Advertisement

ತರಾಟೆ ಕಿಡ್‌

12:30 AM Jan 16, 2019 | |

ಮಕ್ಕಳ ನಗು ಚೆಂದ, ಅಳುವೂ ಚೆಂದವೇ. ಅವುಗಳ ತುಂಟಾಟಕ್ಕೂ ದೃಷ್ಟಿಯ ಬೊಟ್ಟು ಇಡಲೇಬೇಕು. ಆದರೆ, ಮಕ್ಕಳು ಸೃಷ್ಟಿಸುವ ಪೇಚಾಟಗಳಿವೆಯಲ್ಲ… ಅವು ಮಾತ್ರ ಯಾರಿಗೂ ಬೇಡ. ಒಮ್ಮೆ ಕೋಪ, ಮತ್ತೂಮ್ಮೆ ನಗು, ಕೆಲವೊಮ್ಮೆ ಮಜುಗರ, ಪೇಚಾಟಕ್ಕೆ ಈಡುಮಾಡುವ ಈ ಪ್ರಸಂಗಗಳು, ನೆನಪಿನ ಬುತ್ತಿಯಲ್ಲಿ ಕಾಯಂ ಆಗಿ ಜಾಗ ಪಡೆದುಕೊಳ್ಳುತ್ತವೆ… 

Advertisement

ಮೊನ್ನೆ ಒಂದು ರೊಬೋಟಿಕ್‌ ಎಕ್ಸಿಬಿಷನ್‌ಗೆ ಹೋದಾಗ ಟಿಕೆಟ್‌ ತೆಗೆಸಲು ನಮ್ಮ ಯಜಮಾನರು ಕ್ಯೂನಲ್ಲಿ ನಿಂತಿದ್ದರು. 13 ವರ್ಷದ ಮೇಲ್ಪಟ್ಟವರಿಗೆ ಫ‌ುಲ್‌ ಟಿಕೆಟ್‌ ಎಂಬ ಬೋರ್ಡ್‌ ಹಾಕಿದ್ದನ್ನು ಮಗಳು ತದೇಕಚಿತ್ತದಿಂದ ನೋಡುತ್ತಿದ್ದಳು. ಟಿಕೆಟ್‌ ಕೊಳ್ಳುವಾಗ ಅವಳಿಗೆ ಹಾಫ್ ಟಿಕೆಟ್‌ ಕೊಡಿ ಎಂದು ಹೇಳುತ್ತಿದ್ದಂತೆ, “ಅಪ್ಪಾ, ನನಗೆ ಆಗಲೇ ಹದಿಮೂರು ವರ್ಷ ಆಯ್ತಲ್ಲ, ಹೋದ ತಿಂಗಳು ಕೇಕ್‌ ಕಟ್‌ ಮಾಡೋವಾಗ ಹೇಳಿದ್ದೆಯಲ್ಲ’ ಎಂದುಬಿಡಬೇಕೆ? ಯಜಮಾನರು ಬೆಪ್ಪು ಬೆಪ್ಪಾಗಿ “ಹಾnಂ… ಹೌದಲ್ಲ, ಮರೆತೇಬಿಟ್ಟಿದ್ದೆ’ ಎನ್ನುತ್ತಾ “ಫ‌ುಲ್‌ ಟಿಕೆಟ್‌ ಕೊಡಿ’ ಎಂದರು. ಟಿಕೆಟ್‌ ಕೊಡುವವನಿಗೆ ಜೋರು ನಗು!

ಈ ಮಕ್ಕಳು ಯಾವಾಗ, ಎಲ್ಲಿ, ಹೇಗೆ ಮರ್ಯಾದೆ ಹರಾಜು ಹಾಕುತ್ತವೋ, ಹೇಳಲಾಗದು. ಅಂಗಡಿ ಮುಂದೆ ನಿಂತು, ಯಾವುದೋ ಆಟಿಕೆಯನ್ನು ತೋರಿಸಿ, ಕೊಡಿಸು ಎಂದು ಚಂಡಿ ಹಿಡಿದುಬಿಟ್ಟರೆ, ಕತೆ ಮುಗಿದಂತೆ. ಕೊಡಿಸುವವರೆಗೂ ಅತ್ತು, ಕರೆದು, ರಂಪ ಮಾಡಿ, ನೆಲದಲ್ಲಿ ಉರುಳಾಡಿ, ಹೋಗಿ ಬರುವವರೆಲ್ಲಾ ಅನುಕಂಪ ತೋರಿಸುವಾಗ, ಸುಮ್ಮನೆ ಅದಕ್ಕೆ ದುಪ್ಪಟ್ಟು ಬೆಲೆ ತೆತ್ತು ಖರೀದಿಸದೆ ನಮಗೆ ಬೇರಿ ದಾರಿ ಇರುವುದಿಲ್ಲ. 

ಮತ್ತೂಮ್ಮೆ ಹೀಗೇ ಆಗಿತ್ತು. ನಮ್ಮ ಮನೆಯ ಹತ್ತಿರವೇ ಇದ್ದ ಇನ್ಷೊರೆನ್ಸ್‌ ಏಜೆಂಟ್‌ ಪದೇಪದೆ ಫೋನು ಮಾಡಿ, ಯಾವುದೋ ಪಾಲಿಸಿ ಮಾಡಿಸಿ ಎಂದು ಯಜಮಾನರ ತಲೆ ತಿನ್ನುತ್ತಿದ್ದ. ಒಂದು ದಿನ ಆಫೀಸಿನಿಂದ ಬಂದವರು, “ಯಾರಾದರೂ ಫೋನು ಮಾಡಿದರೆ, ವಾಕ್‌ ಹೋಗಿದ್ದೇನೆಂದು ಹೇಳು’ ಎಂದು ಮಗಳ ಕೈಗೆ ಮೊಬೈಲ್‌ ಕೊಟ್ಟಿದ್ದರು. ಸ್ವಲ್ಪ ಸಮಯದಲ್ಲಿ ಇನ್ಷೊರೆನ್ಸ್‌ ಆಸಾಮಿಯದ್ದೇ ಫೋನು ಬಂತು. ಮಗಳು ರಿಸೀವ್‌ ಮಾಡಿ, ಅಪ್ಪನಿಗೆ ಕೂಗು ಹಾಕಿದಳು, “ಅಪ್ಪಾ, ಚಡ್ಡಿ ಪಾಟೀಲ್‌ ಅಂಕಲ್‌ ಫೋನೂ, ನೀನು ಇದ್ದೀಯ ಅಂತ ಹೇಳಲೋ ಅಥವಾ ವಾಕಿಂಗ್‌ ಹೋಗಿದ್ದೀಯ ಅಂತ ಹೇಳಲೋ’ ಎಂದು ಒಂದೇ ಬಾಣದಲ್ಲಿ ಎರಡೂ ಕಡೆಯವರ ಮಾನ ತೆಗೆದಿದ್ದಳು. ಅವರು ಪ್ರತಿದಿನ ಸಂಜೆ ಬರ್ಮುಡಾ ಹಾಕಿಕೊಂಡು ನಮ್ಮ ಮನೆಯ ಮುಂದೆಯೇ ವಾಕಿಂಗ್‌ ಹೋಗುವಾಗ, ಇವಳನ್ನು ಮಾತಾಡಿಸುತ್ತಿದ್ದರು. ಪಾಪ, ಈ ಘಟನೆ ನಡೆದಾಗಿನಿಂದ ಆ ಮನುಷ್ಯ ಫ‌ುಲ್‌ ಪ್ಯಾಂಟ್‌ ಹಾಕಿಕೊಳ್ಳದೆ ಹೊರಗೆ ಕಾಲಿಡುವುದಿಲ್ಲ. ನಮ್ಮ ಯಜಮಾನರು ಮತ್ತೆಂದೂ ಮಗಳ ಕೈಯಲ್ಲಿ ಸುಳ್ಳು ಹೇಳಿಸುವ ಸಾಹಸ ಮಾಡಿಲ್ಲ.

ಅತಿಥಿಗಳ ಮನೆಗೆ ಹೋದಾಗ, ಯಾವುದಾದರೂ ತಿಂಡಿ ಮಗಳಿಗೆ ಇಷ್ಟವಾಗುವುದಿಲ್ಲ ಎಂದು ಹೇಳಿದರೆ, ಅವತ್ತು ಮಾತ್ರ ನಮ್ಮ ಮಗಳು ಅದೇ ತಿಂಡಿಯನ್ನು ಎರಡು ಮೂರು ಬಾರಿ ಹಾಕಿಸಿಕೊಂಡು ತಿನ್ನುವುದುಂಟು. ಆಮೇಲೆ, “ಮಮ್ಮಿà, ನೀನೂ ಈ ಆಂಟಿ ಥರಾನೇ ಅಡುಗೆ ಮಾಡು’ ಎಂದು ಎಲ್ಲರೆದುರು ಹೇಳಿಬಿಡುತ್ತಿದ್ದಳು. ಕೆಲವೊಮ್ಮೆ ಮನೆಗೆ ಅತಿಥಿಗಳು ಬಂದಾಗ, ಮಗಳಿಗೆ ಇಷ್ಟವಾಗುವ ತಿಂಡಿಯನ್ನೇನಾದರೂ ಅವರಿಗೆ ಕೊಟ್ಟರೆ ಮುಗಿಯಿತು! ಓಡಿ ಹೋಗಿ ಅವರಿಗೆ ಇಟ್ಟ ತಿಂಡಿಯ ತಟ್ಟೆಯನ್ನೆಲ್ಲಾ ವಾಪಸು ತಂದುಬಿಡುತ್ತಿದ್ದಳು. ಒಮ್ಮೆ ತಂಗಿಯ ರೇಷ್ಮೆ ಸೀರೆ ಉಟ್ಟು ಯಾವುದೋ ಫ‌ಂಕ್ಷನ್‌ಗೆ ಹೋಗಿದ್ದೆ. ಎಲ್ಲರೂ ಅದನ್ನು ನೋಡಿ “ಎಷ್ಟು ಚಂದ ಇದೆ’ ಎಂದು ಹೊಗಳುವಾಗ, “ಅದು ಮಮ್ಮಿಯ ಸೀರೆ ಅಲ್ಲಾ, ಆಂಟಿ ಸೀರೆ’ ಎಂದು ನನ್ನ ಹುಮ್ಮಸ್ಸಿನ ಬಲೂನನ್ನು ಠುಸ್‌Õ ಅನ್ನಿಸಿಬಿಡುತ್ತಿದ್ದಳು. ನನ್ನ ಮಗಳು ತುಂಬಾ ಉಡಾಳ ಹುಡುಗಿ, ಹೇಳಿದ ಮಾತೇ ಕೇಳ್ಳೋದಿಲ್ಲಾ ಅಂದವರ ಮುಂದೆ ಡೀಸೆಂಟ್‌ ಆಗಿ ಪೋಸ್‌ ಕೊಟ್ಟಾಗ, ಹೇಳಿದ ತಪ್ಪಿಗೆ ನಾನು ಬಾಯಿ ಮುಚ್ಚಿಕೊಳ್ಳಬೇಕಾಯ್ತು.

Advertisement

ಒಂದು ದಿನ ಯಾರೋ ಗೆಳತಿಯರು ಹೊಡೆದರೆಂದು ಬಂದು ಚಾಡಿ ಹೇಳಿದಾಗ, ಇವಳ ಮೇಲೆಯೇ ಅನುಮಾನ ಬಂದು, ನೀನೇನು ಮಾಡಿದೆ ಎಂದು ಪ್ರಶ್ನಿಸಿದಾಗ “ಏನೂ ಇಲ್ಲ, ಅವರ ಆಟದ ಸಾಮಾನನ್ನು ಮುರಿದು ಹಾಕಿದೆ’ ಎಂದು ಗಲ್ಲ ಉಬ್ಬಿಸಿ ಹೇಳಿದಾಗ ನಾನು ಸುಸ್ತೋ ಸುಸ್ತು. ಒಮ್ಮೆ ಅಜ್ಜಿಯ ಜೊತೆ ಹರಟುತ್ತಾ, “ಅಜ್ಜೀ, ನಾನು ಮುಂದೆ ಪೈಲಟ್‌ ಆಗ್ತಿàನಿ. ವಿಮಾನದಲ್ಲಿ ಅಪ್ಪ, ಅಮ್ಮ, ತಂಗಿಯನ್ನು ಕೂರಿಸಿಕೊಂಡು ಸುಂಯ್‌ ಅಂತ ಹಾರಿ ಹೋಗ್ತೀನೆ’ ಅಂದಾಗ, ಅಜ್ಜಿ “ಮತ್ತೆ ನನ್ನನ್ನೇ ಬಿಟ್ಯಲ್ಲೇ’ ಎಂದರು. “ಅಯ್ಯೋ ಅಜ್ಜೀ, ಅಲ್ಲಿಯವರೆಗೂ ನೀನು ಬದುಕಿರಬೇಕಲ್ಲಾ!’ ಎಂದು ಹೇಳುವುದೇ? ಈಗಿನ ಕಾಲದ ಮಕ್ಕಳ ಬುದ್ಧಿಮತ್ತೆಗೆ ಹ್ಯಾಟ್ಸ್‌ ಆಫ್ ಹೇಳಬೇಕೋ, ತಲೆ ಚಚ್ಚಿಕೊಳ್ಳಬೇಕೋ?

ಹೆಣ್ಣುಮಕ್ಕಳಿಗೆ ಸುರಕ್ಷತೆಯ ದೃಷ್ಟಿಯಿಂದ ಸಾಮಾನ್ಯವಾಗಿ ಹೇಳುವ ಬುದ್ಧಿವಾದದ ಸಾಲುಗಳೂ ಒಮ್ಮೊಮ್ಮೆ ತಿರುಗುಬಾಣವಾಗಿ ವಕ್ಕರಿಸುತ್ತವೆ. ಹೊರಗೆ ಹೋದಾಗ ಯಾರು ಏನು ಕೊಟ್ಟರೂ ತಿನ್ನಬಾರದು, ಯಾರ ಮನೆಯಲ್ಲಾದರೂ ಆಂಟಿಗಳಿದ್ದರಷ್ಟೇ ಒಳಗೆ ಹೋಗಬೇಕು, ಬರೀ ಅಣ್ಣಾಗಳಿದ್ದರೆ ಹೋಗಬಾರದು, ಎಂಬ ಬುದ್ಧಿವಾದಕ್ಕೆ ಸರಿಯಾಗಿ, ಅವರ ಮನೆಗೆ ಹೋಗಿ ಕಾಂಪೌಂಡಿನ ಹತ್ತಿರ ಇಣುಕಿ ಎಲ್ಲರಿಗೂ ಕೇಳುವ ಹಾಗೆ “ಮಮ್ಮಿà, ಇವರ ಮನೆಯಲ್ಲಿ ಚಾಕೊಲೇಟ್‌ ಕೊಡುತ್ತಿದ್ದಾರೆ ತಿನಾÉ?’ ಎಂದೋ ಅಥವಾ “ಮಮ್ಮಿà, ಅಣ್ಣಾಗಳು ಇಲ್ಲಾ ಬರೀ ಆಂಟಿ ಇದ್ದಾರೆ ಹೋಗ್ಲಾ?’ ಎಂದೋ ಒದರಿದಾಗ ಮೂರು ಕಾಸಿಗೆ ಮಾನ ಹರಾಜು!  ಕೆಲವೊಮ್ಮೆ ಅತಿ ತುಂಟಾಟಕ್ಕೆ ಹೊಡೆತ ತಿಂದು ಚೀರಾಡುವುದಕ್ಕೆ ಪಕ್ಕದ ಮನೆಯವರು ಎಷ್ಟೋ ಸಲ ಬಿಡಿಸಿಕೊಂಡು ಹೋಗಿದ್ದುಂಟು. 

ಈ ಮಕ್ಕಳ ತುಂಟತನದಿಂದ ಆಗುವ ಪೇಚಾಟಗಳನ್ನು ನೋಡಿದಾಗ, ನಾವು ಬಾಲ್ಯದಲ್ಲಿ ಅಮ್ಮನನ್ನು ಪೇಚಿಗೆ ಸಿಲುಕಿಸಿದ್ದು ನೆನಪಾಗುತ್ತದೆ. ಕೂಡು ಕುಟುಂಬವಾದ್ದರಿಂದ ನಮ್ಮಪ್ಪ ಮನೆಯವರಿಗೆ ಸುಳ್ಳು ಹೇಳಿ ಅಮ್ಮನನ್ನು, ನಮ್ಮನ್ನು ಸಿನಿಮಾಕ್ಕೋ, ಹೋಟೆಲ್‌ಗೋ ಅಥವಾ ಹೊಸ ಸೀರೆ ಕೊಡಿಸುವುದಕ್ಕೋ ಕರೆದೊಯ್ದಾಗ, ಮನೆಯಲ್ಲಿ ಅಜ್ಜಿ ತಾತನಿಗೆ ಹೇಳಬೇಡಿ, ನಿಮಗೆ ನಾಲ್ಕಾಣೆ ಕೊಡುತ್ತೇನೆ, ಚಕ್ಕುಲಿ ಕೊಡಿಸುತ್ತೇನೆ ಎಂದು ಅಮ್ಮ ಗೋಗರೆಯುತ್ತಿದ್ದಳು.  ಮನೆಗೆ ಕಾಲಿಡುತ್ತಿದ್ದಂತೆ ನಾಯಿ ಮೂಗಿನ ಅಜ್ಜಿ, ಇದರ ಜಾಡು ಹಿಡಿದು ನಮ್ಮನ್ನು ಹೊರಗೆ ಕೂರಿಸಿ, ತಲೆ ಸವರಿ ಕಲ್ಲುಸಕ್ಕರೆ ಕೊಟ್ಟು ಎಲ್ಲಾ ವಿಷಯವನ್ನೂ ಬಹು ಸುಲಭವಾಗಿ ಕಕ್ಕಿಸುತ್ತಿದ್ದಳು. ಮರುದಿನ ಅತ್ತೆ- ಸೊಸೆಯರ ಮಹಾಭಾರತ ಶುರು! ನನಗಂತೂ ಮುದ್ದೇ ಕೋಲಿನ ಏಟು ಕಾಯಂ.

ನಮ್ಮಜ್ಜಿ ತೀರಿಹೋದಾಗ ಅಮ್ಮನೂ ಸೇರಿ ಮನೆಯ ಮೂರೂ ಸೊಸೆಯರು ಕಣ್ಣೀರಿಡುತ್ತಿದ್ದಾಗ, “ಯಾವಾಗಲೂ ಅಜ್ಜಿಯ ಜೊತೆ ಜಗಳ ಆಡುತ್ತಿದ್ದಿರಿ, ಈಗ್ಯಾಕೆ ಅಳುತ್ತಿದ್ದೀರಿ?’ ಎಂದು ಕೇಳಿ, ತ್ರಿಮೂರ್ತಿಗಳ ಉರಿಗಣ್ಣಿಗೆ ತುತ್ತಾಗಿದ್ದೆ.

ನಳಿನಿ ಟಿ. ಭೀಮಪ್ಪ

Advertisement

Udayavani is now on Telegram. Click here to join our channel and stay updated with the latest news.

Next