ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನೀಡಿರುವ ದೂರಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸಿಬಿಗೆ ದೂರು ನೀಡಿರುವ ವ್ಯಕ್ತಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿಯೇ ಷಡ್ಯಂತ್ರ ನಡೆಯುತ್ತಿದೆ. ಬಿಎಸ್ ವೈ ವಿರುದ್ಧ ಬಿಜೆಪಿಯವರೇ ದೂರು ದಾಖಲಿಸಿದ್ದಾರೆ.
ದೂರುದಾರನಿಗೆ ಬಿಜೆಪಿ ನಾಯಕರ ಜತೆ ಸಂಬಂಧ ಇದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು. ಎಸಿಬಿ ಅಧಿಕಾರಿಗಳು ಕೆಎಎಸ್ ಅಧಿಕಾರಿಯನ್ನು ವಿಚಾರಣೆಗೆ ಕರೆಯುವುದು ಸಾಮಾನ್ಯ, ಪ್ರಕರಣದಲ್ಲಿ ಆರೋಪಿಯಾದವರನ್ನು ವಿಚಾರಣೆಗೆ ಕರೆಯುವುದು ಸಹಜ. ಈ ಬಗ್ಗೆ ಬಸವರಾಜೇಂದ್ರ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದ ಬಗ್ಗೆ ವಿಚಾರಣೆಯಾಗಲಿ. ಸತ್ಯ ಇದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆರೋಪ ಸತ್ಯಕ್ಕೆ ದೂರ: ಯಡಿಯೂರಪ್ಪ ವಿರುದಟಛಿ ಡಿ ನೋಟಿಫಿಕೇಷನ್ ಪ್ರಕರಣ ದಾಖಲಿಸುವಲ್ಲಿ ರಾಜ್ಯ ಸರ್ಕಾರದ ಒತ್ತಡವಿದೆ ಎಂಬ ಆರೋಪ ಸತ್ಯಕ್ಕೆ ದೂರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದ್ದಾರೆ. ಖಾಸಗಿ ವ್ಯಕ್ತಿ ಎಸಿಬಿಗೆ ದೂರು ಸಲ್ಲಿಸಿದ್ದರೆ, ಸರ್ಕಾರಕ್ಕೂ ಅದಕ್ಕೂ ಸಂಬಂಧ ಕಲ್ಪಿಸವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಬಂಧನಕ್ಕೆ ಆಗ್ರಹ: ಡಾ.ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಎಲ್ಲ ಐವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ಜನ ಸಾಮಾನ್ಯರ ವೇದಿಕೆ ಅಧ್ಯಕ್ಷ ಡಾ. ಡಿ.ಅಯ್ಯಪ್ಪ ಒತ್ತಾಯಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಇದೀಗ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಡಿನೋಟಿಫೈ ಮಾಡಿಲ್ಲ ಎಂದು ವಾದಿಸುವ ಯಡಿಯೂರಪ್ಪ, ತಮ್ಮ ವಿರುದ್ಧ ಯಾರೇ ದೂರು ನೀಡಿದರೂ ಕೋರ್ಟ್ ಮೊರೆ ಹೋಗುತ್ತಾರೆ. ಅಕ್ರಮದಲ್ಲಿ ಭಾಗಿ ಆಗಿಲ್ಲ ಎಂದಾದರೆ ಎಸಿಬಿ ವಿಚಾರಣೆ ಎದುರಿಸಲಿ. ಮತ್ತೂಂದೆಡೆ ತಮ್ಮ ಪರ ವಕೀಲರನ್ನು ಎಸಿಬಿ ಕಳುಹಿಸಿ ದಾಖಲೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು.