಅಡಿಯಷ್ಟು ಆಳದ ತನಕ ಬಿರುಕು ಕಾಣಿಸಿಕೊಂಡಿದೆ. ಬಿರುಕು ಇನ್ನಷ್ಟು ವಿಸ್ತರಿಸುತ್ತಿದೆ. ಗುಡ್ಡ ಅಪಾಯಕಾರಿ ಸ್ಥಿತಿಯಲ್ಲಿದ್ದು, ಆತಂಕವನ್ನು ತೆರೆದಿಟ್ಟಿದೆ.

ಹೊಳೆಯಲ್ಲಿ ಹೂಳು
ಭಾರೀ ಭೂಕುಸಿತ ಸಂಭವಿಸಿ ಜರಿದ ಮಣ್ಣು ಹೊಳೆಗೆ ಬಿದ್ದು ಹೊಳೆಯಲ್ಲಿ ಹೂಳು ತುಂಬಿಕೊಂಡಿದೆ. ಸೃಷ್ಟಿಯಾಗಿರುವ ಬಿರುಕುಗಳ ಭಾಗದಲ್ಲಿ ಮತ್ತಷ್ಟು ಮಣ್ಣು ಜರಿದು ಬಿದ್ದಲ್ಲಿ ಅದು ಪಕ್ಕದ ಹೊಳೆಯಲ್ಲಿ ಶೇಖರಣೆಗೊಂಡು ಕೃತಕ ನೆರೆ ಸೃಷ್ಟಿಯಾದಲ್ಲಿ ಕೆಳಗಿನ ಪಂಜದ ಬೈಲು ಮತ್ತು ಗರಡಿಬೈಲುಗಳು ಮುಳುಗಡೆಗೊಳ್ಳಬಹುದು. ನೆರೆ ಅಪಾರ ಕೃಷಿ ಭೂಮಿಯನ್ನು ಬಲಿ ಪಡೆಯಬಹುದು.

ನಿವಾಸಿಗಳಲ್ಲಿ ಭಯ
ನಿರಂತರ ವರ್ಷಧಾರೆಗೆ ಭೂಕುಸಿತ ಉಂಟಾಗುತ್ತಿದ್ದು, ಗುಡ್ಡ ಮೇಲ್ಭಾಗದ ವಸತಿಗೃಹಗಳ 28 ಕುಟುಂಬಗಳು ಆತಂಕಕ್ಕೆ ಒಳಗಾಗಿವೆ. ಮಂಚಿಕಟ್ಟೆ ವಸತಿಗೃಹಗಳಿಗಿಂತ ಕೂಗಳತೆಯ ದೂರದಲ್ಲಿ ಬಿರುಕು ಕಾಣಿಸಿದೆ. ಗುಡ್ಡ ಹೀಗೇ ಕುಸಿಯುತ್ತ ಸಾಗಿದರೆ ಮನೆಗಳಿರುವ ಪ್ರದೇಶವೂ ಜರಿದು ಬಿದ್ದು ಮುಚ್ಚಿಹೋಗುವ ಭೀತಿ ನಿವಾಸಿಗಳಲ್ಲಿದೆ. ಮಕ್ಕಳು ಆಟವಾಡುತ್ತ ಬಿರುಕು ಬಿಟ್ಟ ಸ್ಥಳದತ್ತ ತೆರಳಿದಲ್ಲಿ ತೊಂದರೆಗೆ ಸಿಲುಕಬಹುದು ಎನ್ನುವ ಆತಂಕ ಹೆತ್ತವರನ್ನು ಕಾಡುತ್ತಿದೆ. ಬಿರುಕುಗಳಿರುವ ಸ್ಥಳ ಪೊದೆಗಳಿಂದ ತುಂಬಿದ್ದು, ಗುಡ್ಡದ ಎಲ್ಲೆಲ್ಲೆ ಬಿರುಕು ಇದೆ ಎನ್ನುವುದು ಅರಿವಿಗೆ ಬರುತ್ತಿಲ್ಲ. ನಿವಾಸಿಗಳು ಜಾನುವಾರುಗಳನ್ನು ಮನೆಗಳಲ್ಲೇ ಕಟ್ಟಿ ಹಾಕಿದ್ದಾರೆ. ಗುಡ್ಡ ಜರಿದ ತಳಭಾಗದಲ್ಲಿ ಹರಿಯುವ ಉಪನದಿ ಕರೆಂಬಿ ಎಂಬಲ್ಲಿ ಹುಟ್ಟಿ ಬರ್ಲಾಯ ಬೆಟ್ಟು ಮಡಪ್ಪಾಡಿ ಬೈಲು, ಪಂಜದ ಬೈಲು ಮೂಲಕ ಹರಿದು ನಾಗತಿರ್ಥ ನದಿ ಸೇರುತ್ತದೆ. ಇದೇ ಸ್ಥಳದಲ್ಲಿ ಪಂಜ ಪಂಚಲಿಂಗೇಶ್ವರ ದೇವರ ಜಳಕವೂ ನೆರವೇರುತ್ತದೆ. ಮಳೆಗಾಲದಲ್ಲಿ ಭಾರೀ ಪ್ರಮಾಣದ ನೀರು ಇರುತ್ತದೆ. ಹೊಳೆಗೆ ತಡೆಗೋಡೆ ನಿರ್ಮಿಸಿದರೆ ಅಪಾಯ ತಕ್ಕಮಟ್ಟಿಗೆ ತಡೆಯಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಕಂಪನದ ಅನುಭವ ಆಗಿಲ್ಲ
ಪಕ್ಕದ ಹೊಳೆ ಬದಿಗೆ ಸೊಪ್ಪು ತರಲೆಂದು ತೆರಳಿದ್ದೆ. ಈ ವೇಳೆ ಮಣ್ಣಿನಲ್ಲಿ ಸಣ್ಣ ಬಿರುಕು ಇರುವುದು ಗೊತ್ತಾಯಿತು. ನಮಗೆ ಭೂಮಿ ಕಂಪನದಂತಹ ಅನುಭವ ಆಗಿಲ್ಲ.
– ಗುಲಾಬಿ, ಸ್ಥಳೀಯ ಮಹಿಳೆ

ಅನಾಹುತವಾದೀತು
ಗುಡ್ಡ ಜರಿದಿರುವುದಕ್ಕಿಂತ ಕೆಳಗಡೆಯ ನದಿಯಲ್ಲಿ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ನೆರೆ ಹರಿಯುತ್ತದೆ. ಗುಡ್ಡ ಜರಿದು ಕೃತಕ ನೆರೆ ಸೃಷ್ಟಿಯಾದಲ್ಲಿ ಅಪಾರ ಕೃಷಿ ಭೂಮಿ ನಷ್ಟವಾಗಬಹುದು.  ಮಹೇಶ್‌ಕುಮಾರ್‌ ಕರಿಕ್ಕಳ ಸ್ಥಳೀಯ ಕೃಷಿಕ

 

ಶೀಘ್ರ ಪರಿಶೀಲನೆ
ಭೂಮಿ ಬಿರುಕು ಬಿಟ್ಟ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳನ್ನು ಕಳುಹಿಸಿ ಕೊಡಲಾಗಿದೆ. ಪರಿಶೀಲಿಸಿ ಬಂದಿದ್ದಾರೆ. ಶೀಘ್ರದಲ್ಲಿ ತೆರಳಿ ಪರಿಶೀಲಿಸುತ್ತೇನೆ.
– ಕುಂಞಿ ಅಹಮ್ಮದ್‌, ತಹಶೀಲ್ದಾರ್‌, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next